Top

ಕೇಳಿದ್ದು ನೀರ್'ದೋಸೆ, ಕೊಟ್ಟಿದ್ದು ಮಸಾಲೆ ದೋಸೆ!


Asianet News Saturday 03 September 2016 03:15 pm IST Film Review
ಕೇಳಿದ್ದು ನೀರ್'ದೋಸೆ, ಕೊಟ್ಟಿದ್ದು ಮಸಾಲೆ ದೋಸೆ!
03 Sep

ನಿರ್ದೇಶನ: ವಿಜಯ್ ಪ್ರಸಾದ್

ಛಾಯಾಗ್ರಹಣ: ಸುಜ್ಞಾನ್

ಸಂಗೀತ: ಅನೂಪ್ ಸಿಳೀನ್

ನಿರ್ಮಾಣ: ಎಸ್ ಪ್ರಸನ್ನ, ಎಸ್ ಶಶಿಕಲಾ ಬಾಲಾಜಿ

ಸಂಕೇತ್ ಗುರುದತ್

ರಂಜನೆ, ಪ್ರಚೋದನೆ, ಬೋಧನೆ. ವಿಜಯ್ ಪ್ರಸಾದ್ ನಿರ್ದೇಶನದ ಬಹುನಿರೀಕ್ಷಿತ ‘ನೀರ್‌ದೋಸೆ’ ಬಗ್ಗೆ ಇಷ್ಟು ಅಂದುಕೊಳ್ಳಬಹುದು. ರಂಜನೆ ಅಂತ ಬಂದ್ರೆ ಅಲ್ಲಿ ಕಚಗುಳಿ ಇಡುವ ಮಾತುಗಳಿವೆ. ಪ್ರಚೋದನೆಗೆ ಹರಿಪ್ರಿಯ ಅವರ ಹಾಟ್ ಹಾಟ್ ದೃಶ್ಯಗಳಿವೆ. ಬೋಧನೆಗೆ ಅಂತ ಬಂದ್ರೆ ಸಮಾಜದ ವಿವಿಧ ಸ್ತರಗಳಿಂದ ಬಂದ ಅಲ್ಲಿನ ನಾಲ್ಕು ಪಾತ್ರಗಳಿಗೂ ಭಾವನೆಗಳಿವೆ. ಏನೇ ಆದ್ರೂ ಪ್ರತಿಯೊಬ್ಬರೂ ಮುಖವಾಡ ಕಳಚಿ ಬದುಕಿದಾಗ ಸಿಗುವ ಸುಖ, ಮುಖವಾಡ ಹಾಕಿಕೊಂಡು ಬದುಕೋದ್ರಲ್ಲಿ ಸಿಗೋದಿಲ್ಲ ಎನ್ನುವ ಫಿಲಾಸಫಿ ಇದೆ. ಆ ಮಟ್ಟಿಗೆ ನೀರ್‌ದೋಸೆ ಎನ್ನುವುದು ಬರೀ ಹೋಟೆಲ್‌ನಲ್ಲಿ ಸಿಗುವ ಮೆನು ಆಗದೆ, ಮನಸ್ಸುಗಳನ್ನು ಕಟ್ಟುವ ಅಸ್ತ್ರವೂ ಆಗಿದ್ದೇ ಈ ಚಿತ್ರದ ವಿಶೇಷ.

