Top

ಅಲೆಮಾರಿ ಹುಡುಗನ ಪ್ರೀತಿಯ ದಿನಚರಿ


Asianet News Saturday 27 August 2016 05:17 pm IST Film Review
ಅಲೆಮಾರಿ ಹುಡುಗನ ಪ್ರೀತಿಯ ದಿನಚರಿ
27 Aug

ಭಾಷೆ: ಕನ್ನಡ

ತಾರಾಗಣ: ಸಚಿನ್, ಸಂಸ್ಕೃತಿ ಶೆಣೈ, ಅಚ್ಯುತ್ ಕುಮಾರ್, ರಾಜೇಶ್ ನಟರಂಗ್, ಚಿಕ್ಕಣ್ಣ, ರವಿಕಾಳೆ, ನೀನಾಸಂ ಅಶ್ವತ್ಥ್, ಶ್ರೀನಗರ ಕಿಟ್ಟಿ, ಅಂಬರೀಶ್, ಭಾನುಮತಿ

ನಿರ್ದೇಶನ: ಮಹೇಶ್ ಸುಖಧರೆ

ನಿರ್ಮಾಣ: ಚೆಲುವರಾಯಸ್ವಾಮಿ

ಛಾಯಾಗ್ರಾಹಣ: ಸುರೇಶ್ ಜಯಕೃಷ್ಣ

ಸಂಗೀತ: ವಿ ಹರಿಕೃಷ್ಣ

-ಆರ್ ಕೇಶವಮೂರ್ತಿ

ಒಂದು ಸಿನಿಮಾ ಬಿಡುಗಡೆಗೂ ಮುನ್ನವೇ ಆ ಚಿತ್ರದ ಕುರಿತು ನಿರ್ದೇಶಕರು ಸಾಕಷ್ಟು ಹೇಳಿಕೊಂಡಿರುತ್ತಾರೆ. ಆ ಪೈಕಿ ಬಹಳಷ್ಟು ಮಂದಿ ನಮ್ಮ ಸಿನಿಮಾ ಮಸಾಲೆ ದೋಸೆಯಂತೆ ರುಚಿಯಾಗಿರುತ್ತದೆ ಎಂದಿರುತ್ತಾರೆ. ಬಿಡುಗಡೆಯಾದ ಮೇಲೆಯೇ ಗೊತ್ತಾಗುವುದು ಅದು ‘ಖಾಲಿ’ ದೋಸೆ ಅಂತ. ಆದರೆ, ಈ ವಿಚಾರದಲ್ಲಿ ನಿರ್ದೇಶಕ ಮಹೇಶ್ ಸುಖಧರೆ ಮಾತ್ರ ಮಾತು ತಪ್ಪದ ಡೈರೆಕ್ಟರ್ ಎನಿಸಿಕೊಂಡಿದ್ದಾರೆ. ‘ಸಂಭ್ರಮ, ಸೈನಿಕದಂಥ ಹಿಟ್ ಸಿನಿಮಾಗಳನ್ನು ಕೊಟ್ಟವನು. ಮತ್ತೆ ಅಂಥ ಸಿನಿಮಾ ಮಾಡಲಿಕ್ಕೆ ಆಗಲಿಲ್ಲ. ಆ ಗೆಲುವು ಮತ್ತೊಮ್ಮೆ ಪಡೆದುಕೊಳ್ಳುವುದಕ್ಕೆ ಇಲ್ಲಿವರೆಗೂ ಸಾಧ್ಯವಾಗಿಲ್ಲ. ಆದರೆ, ಈ ಸಿನಿಮಾ ನನ್ನ ಆ ದಿನಗಳ ಸಂಭ್ರಮವನ್ನು ಮರುಕಳಿಸುತ್ತದೆ. ಅಪ್ಪಟ ಹಳ್ಳಿ ಸೊಗಡಿನ ಕತೆ’ ಎಂದು ‘ಹ್ಯಾಪಿ ಬರ್ತ್ ಡೇ’ ಬಗ್ಗೆ ಭರವಸೆಯ ಮಾತುಗಳನ್ನು ಆಡಿದ್ದರು. ಸಿನಿಮಾ ನೋಡಿದ ಮೇಲೆ ನಿರ್ದೇಶಕರು ತಮ್ಮ ಮಾತುಗಳಿಗೆ ವಂಚನೆ ಮಾಡಿಕೊಂಡಿಲ್ಲ. ಇಡೀ ಕತೆ ಹಳ್ಳಿಯ ಮಣ್ಣು ರಸ್ತೆಗಳನ್ನು ಬಿಟ್ಟು ಕಲ್ಪನೆಯ ಹೈವೇಗೆ ಜಾರುವುದೇ ಇಲ್ಲ. ಅಷ್ಟರ ಮಟ್ಟಿಗೆ ತುಂಬಾ ವರ್ಷಗಳ ನಂತರ ‘ಹ್ಯಾಪಿ ಬರ್ತ್ ಡೇ’ ಪ್ರೇಕ್ಷಕರನ್ನು ಗ್ರಾಮಾಂತರಗೊಳಿಸಿದೆ.

