Top

ಪುರಾತನ ಪುಟದಲ್ಲಿ ಅರಳಿದ ಪ್ರೇಮಕತೆ


Asianet News Saturday 13 August 2016 03:15 pm IST Film Review
ಪುರಾತನ ಪುಟದಲ್ಲಿ ಅರಳಿದ ಪ್ರೇಮಕತೆ
13 Aug

ಚಿತ್ರ: ಮೊಹೆಂಜೊದಾರೋ

ನಿರ್ದೇಶನ: ಅಶುತೋಷ್ ಗೋವರಿಕರ್

ತಾರಾಗಣ: ಹೃತಿಕ್ ರೋಷನ್, ಪೂಜಾ ಹೆಗ್ಡೆ, ಕಬೀರ್ ಬೇಡಿ

ನಿರ್ಮಾಪಕರು: ಸುನೀತಾ ಗೋವರಿಕರ್, ಸಿದ್ದಾರ್ಥ ರಾಯ್ ಕಪೂರ್

ಸಂಗೀತ: ಎ.ಆರ್. ರೆಹಮಾನ್

ಛಾಯಾಗ್ರಹಣ: ಸಿ.ಕೆ. ಮುರಳೀಧರನ್

ಭಾಷೆ: ಹಿಂದಿ

 

-ಕೆ. ಚೇತನ್ ಕುಮಾರ್

ಸಿಂಧು ಕಣಿವೆಯಲ್ಲಿ ಉಗಮಗೊಂಡ ಭಾರತದ ಪುರಾತನ ನಾಗರಿಕತೆಯಲ್ಲಿ ಒಂದಾದ ಮೊಹೆಂಜೊದಾರೋದ ವಿಷಯವನ್ನಿಟ್ಟುಕೊಂಡು ಅದೇ ಹೆಸರಿನ ಸಿನಿಮಾವನ್ನು ನಿರ್ದೇಶಕ ಅಶುತೋಷ್ ಗೋವರಿಕರ್ ತೆರೆಗಿಳಿಸಿದ್ದಾರೆ. ಐತಿಹಾಸಿಕ, ದೇಸಿ ಸಿನಿಮಾಗಳನ್ನು ನಿರ್ದೇಶಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಅಶುತೋಷ್ ಅವರು ಮೊಹೆಂಜೊಗೆ ಸ್ವದೇಶಿಯ ಟಚ್ ಕೊಟ್ಟಿದ್ದರೂ ಇದು ಕ್ರಿಸ್ತಪೂರ್ವಕ್ಕೆ ಸಂಬಂಧಿಸಿದ ಕಥೆಯಾಗಿದೆ.

ಸಿನಿಮಾದಲ್ಲಿ ಪಾತ್ರಗಳಿಗಿಂತ ನಿಜವಾಗಿಯು ಗೆಲುವನ್ನು ಕಂಡಿರುವುದು ವಸ್ತ್ರವಿನ್ಯಾಸ, ಸಂಸ್ಕೃತಿಯ ಸೊಬಗು, ದೃಶ್ಯವೈಭವ, ಕ್ರಿಸ್ತಪೂರ್ವಕ್ಕೆ ಹೊಂದಿಕೊಂಡಂತೆ ಇರುವ  ಸೆಟ್’ಗಳು. ಬಹುಶಃ ಇವೆ ಮಹೆಂಜೋ ದಾರೊವನ್ನು  ಪ್ರೇಕ್ಷಕರಿಗೆ ಮನಮುಟ್ಟಿಸಲಿದೆ ಎಂದರೆ ತಪ್ಪಾಗಲಾರದು.