ಮಹಾನಗರ ಪಾಲಿಕೆಯಲ್ಲಿ ಹೆಣ ಸಾಗಿಸುವ ವ್ಯಾನ್ ಚಾಲಕನಾಗಿ ಜಗ್ಗೇಶ್, ಲೋಕೋಪಯೋಗಿ ಇಲಾಖೆಯ ನಿವೃತ್ತ ನೌಕರ ದತ್ತಾತ್ರೇಯನಾಗಿ ದತ್ತಣ್ಣ, ಕಾಲ್‌ಗರ್ಲ್ ಕುಮುದಾ ಪಾತ್ರದಲ್ಲಿ ಹರಿಪ್ರಿಯ, ಮೂಲ ನಕ್ಷತ್ರದಲ್ಲಿ ಹುಟ್ಟಿದ ತರುಣಿ ಶಾರದಾ ಮಣಿ ಪಾತ್ರದಲ್ಲಿ ಸುಮನ್ ರಂಗನಾಥ್. ಹೀಗೆ ನಾಲ್ಕು ಪಾತ್ರಗಳಿಗೂ ವಿಭಿನ್ನವಾದ ಹಿನ್ನೆಲೆ. ಈ ಪಾತ್ರಗಳು ವಿವಿಧ ಕಾರಣಕ್ಕೆ ಮುಖಾಮುಖಿಯಾಗಿ ಕತೆ ಸಾಗುತ್ತದೆ. ವಿಭಿನ್ನ ಸ್ತರವನ್ನು ಪ್ರತಿನಿಧಿಸುವ ನಾಲ್ಕು ಪಾತ್ರಗಳ ಬಿಡಿ ಬಿಡಿ ಕತೆಗಳ ಮೂಲಕ ಮನುಷ್ಯ ಮುಖವಾಡ ಕಳಚಿದರೆ ಎಲ್ಲವೂ ಶೂನ್ಯ ಎಂದು ನಿರೂಪಿಸಲು ನಿರ್ದೇಶಕರು ಈ ಕತೆಯನ್ನು ಹೆಣೆದಿದ್ದಾರೆ. ಇಲ್ಲಿ ಪಾತ್ರಗಳು ಹೆಚ್ಚು ಮಾತಾಡುತ್ತವೆ. ಅವೆಲ್ಲವೂ ಆಣಿಮುತ್ತುಗಳಂತಿರದೇ ಹರಿತ ಮೊಳೆಯಂತೆಯೂ ಚುಚ್ಚುತ್ತವೆ.

ಹಸಿ ಹಸಿಯಾದ ಮಾತುಗಳನ್ನು ಎಲ್ಲಾ ಪಾತ್ರಗಳ ಬಾಯಿಯಲ್ಲಿ ಹೇಳಿಸಿದ್ದಾರೆ. ನೋಡುಗನ ಕಿವಿ ಕಣ್ಣುಗಳೆರಡು ತುಂಬಿ ಬಿಡುವಷ್ಟು ಮಾತುಗಳಿವೆ, ದೃಶ್ಯಗಳಿವೆ. ಪ್ರೇಕ್ಷಕ ಮೈಮರೆತರೆ ಡೈಲಾಗ್ ಮಿಸ್ ಆಗುತ್ತವೆ. ಹಾಗೆಯೇ ದೃಶ್ಯವೂ ಮಿಸ್. ಆದರೆ ಸೀಟಿನ ಕೊನೆಯಲ್ಲಿ ಕೂತು ಏನೆಲ್ಲವನ್ನೂ ಕೇಳಿಸಿಕೊಳ್ಳುವ ತವಕದಲ್ಲಿ ಹಾಗೂ ಕಣ್ತುಂಬಿಕೊಳ್ಳಲು ತವಕಿಸುವ ಪಡ್ಡೆಗಳಿಗೆ ಸೀಟಿಗೆ ಒರಗಿ ರಿಲ್ಯಾಕ್ಸ್ ಆಗಲೂ ನಿರ್ದೇಶಕರು ಟೈಮ್ ಕೊಟ್ಟಿದ್ದಾರೆ. ದತ್ತಣ್ಣ ಹಾಗೂ ಜಗ್ಗೇಶ್ ಇಬ್ಬರೂ ಕುಮುದಾಳ ಹಿಂದೆ ಬೀಳುವುದು, ಈ ಇಬ್ಬರ ವರ್ತನೆಗಳು ತನ್ನ ಶಾಲಾ ದಿನಗಳ ನೆನಪನ್ನು ತರುವ ಫ್ಲಾಷ್‌ಬ್ಯಾಕ್‌ಗಳು ಪಡ್ಡೆಗಳಿಗೆ ಬೇಕಿತ್ತಾ ಎನ್ನಿಸುವಷ್ಟು ಹೊತ್ತು ಓಡುತ್ತವೆ, ಕಾಡುತ್ತವೆ.

