Top

ಹಣದ ಹಿಂದೆಬಿದ್ದವರ ಹಣೆಬರಹ


Asianet News Saturday 27 August 2016 05:17 pm IST Film Review
ಹಣದ ಹಿಂದೆಬಿದ್ದವರ ಹಣೆಬರಹ
27 Aug

ಭಾಷೆ: ಕನ್ನಡ

ತಾರಾಗಣ: ಲಿಖಿತ್ ಸೂರ್ಯ, ನಿರಂತ್, ಮೇಘನಾ ಅಪ್ಪಯ್ಯ, ಅನು ಚಿನ್ನಪ್ಪ, ರಂಗಾಯಣ ರಘು, ಅಚ್ಯುತ್ ಕುಮಾರ್, ಸಂಗೀತಾ

ನಿರ್ದೇಶನ: ವಿನೋದ್ ಕುಮಾರ್

ಛಾಯಾಗ್ರಹಣ: ಸುಜಯ್ ಕುಮಾರ್

ಸಂಗೀತ: ಜ್ಯೂಡ ಸ್ಯಾಂಡಿ

ನಿರ್ಮಾಣ: ವಿ ಸಿ ತಿಮ್ಮಾರೆಡ್ಡಿ

-ದೇಶಾದ್ರಿ ಹೊಸ್ಮನೆ

ಗಣೇಶನ್ನ ಮಾಡು ಅಂದ್ರೆ ಇನ್ನೇನೋ ಮಾಡಿದ ಎನ್ನುವ ಹಾಗಿದೆ ‘ಲೈಫು ಸೂಪರ್’ ಚಿತ್ರದ ಕತೆ. ಯಾಕೆಂದ್ರೆ, ಇಲ್ಲಿ ಲೈಫು ಸೂಪರ್ ಅಂತ ಅನಿಸೋದು ಪ್ರೇಕ್ಷಕನಿಗೆ ಅಂದುಕೊಂಡಷ್ಟು ಸುಲಭ ಅಲ್ಲ. ಚುನಾವಣೆಯಲ್ಲಿ ಖರ್ಚು ಮಾಡುವುದಕ್ಕಾಗಿ ಬಳ್ಳಾರಿಯಿಂದ ಬೆಂಗಳೂರಿಗೆ ಬರುವ ರೂ.50 ಕೋಟಿ ಕಪ್ಪು ಹಣವನ್ನು ತಮ್ಮದಾಗಿಸಿಕೊಳ್ಳಲು ಚಿತ್ರದ ನಾಯಕರಿಬ್ಬರು ನಡೆಸುವ ರಣತಂತ್ರ ತೆರೆಯಲ್ಲಿ ಕಾಣಬೇಕಾದ್ರೆ, ಪ್ರೇಕ್ಷಕ ಎರಡು ತಾಸಿಗೂ ಹೆಚ್ಚು ಹೊತ್ತು ಕಾಯಲೇಬೇಕು. ಆ ವೇಳೆಗಾಗಲೇ ಪ್ರೇಕ್ಷಕರದ್ದು ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ವ್ಯಥೆ. ಅಷ್ಟಾಗಿಯೂ ಅದರಲ್ಲಿ ಯಾವುದೇ ತಾಜಾತನವಿಲ್ಲ ಎನ್ನುವುದೇ ಚಿತ್ರದ ಬಹುದೊಡ್ಡ ವೈಫಲ್ಯ.

ಹೊಸಬರ ಅಲೆಯಲ್ಲಿ ಹೊಸದೇನಾದ್ರೂ ಇದ್ದೀತು ಎನ್ನುವ ಕಾರಣಕ್ಕೆ ಈ ಚಿತ್ರ ಗಾಂಧಿನಗರದಲ್ಲಿ ಒಂದಷ್ಟು ನಿರೀಕ್ಷೆ ಹುಟ್ಟಿಸಿದ್ದು ನಿಜ. ನಿರ್ದೇಶಕ ವಿನೋದ್ ಕುಮಾರ್ ಚಿತ್ರದ ಬಗ್ಗೆ ಮಾತನಾಡುವಾಗೆಲ್ಲ ಅದ್ಭುತವಾದ ಕತೆ ಅಂತಲೂ ಹೇಳಲಾಗಿತ್ತು. ಅಂಥ ನಿರೀಕ್ಷೆ ಹೊತ್ತು ಚಿತ್ರಮಂದಿರಕ್ಕೆ ಹೋದವರಿಗೆ ಇಲ್ಲಿ ಹೊಸದೇನೂ ಇಲ್ಲ. ಚುನಾವಣೆ ವೆಚ್ಚಕ್ಕೆ ಅಕ್ರಮವಾಗಿ ಸಾಗಣೆ ಆಗುವ ಕಪ್ಪು ಹಣವನ್ನು ತಮ್ಮದಾಗಿಸಿಕೊಳ್ಳಲು ನಾಯಕ ಗುರು ಹಾಗೂ ರಾಜು ನಡೆಸುವ ರಣತಂತ್ರದ ಸಣ್ಣ ಎಳೆಯನ್ನು ತೆರೆಗೆ ತರಲು ನಿರ್ದೇಶಕರು ನಡೆಸಿದ ಕಸರತ್ತುಗಳು ನೋಡಿಸುವುದಕ್ಕಿಂತ, ಬೇಸರ ತರಿಸುವುದೇ ಹೆಚ್ಚು.

