Top

ಕದಿಯುವ ಮನಸ್ಸು ಕುದಿಯುವ ಕನಸು


Asianet News Saturday 16 July 2016 09:09 am IST Film Review
ಕದಿಯುವ ಮನಸ್ಸು ಕುದಿಯುವ ಕನಸು
16 Jul

ಚಿತ್ರ: ಭುಜಂಗ
ಭಾಷೆ: ಕನ್ನಡ
ತಾರಾಗಣ: ಪ್ರಜ್ವಲ್ ದೇವರಾಜ್, ಮೇಘನಾ ರಾಜ್, ಸಂತೋಷ್, ಸಾಧು ಕೋಕಿಲ, ಬುಲೆಟ್ ಪ್ರಕಾಶ್, ಚಿತ್ರಾ ಶೆಣೈ, ಕುರಿ ಪ್ರತಾಪ್
ನಿರ್ದೇಶನ: ಜೀವಾ
ನಿರ್ಮಾಣ: ವರುಣಾ ಮಹೇಶ್
ಸಂಗೀತ: ಪೂರ್ಣಚಂದ್ರ ತೇಜಸ್ವಿ
ಛಾಯಾಗ್ರಹಣ: ಗುಂಡ್ಲುಪೇಟೆ ಸುರೇಶ್

- ದೇಶಾದ್ರಿ ಹೊಸ್ಮನೆ

ಅವನೊಬ್ಬ ಚತುರ ಕಳ್ಳ. ರಾತ್ರಿ ಮನೆಗಳಿಗೆ ನುಗ್ಗಿ ಕದಿಯುವುದೇ ಆತನ ಕಾಯಕ. ಒಂದು ದಿನ ಕದಿಯುವುದಕ್ಕಾಗಿ ಮನೆಯೊಂದಕ್ಕೆ ಹೋದವನಿಗೆ ಚೆಂದದ ಹುಡುಗಿಯ ದರ್ಶನ ಆಗುತ್ತದೆ. ಆಕೆಯ ಕೊರಳಿನ ಸರ ಕದಿಯುವಾಗ ತನ್ನ ಹೃದಯವನ್ನೇ ಕಳೆದುಕೊಳ್ಳುತ್ತಾನೆ. ಮುಂದೆ ಚಿನ್ನದ ಸರ ಪರಸ್ಪರ ಪರಿಚಯಕ್ಕೆ ಕಾರಣವಾಗುತ್ತದೆ. ಈ ಪರಿಚಯ ಪ್ರೀತಿಗೆ ತಿರುಗುತ್ತದೆ. ಆದರೆ ಅವನೊಬ್ಬ ಕಳ್ಳ, ಆಕೆ ಮಾತ್ರ ಶ್ರೀಮಂತ ಕುಟುಂಬದ ಹುಡುಗಿ. ಇಬ್ಬರ ನಡುವೆ ವರ್ಗ ತಾರತಮ್ಯ. ಸಹಜವಾಗಿಯೇ ಆಕೆಯ ಪ್ರೀತಿಗೆ ಮನೆಯವರ ವಿರೋಧ. ಇಷ್ಟಾಗಿಯೂ ಅವರ ಪ್ರೀತಿ ಗೆಲ್ಲುತ್ತೋ, ಇಲ್ಲವೋ ಎನ್ನುವುದು ‘ಭುಜಂಗ’ದ ಒನ್‌ಲೈನ್ ಕುತೂಹಲ.