ಕತೆಗೆ ತಿರುವು ಸಿಗುವುದು ಅಲ್ಲಿಯೇ ಎನ್ನುವ ಭಾವನೆ ನಿರ್ದೇಶಕರಿಗೆ ಇದ್ದಂತಿದೆ. ಆದರೆ ಅದೇ ತಂತ್ರ ಇಲ್ಲಿ ನೋಡುಗನಿಗೆ ಕೊಂಚ ಬೋರ್ ತರಿಸುತ್ತದೆ. ಜಗ್ಗೇಶ್ ಕುಮಾರ್ ತಂದೆಯ ಸಾವಿನ ಫ್ಲ್ಯಾಷ್‌ಬ್ಯಾಕ್ ದೃಶ್ಯಗಳಲ್ಲೂ ಸಾಕಷ್ಟು ಗಹನವಾದ ವಿಷಯಗಳನ್ನು ನಿರ್ದೇಶಕರು ಹೇಳಿದ್ದರೂ ಅದೆಲ್ಲಾ ಜಗ್ಗೇಶ್‌ಪ್ರಿಯರಿಗೆ ಬೇಕಿತ್ತಾ? ಎನಿಸಬಹುದು. ಬಹುಶಃ ಈ ದೃಶ್ಯಗಳು ಕನ್ನಡದ ಯಾವುದೇ ಸಿನಿಮಾಗಳಲ್ಲೂ ಬಳಸಿಲ್ಲವೆನ್ನುವಷ್ಟರ ಮಟ್ಟಿಗೆ ವಿಭಿನ್ನವಾಗಿದೆ. ಹೆಣ ಸಾಗಿಸುವ ವಾಹನದ ಚಾಲಕ ಹೀರೋ ಆಗಿರುವುದರಿಂದ ಇಲ್ಲಿ ಆ ವಾಹನವನ್ನೂ ಹಾಗೂ ಸ್ಮಶಾನವನ್ನೂ ಢಾಳಾಗಿಯೇ ಬಳಸಿಕೊಳ್ಳಲಾಗಿದೆ. ಸ್ಮಶಾನದಲ್ಲಿ ಚಿತ್ರಿಸಿರುವ ಹಾಡಲ್ಲೂ ಅದನ್ನು ದುಡಿಸಿಕೊಂಡಿದ್ದಾರೆ.

ಕಾಮ, ಪ್ರೀತಿಗಳನ್ನು ವಿಭಿನ್ನವಾಗಿ ನಿರೂಪಿಸಿರುವ ಈ ಚಿತ್ರದಲ್ಲಿ ಎಲ್ಲವೂ ಹೆಚ್ಚಾಗಿಯೇ ಇದೆ. ಪಡ್ಡೆಗಳ ಹೃದಯವನ್ನು ಹಗುರಾಗಿಸಲು ಕುಮುದಾ ಪಾತ್ರವಿದೆ. ಪ್ರೀತಿಗಾಗಿ ‘ಲವ್ ಅಟ್ ಫಸ್ಟ್‌ಸೈಟ್’ ಎನ್ನಲು ಶಾರದಾ ಮಣಿ ಪಾತ್ರವಿದೆ. ಆ ಪಾತ್ರವೂ ಸಹವಾಸದಿಂದ ಕೆಟ್ಟಂತೆ ಡೈಲಾಗ್ ಹೊಡೆಯುತ್ತದೆ. ಅಂತಿಮವಾಗಿ ಮನುಷ್ಯ ಒಬ್ಬನೆ ಎನ್ನುವುದನ್ನೇ ಕತೆ ಹೇಳುವ ಉದ್ದೇಶ ಎಲ್ಲೋ ಒಂದು ಕಡೆ ಗಟ್ಟಿತನ ಕಳೆದುಕೊಂಡಿದೆ. ಪಡ್ಡೆಗಳಿಗೆ ಇಷ್ಟವಾಗುವ ಹಾಗೆ ಪೋಲಿ ಮಾತುಗಳನ್ನೇ ಸಂಭಾಷಣೆಯ ರೂಪವಾಗಿಸಿದ್ದು ನಗಿಸುತ್ತದೆಯಾದರೂ, ಎಲ್ಲೋ ಒಂದು ಕಡೆ ಅದೇ ಕಥೆಯ ಉದ್ದೇಶವನ್ನು ಹಗುರವಾಗಿಸಿದೆ.