ಹಳ್ಳಿಯಲ್ಲಿ ನಡೆಯುವ ಮದುವೆ ಹಾಗೂ ಜಾತ್ರೆಯ ಸಂಭ್ರಮದಂತೆ ಇಡೀ ಸಿನಿಮಾ ಕಲರ್‌ಫುಲ್ ಆಗಿ ಸಾಗುತ್ತದೆ. ಮದುವೆ, ಜಾತ್ರೆಗಳು ಅಂದಮೇಲೆ ಒಂಚೂರು ಎಮೋಷನಲ್, ಸಂತೋಷ, ಕುತೂಹಲ, ಮುನಿಸು, ನಂಬಿಕೆ- ಅಪನಂಬಿಕೆ, ದ್ವೇಷ ಎಲ್ಲವೂ ಇರುತ್ತದೆ. ಈ ಎಲ್ಲವೂ ಚಿತ್ರದಲ್ಲೂ ಇವೆ. ಪಬ್ಬು, ಮಲ್ಟಿಪ್ಲೆಕ್ಸ್, ಕಾಫಿ ಡೇ, ಪಾರ್ಕ್ ಇಲ್ಲದ ಶುದ್ಧವಾದ ಈ ಪ್ರೇಮಕತೆ ನಡೆಯುವುದು ಮಂಡ್ಯ ಮತ್ತು ನಾಗಮಂಗಲ ಪರಿಸರದಲ್ಲಿ. ಕೆಲಸವಿಲ್ಲದೆ ಓಡಾಡಿಕೊಂಡಿರುವ ಸಚಿನ್‌ಗೆ ದೊಣ್ಣೆ ವರಸೆ ಪಟುವಿನ ಮಗಳು ಅಂಜು ಮೇಲೆ ಪ್ರೇಮ ವರಸೆ ಶುರುವಾಗುತ್ತದೆ. ಆಕೆಗಾಗಿ ಬೀದಿ ಅಲೆಯುತ್ತಾನೆ. ಅಲೆಮಾರಿಯನ್ನು ಪ್ರೀತಿಸಿದ ತಪ್ಪಿಗೆ ಅವನನ್ನು ಸರಿದಾರಿಗೆ ತರುವ ಪ್ರಯತ್ನ ಮಾಡುತ್ತಾಳೆ. ಆ ಪ್ರಯತ್ನದಲ್ಲಿ ಆಕೆ ಸೋಲುತ್ತಾಳೆ. ಆಕೆಯ ಸೋಲಿಗೆ ಅಪ್ಪನೇ ಕಾರಣನಾಗಿರುತ್ತಾನೆ. ನಾಯಕಿ ಅಪ್ಪನ ಮೂರು ಆಸೆಗಳಿಗಾಗಿ ತನ್ನ ಪ್ರೀತಿಯನ್ನು ಕಳೆದುಕೊಳ್ಳುವ ಸಂಕಷ್ಟಕ್ಕೆ ಸಿಲುಕುವ ಸಚಿನ್ ಸಂಕಷ್ಟಗಳು ಒಂದೆರಡಲ್ಲ. ತನ್ನ ಹುಟ್ಟು, ಪ್ರೀತಿ, ಜೀವನ ಈ ಎಲ್ಲವನ್ನೂ ಮತ್ತೊಬ್ಬ ಭಗ್ನಪ್ರೇಮಿಗೆ (ಶ್ರೀನಗರ ಕಿಟ್ಟಿ) ಹೇಳುತ್ತ ಬರುತ್ತಾನೆ. ಹಾಗಾದರೆ ಸಚಿನ್ ಕೂಡ ಭಗ್ನ ಪ್ರೇಮಿಯೇ ಎನ್ನುವ ಕುತೂಹಲಕ್ಕೆ ಸಿನಿಮಾ ನೋಡಬೇಕು.