ಪ್ರಜ್ವಲ್ ದೇವರಾಜ್ ಹಾಗೂ ಮೇಘನಾ ರಾಜ್ ಈ ಚಿತ್ರದ ಪ್ರಮುಖ ಆಕರ್ಷಣೆ. ಇವರಿಬ್ಬರ ಪೈಕಿ ಪ್ರಜ್ವಲ್ ಪಾಲಿಗಂತೂ ಇದು ಮಹತ್ವ ಪಡೆದಿದ್ದು ೨೫ನೇ ಚಿತ್ರ ಎನ್ನುವ ಕಾರಣಕ್ಕೆ. ಯಾಕೆಂದ್ರೆ, ನಟನೊಬ್ಬನ ಸಿನಿಜರ್ನಿಗೆ ೨೫, ೫೦ ಅಥವಾ ೧೦೦ನೇ ಚಿತ್ರ ಎನ್ನುವುದು ಮೈಲುಗಲ್ಲು. ಪ್ರೇಕ್ಷಕರು ಕೂಡ ಅದೇ ಕಾರಣಕ್ಕೆ ಇಂಥ ಚಿತ್ರಗಳ ಮೇಲೆ ಇನ್ನಿಲ್ಲದೆ ನಿರೀಕ್ಷೆ ಇಟ್ಟುಕೊಳ್ಳುವುದು ಕನ್ನಡದ ಮಟ್ಟಿಗೆ ರೂಢಿಗತ. ‘ಭುಜಂಗ’ ಈ ಕಾರಣಕ್ಕೆ ಗಾಂಧಿನಗರದಲ್ಲಿ ಸಾಕಷ್ಟು ಕುತೂಹಲ ಮೂಡಿಸಿತ್ತು. ಅಂಥದ್ದೇ ನಿರೀಕ್ಷೆ ಮತ್ತು ಕುತೂಹಲದೊಂದಿಗೆ ಚಿತ್ರಮಂದಿರಕ್ಕೆ ಬಂದ ಪ್ರೇಕ್ಷಕನಿಗೆ ಈ ಚಿತ್ರದಲ್ಲಿ ತಾಜಾತನದ ಅನುಭವ ಸಿಗದಿದ್ದರೂ, ಮನರಂಜನೆಗಂತೂ ಮೋಸವಿಲ್ಲ. ಆ ಮಟ್ಟಿಗೆ ಇಲ್ಲಿ ನಿರ್ದೇಶಕ ಜೀವಾ ಸೇಫ್ ಆದಂತಾಗಿದೆ.

ಕತೆಯ ವಿಚಾರಕ್ಕೆ ಬಂದರೆ ಹೊಸತನವೇನಿಲ್ಲ. ಕೆಳ ವರ್ಗದ ಹುಡುಗನೊಬ್ಬ, ಶ್ರೀಮಂತ ಕುಟುಂಬದ ಹುಡುಗಿಯನ್ನು ಪ್ರೀತಿಸುವುದು, ಅದಕ್ಕೆ ಹುಡುಗಿ ಮನೆಯವರು ವಿರೋಧಿಸುವುದು, ಇನ್ನೇನು ಹುಡುಗಿ ಮನೆಯವರು ಮದುವೆಗೆ ತಯಾರಿ ನಡೆಸುವಾಗ ಪ್ರೇಮಿಗಳು ಮನೆಯಿಂದ ಪರಾರಿಯಾಗಲು ಯತ್ನಿಸುವ ಹಾಗೂ ಮರಸುತ್ತುವ ಲವ್ ಸ್ಟೋರಿಗಳು ಬೇಕಾದಷ್ಟು ಬಂದುಹೋಗಿವೆ. ಇಲ್ಲೂ ಹಾಗೆಯೇ. ನಾಯಕ, ನಾಯಕಿಯ ನಡುವಿನ ಪ್ರೀತಿಯ ಚಿತ್ರಣ ಇದಕ್ಕಿಂತ ಭಿನ್ನವಿಲ್ಲ.

ನಾಯಕ ಕಳ್ಳ, ಜತೆಗೆ ಸ್ಲಂನಲ್ಲಿ ಬೆಳೆದವ. ಇದಕ್ಕೆ ತದ್ವಿರುದ್ಧ ಎನ್ನುವಂತೆ ನಾಯಕಿ ಶ್ರೀಮಂತ ಕುಟುಂಬದಲ್ಲಿ ಹುಟ್ಟಿ ಬೆಳೆದ ವಿದ್ಯಾವಂತೆ. ಇವರಿಬ್ಬರೂ ಪ್ರೀತಿಸಿ, ಆ ಪ್ರೀತಿಯನ್ನು ಉಳಿಸಿಕೊಳ್ಳುವುದಕ್ಕಾಗಿ ಪರದಾಡುವುದು, ಕೊನೆಗೆ ಕಳ್ಳರಿಗೆ ಸಿಂಹಸ್ವಪ್ನವಾಗುವ ಪೊಲೀಸ್ ಇನ್‌ಸ್ಪೆಕ್ಟರೊಬ್ಬರು ಅವರ ಪ್ರೀತಿಗೆ ನೆರಳಾಗುವುದು ಮಾತ್ರ ಚಿತ್ರದಲ್ಲಿ ಕಾಣುವ ತಾಜಾತನ. ಪ್ರೇಕ್ಷಕರ ರಂಜನೆಗೆ ಇದಷ್ಟೇ ಕಾರಣವಾಗುವ ಕತೆಯ ಓಟ, ಪ್ಯಾಸೆಂಜರ್ ರೈಲು ನೆನಪಿಸಿದರೂ ಅಚ್ಚರಿಯಿಲ್ಲ.