ಜಗ್ಗೇಶ್, ದತ್ತಣ್ಣ, ಹರಿಪ್ರಿಯ, ಸುಮನ್ ರಂಗನಾಥ್ ಎಲ್ಲರೂ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ವಿಶೇಷವಾಗಿ ಜಗ್ಗೇಶ್ ಹಾಗೂ ದತ್ತಣ್ಣ ಕೆಮಿಸ್ಟ್ರಿ ವರ್ಕೌಟ್ ಆಗಿದೆ. ಹರಿಪ್ರಿಯ ಇದೇ ಮೊದಲ ಬಾರಿಗೆ ಇಷ್ಟು ಬೋಲ್ಡ್ ಆದ ಪಾತ್ರದಲ್ಲಿ ಕಾಣಿಸಿಕೊಂಡರೂ ಹಾಟ್ ದೃಶ್ಯಗಳ ಮೂಲಕ ಪಡ್ಡೆಗಳಿಗೆ ಬಿಸಿ ಮುಟ್ಟಿಸುತ್ತಾರೆ. ಹಾಟ್ ಸನ್ನಿವೇಶಗಳಲ್ಲಿ ಮಾತ್ರವಲ್ಲದೆ, ಸೆಂಟಿಮೆಂಟ್ ಸನ್ನಿವೇಶಗಳಲ್ಲೂ ನೋಡುಗನ ಮನ ಮುಟ್ಟುತ್ತಾರೆ. ಇದುವರೆಗೂ ಐಟಂ ಸಾಂಗ್‌ಗಳಿಗೆ ಮಾತ್ರ ಎನ್ನುವಂತಿದ್ದ ಸುಮನ್ ರಂಗನಾಥ್ ಅವರನ್ನು ಒಂದು ರೀತಿ ಡಿಗ್ಲಾಮ್ ಪಾತ್ರಕ್ಕೆ ತಂದಿರುವ ನಿರ್ದೇಶಕರ ಪ್ರಯತ್ನ ಫಲ ನೀಡಿದೆ. ಸುಮನ್ ಚಿತ್ರದ ಉದ್ದಕ್ಕೂ ಲವಲವಿಕೆಯಿಂದಲೇ ಅಭಿನಯಿಸಿದ್ದಾರೆ.

ಬಹುತೇಕ ದ್ವಂದ್ವಾರ್ಥದ ಮಾತುಗಳ ನಡುವೆ ಸಂಗೀತ ಹೆಚ್ಚು ಪ್ರಾಮುಖ್ಯತೆ ಪಡೆಯದಿದ್ದರೂ ಇರುವ ಸ್ಪೇಸ್‌ನಲ್ಲಿಯೇ ಅನೂಪ್ ಆಪ್ತವಾಗುತ್ತಾರೆ. ಸುಜ್ಞಾನ ಅವರ ಕ್ಯಾಮೆರಾಗಳ ಆ್ಯಂಗಲ್ ಹಾಟ್ ಆಗಿದೆ. ಒಟ್ಟಿನಲ್ಲಿ ಸಿದ್ಲಿಂಗು ನಂತರದ ನಾಲ್ಕು ವರ್ಷಗಳಲ್ಲಿ ಪ್ರೇಕ್ಷಕನ ಮುಂದೆ ಬಂದ ವಿಜಯ್ ಪ್ರಸಾದ್, ತಮ್ಮ ಮಾತಿನ ವರಸೆಯಲ್ಲಿಯೇ ನೀರ್‌ದೋಸೆಯನ್ನು ತಿನ್ನುವಷ್ಟು ರುಚಿಯಾಗಿ ಪ್ರೇಕ್ಷಕನ ಮುಂದಿಟ್ಟಿದ್ದು ಹೌದು. ಆದರೂ ಇದು ಬಿಸಿ ಇದ್ದಾಗಲೇ ತಿನ್ನಲಡ್ಡಿಯಿಲ್ಲ.

-ಕನ್ನಡಪ್ರಭFollow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!