ಕತೆ ಆಯ್ಕೆ ವಿಚಾರಕ್ಕೆ ಬಂದರೆ ಮಹೇಶ್ ಸುಖಧರೆ ಅವರನ್ನು ಮೆಚ್ಚಿಕೊಳ್ಳಬೇಕು. ನಿರೂಪಣೆಯಲ್ಲಿ ಮಾತ್ರ ಯಾಕೋ ಸಾಧಾರಣ ನೀತಿ ಅನುಸರಿಸಿದ್ದಾರೆ. ಹೀಗಾಗಿ ಇನ್ನಷ್ಟು ಥ್ರಿಲ್ಲಿಂಗ್, ರೋಚಕತೆ ಬೇಕಿತ್ತು ಅನಿಸುತ್ತದೆ. ಅಲ್ಲದೆ ಒಂದೇ ದೃಶ್ಯದಲ್ಲಿ ಏಕಕಾಲಕ್ಕೆ ಇಬ್ಬರು ನಟರನ್ನು ನೋಡಿದ ಅನುಭವ ಪ್ರೇಕ್ಷಕನಿಗಾಗುತ್ತದೆ ಎಂದರೆ ಅದರ ಕ್ರೆಡಿಟ್ಟು ನವೀನ್ ಕೃಷ್ಣರಿಗೆ ಸೇರಬೇಕು. ನಾಯಕನ ಮುಖ ತೋರಿಸದೆ ಬಿಲ್ಡಪ್ ದೃಶ್ಯ ಕಟ್ಟಿ ಕೇವಲ ಡೈಲಾಗ್ ಹೇಳಿಸುವಾಗಲಂತೂ ‘ಇದೇನು ಚಿತ್ರದ ಹೀರೋ ನವೀನ್ ಕೃಷ್ಣನಾ?’ ಎನ್ನುವ ಗುಮಾನಿಯೂ ಹುಟ್ಟಿಕೊಳ್ಳುತ್ತದೆ. ಅದು ಚಿತ್ರದ ನಾಯಕನ ಪಾತ್ರದ ಧ್ವನಿ ಮಾತ್ರ ಎಂದು ಗೊತ್ತಾದ ಮೇಲೂ ನವೀನ್ ಕೃಷ್ಣರ ಮುಖ ಹುಡುಕುತ್ತಾರೆ ಪ್ರೇಕ್ಷಕರು! ಹೀಗಾಗಿ ಸಚಿನ್ ದೇಹ, ನವೀನ್ ಕೃಷ್ಣ ವಾಯ್ಸ್‌ನಿಂದ ಪ್ರತಿ ದೃಶ್ಯದಲ್ಲೂ ಇಬ್ಬರು ಹೀರೋಗಳನ್ನು ನೋಡಿದಂತಾಗುತ್ತದೆ. ಆದರೂ ಸಾಹಸ ದೃಶ್ಯಗಳಲ್ಲಿ ಸಚಿನ್ ನಿಜಕ್ಕೂ ತೆಂಡೂಲ್ಕರ್. ಪ್ರತಿ ಬಾಲ್‌ಗೂ ಸಿಕ್ಸ್ ಬಾರಿಸುವ ತಾಕತ್ತು ಅವರಿಗಿದೆ. ಆದರೆ, ಸಂಭಾಷಣೆ ಒಪ್ಪಿಸುವ ರೀತಿ, ಎಕ್ಸ್‌ಪ್ರೆಶನ್‌ಗಳ ಕಡೆ ಗಮನ ಕೊಟ್ಟರೆ ಖಂಡಿತಾ ಕನ್ನಡಕ್ಕೆ ಒಳ್ಳೆಯ ನಟನಾಗುವ ಭರವಸೆ ಇದೆ. ಅಂಥ ಭರವಸೆಯನ್ನು ಸಚಿನ್ ಮುಂದಿನ ದಿನಗಳಲ್ಲಿ ಮತ್ತಷ್ಟು ಸವಾಲಾಗಿ ಸ್ವೀಕರಿಸಬೇಕಿದೆ. ಸಂಸ್ಕೃತಿ ಶೆಣೈ ಅವರ ನಟನೆ ನೋಡಿದರೆ ಇದು ಅವರ ಮೊದಲ ಕನ್ನಡ ಸಿನಿಮಾ ಅಂತನಿಸದು. ಈ ಚಿತ್ರದ ಮೂಲಕ ಮಹೇಶ್ ಸುಖಧರೆ ಕನ್ನಡಕ್ಕೆ ಒಳ್ಳೆಯ ನಟನೆ ಇರುವ ಮುದ್ದು ಮುಖದ ನಟಿಯನ್ನು ಪರಿಚಯಿಸಿದ್ದಾರೆ.