ಇದೇ ಮೊದಲ ಬಾರಿಗೆ ಉದ್ದನೆ ಗಡ್ಡ ಬಿಟ್ಟು ಕಳ್ಳನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪ್ರಜ್ವಲ್, ಅಭಿನಯದಲ್ಲಿ ಲವಲವಿಕೆ ಇದೆ. ಆದರೆ, ಅವರ ದೇಹಾಕೃತಿ ಮಾತ್ರ ಹೆಚ್ಚಾದಂತೆ ಎನಿಸುತ್ತದೆ. ಮಾಸ್ ಮಾದ ಸೃಷ್ಟಿಸಿರುವ ಸಾಹಸದ ಸನ್ನಿವೇಶಗಳಲ್ಲಿ ಪ್ರಜ್ವಲ್ ಅರ್ಭಟಿಸಿದ್ದರಾದರೂ, ಕೆಲವೊಮ್ಮೆ ನೈಜತೆ ಮೀರುವ ಅತಿರೇಕಗಳು ಕಿರಿಕಿರಿ ಉಂಟುಮಾಡುತ್ತವೆ. ನಾಯಕಿ ಮೇಘನಾ ರಾಜ್ ಅಭಿನಯ ಹಿಡಿಸುತ್ತದೆ. ನಟನೆಯಲ್ಲಿ ಅವರು ಪಳಗುತ್ತಿದ್ದಾರೆನ್ನುವುದಕ್ಕೆ ಇಲ್ಲಿನ ಅಭಿನಯ ಸಾಕ್ಷಿ ಆಗುತ್ತದೆ.

ಭುಜಂಗನ ಸ್ನೇಹಿತನಾಗಿ ಬುಲೆಟ್ ಪ್ರಕಾಶ್, ಪೊಲೀಸ್ ಇನ್‌ಸ್ಪೆಕ್ಟರ್ ಪಾತ್ರದಲ್ಲಿ ಸಂತೋಷ್, ನಾಯಕನ ತಾಯಿಯಾಗಿ ಪದ್ಮಾವಾಸಂತಿ, ನಾಯಕಿ ತಾಯಿಯಾಗಿ ಚಿತ್ರಾಶೆಣೈ ಮತ್ತಿತರರ ಅಭಿನಯ ಕಡೆಗಣಿಸುವಂತಿಲ್ಲ. ಸಾಧು ಕೋಕಿಲ ಹಾಸ್ಯ ಪ್ರೇಕ್ಷಕನಿಗೆ ಕಚಗುಳಿ ಇಡುತ್ತದೆ. ಆದರೆ, ಕತೆಗೂ ಸಾಧು ಕೋಕಿಲ ಬಂದು ಹೋಗುವುದಕ್ಕೂ ಕನೆಕ್ಷನ್ ಇಲ್ಲ. ಚಿತ್ರಕ್ಕೆ ತಾವೇ ಸಾಹಿತ್ಯ ಬರೆದು ಸಂಗೀತ ನಿರ್ದೇಶನ ನೀಡಿದವರು ಪೂರ್ಣಚಂದ್ರ ತೇಜಸ್ವಿ. ಯಾವುದೇ ಹಾಡು ಕಾಡಿಸದಿದ್ದರೂ, ಪ್ಯಾಸೆಂಜರ್ ರೈಲಿನಂತೆ ಓಡುವ ಕತೆಯ ಓಟದ ನಡುವೆ ರಿಲ್ಯಾಕ್ಸ್ ನೀಡುತ್ತವೆ. ಗುಂಡ್ಲುಪೇಟೆ ಸುರೇಶ್ ಛಾಯಾಗ್ರಹಣ ಪರವಾಗಿಲ್ಲ.

(ರೇಟಿಂಗ್ 3)

 Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!