ಶಾಸಕ ಮುದ್ದಣ್ಣನ ಚುನಾವಣೆ ವೆಚ್ಚಕ್ಕಾಗಿ ಆ್ಯಂಬುಲೈನ್ಸ್ ವಾಹನದ ಮೂಲಕ ಬಳ್ಳಾರಿಯ ಗಣಿಧಣಿಗಳಿಂದ ಬೆಂಗಳೂರಿಗೆ ಅಕ್ರಮವಾಗಿ ಸಾಗಣೆ ಆಗುವ ಕಪ್ಪುಹಣವೇ ಈ ಚಿತ್ರದ ಕೇಂದ್ರಬಿಂದು. ತೆರೆಯಲ್ಲಿ ಇದು ಗೊತ್ತಾಗುವ ಹೊತ್ತಿಗೆ ಚಿತ್ರದ ಮೊದಲರ್ಧ ಖತಂ. ಅಷ್ಟು ಪಯಣದ ತನಕ ಪ್ರೇಕ್ಷಕರದ್ದು ಕೊಂಕಣ ಸುತ್ತುವ ವ್ಯಥೆ. ಪ್ರೀತಿ, ಪ್ರೇಮ, ಒಂದಷ್ಟು ಸೆಂಟಿಮೆಂಟ್, ಒಂದೆರಡು ಹೊಡೆದಾಟಗಳನ್ನು ಅನಾಮತ್ತಾಗಿ ಕತೆಗೆ ಲಿಂಕ್ ಮಾಡಿರುವ ನಿರ್ದೇಶಕರು, ಈರುಳ್ಳಿ, ಬೆಳ್ಳುಳ್ಳಿ ಜತೆಗೆ ಗುಂಟೂರು ಮೆಣಸಿನಕಾಯಿ ಅರೆದು, ಪ್ರೇಕ್ಷಕರ ಕಣ್ಣಲ್ಲಿ ನೀರು ತರಿಸುತ್ತಾರೆ. ಸಾಕಪ್ಪ ಸಾಕು ಎನ್ನುವ ಹೊತ್ತಿಗೆ ನಿಜವಾದ ಕತೆ ಗೊತ್ತಾಗುತ್ತದೆಯಾದರೂ, ದ್ವಿತೀಯಾರ್ಧದ ಬಹುತೇಕ ಓಟವೂ ರುಚಿಸದೇ ನೀರಸವಾಗಿದೆ.

ಹಾಗೆ ನೋಡಿದರೆ ಈ ಚಿತ್ರ ನಿಜಕ್ಕೂ ಕುತೂಹಲ ಹುಟ್ಟಿಸುವುದು ಕ್ಲೈಮ್ಯಾಕ್ಸ್‌ದಲ್ಲಿ. ರೂ.50 ಕೋಟಿ ಕಪ್ಪು ಹಣ ತನ್ನದಾಗಿಸಿಕೊಳ್ಳಲು ನಾಯಕರಾದ ಗುರು, ರಾಜು ನಡೆಸಿದ ತಂತ್ರಕ್ಕೆ ಮತ್ತೊಬ್ಬ ಪ್ರತಿತ್ರಂತ ನಡೆಸುತ್ತಾನೆ. ಹೀಗಾಗಿ ಇವರಿಬ್ಬರ ತಂತ್ರ ಫಲಿಸುತ್ತದೋ ಇಲ್ಲವೋ ಎನ್ನುವುದಕ್ಕೆ ನೀವು ಚಿತ್ರ ನೋಡಲೇಬೇಕು. ಆ ಸನ್ನಿವೇಶ ಬಿಟ್ಟರೆ ಎಲ್ಲಿಯೂ ಚಿತ್ರಕ್ಕೆ ನೋಡಿಸುವ, ಕಾಡಿಸುವ ಗುಣವೇ ಇಲ್ಲ. ನಾಯಕರಾಗಿ ಕಾಣಿಸಿಕೊಂಡಿರುವ ಲಿಖಿತ್ ಸೂರ್ಯ, ನಿರಂತ್ ಅಭಿನಯದಲ್ಲಿ ಎಲ್ಲಿಯೂ ಇಂಪ್ರೆಸ್ ಇಲ್ಲ. ನಾಯಕಿಯಾರದ ಮೇಘನಾ ಅಪ್ಪಯ್ಯ, ಅನು ಚಿನ್ನಪ್ಪ ಅವರ ನಟನೆಯಂತೂ ಪೇಲವ. ಉಳಿದಂತೆ ರಾಜಕಾರಣಿಯಾಗಿ ರಂಗಾಯಣ ರಘು, ರೌಡಿ ಬಾಬು ಆಗಿ ಅಚ್ಯುತ್ ಕುಮಾರ್, ನಾಯಕ ಗುರು ತಾಯಿಯಾಗಿ ಸಂಗೀತಾ ಅಭಿನಯ ಮಾತ್ರ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಹಾಗೆ ನೋಡಿದರೆ, ಈ ಚಿತ್ರದ ಪ್ಲಸ್ ಅಂದ್ರೆ ಛಾಯಾಗ್ರಹಣ. ಆ ಮಟ್ಟಿಗೆ ಸುಜಯ್ ಕುಮಾರ್ ಕ್ಯಾಮೆರಾ ವರ್ಕ್ ತೆರೆಯಲ್ಲಿ ಪ್ರೇಕ್ಷಕನಿಗೆ ಹಿಡಿಸುತ್ತದೆ. ಜ್ಯೂಡ ಸ್ಯಾಂಡಿ ಸಂಗೀತಕ್ಕೂ ಹಿತ ನೀಡುವ ಶಕ್ತಿಯಿದೆ. ಉಳಿದಂತೆ ಎಲ್ಲಿಯೂ ಈ ಚಿತ್ರ ಹೊಸತಾಗಿ ಕಾಣಿಸುವುದಿಲ್ಲ.

(ರೇಟಿಂಗ್ 2)Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!