ಚಿತ್ರದಲ್ಲಿ ಅನಗತ್ಯ ಎನಿಸುವುದು ಸಾಧು ಕೋಕಿಲ ಮತ್ತು ಬುಲೆಟ್ ಪ್ರಕಾಶ್ ಎಂಟ್ರಿ. ಆದರೆ, ಚಿಕ್ಕಣ್ಣನ ಪರಸಂಗದ ಪ್ರಣಯ ಕತೆ ಮನರಂಜನೆ ನೀಡುತ್ತದೆ. ಸಿನಿಟೆಕ್ ಸೂರಿ ಅಲಿಯಾಸ್ ಸುರೇಶ್ ಜಯಕೃಷ್ಣ ಕ್ಯಾಮೆರಾ ಇಡೀ ಚಿತ್ರವನ್ನು ಜೀವಂತಗೊಳಿಸಿದೆ. ಸಾಹಸಗಳಲ್ಲಿ ರೋಚಕತೆ, ಹಾಡುಗಳಲ್ಲಿ ಮುಗ್ಧತೆ, ಮಾತಿನಲ್ಲಿ ಹೊಸತನಕ್ಕೆ ಛಾಯಾಗ್ರಹಣ ಸಾಕ್ಷಿಯಾಗುತ್ತದೆ. ಸಾಮಾನ್ಯವಾಗಿ ವಿ ಹರಿಕೃಷ್ಣ ಸಂಗೀತದ ಹಾಡುಗಳು ಪದೇಪದೆ ಎಲ್ಲೋ ಕೇಳಿದಂತೆ ಅನಿಸುತ್ತವೆಂಬ ಅಪವಾದದಿಂದ ಹೊರ ಬರುವಂತೆ ಮಾಡಿದ್ದಾರೆ ನಾಗೇಂದ್ರ ಪ್ರಸಾದ್, ಕೆ ಕಲ್ಯಾಣ್ ಹಾಗೂ ಪ್ರೊ ಕೃಷ್ಣೇಗೌಡ. ಅದರಲ್ಲೂ ‘ಹೋಗುಮೆ ಹೋಗುಮೆ ಎಲ್ಲರ ಒಂದ್ ದಪಾ’ ಹಾಡು ಮತ್ತೆ ಮತ್ತೆ ಕೇಳುವಂತಿದೆ. ಅಪ್ಪನಾಗಿ ಅಚ್ಯುತ್ ಕುಮಾರ್ ನೋಡುಗನ ಆತ್ಮೀಯ ಬಂಧುವಾಗುತ್ತಾರೆ. ಉಳಿದಂತೆ ಅಂಬರೀಶ್, ಶ್ರೀನಗರ ಕಿಟ್ಟಿಯಂತೆ ಬಂದು ಹೋಗುವ ಗೆಸ್ಟ್‌ಗಳು.

(ರೇಟಿಂಗ್ 3)Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!