ಅಶುತೋಷ್ ಅವರ ಹಿಂದಿನ ಮಹತ್ವದ ಚಿತ್ರಗಳಾದ ಲಗಾನ್, ಸ್ವದೇಶ್, ಜೋಧಾ ಅಕ್ಬರ್’ನಲ್ಲೂ ಅವರು ಕತೆಗೆ ತಕ್ಕಂತ ಚಿತ್ರಕತೆಯನ್ನು ಹಣೆದಿದ್ದರು. ಇಲ್ಲೂ ಸಹ ಪುರಾತನ ಸಂಸ್ಕೃತಿಗೆ ಹೊಂದಾಣಿಕೆಯಾಗುವ ಪಾತ್ರಗಳನ್ನು ಸೃಷ್ಟಿಸಿದ್ದಾರೆ.

ಮೊಹೆಂಜೊದಾರೋ 6 ಸಾವಿರ ವರ್ಷಗಳ ಪುರಾತನ ನಾಗರಿಕತೆಯಾದರೂ ವಿಶ್ವದ ಮೊದಲ ಆಧುನಿಕ ನಾಗರಿಕತೆ. ಇಲ್ಲಿಯೂ ಪ್ರೇಮಕತೆಯಿದೆ, ಸರಸ ಸಲ್ಲಾಪವಿದೆ. ಅಧಿಕಾರಕ್ಕಾಗಿ ದ್ವೇಷ, ಅಸೂಹೆ, ಸೇಡು ಕಿಚ್ಚು ಎಲ್ಲವೂ ಇದೆ. ಅದರೆ ಇವೆಲ್ಲವೂ ಆ ಕಾಲದ ಸಂಸ್ಕೃತಿಗೆ ಒಗ್ಗಿಸಿಕೊಡುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.

ಚಿತ್ರದ ನಾಯಕ ಸರ್ಮಾನ್(ಹೃತಿಕ್ ರೋಷನ್) ವ್ಯಾಪಾರ ಮಾಡುವ ಸಲುವಾಗಿ ಸ್ನೇಹಿತನೊಂದಿಗೆ ಮೊಹೆಂಜೋದಾರೋ ಪಟ್ಟಣಕ್ಕೆ ಆಗಮಿಸುತ್ತಾನೆ. ಅಲ್ಲಿನ ರಾಜಕೀಯ ವ್ಯವಸ್ಥೆಯನ್ನು ಖಂಡಿಸುವ ಸಂದರ್ಭದಲ್ಲಿಯೇ ಅರ್ಚಕರ ಮಗಳು ಚಾನಿ(ಪೂಜಾ ಹೆಗ್ಡೆ)ಯೊಂದಿಗೆ ಪ್ರೇಮಾಂಕುರವಾಗುತ್ತದೆ. ಆಕೆಯ ಪ್ರೇಮವನ್ನು ಒಲಿಸಿಕೊಳ್ಳುವ ಸಂದರ್ಭದಲ್ಲಿಯೇ ತಾನು ಬಂದಿರುವ ಊರು ತನ್ನದೆನ್ನುವ ರಹಸ್ಯವನ್ನು ತಿಳಿದುಕೊಂಡು ಅಲ್ಲಿಯೇ ಇರಲು ನಿರ್ಧರಿಸುತ್ತಾನೆ.ಮುಂದೆ ಚಿತ್ರ ಹೊಸ ತಿರುವನ್ನು ಪಡೆದುಕೊಳ್ಳುತ್ತದೆ.

ಚಿತ್ರಕತೆ ಆರಂಭದಲ್ಲಿ ನಿಧಾನಗತಿಯಿಂದ ಮೂಡಿಬಂದರೂ ವಿರಾಮದ ನಂತರ ವೇಗವನ್ನು ಪಡೆದುಕೊಳ್ಳುತ್ತದೆ. ಹೃತಿಕ್ ನಟನೆ ಪ್ರಶ್ನಾತೀತ. 2 ಹಾಡುಗಳಲ್ಲಿ ತಾನು ಯಾರಿಗೂ ಸರಿಸಾಟಿಯಿಲ್ಲದ ಹಾಗೆ ನೃತ್ಯ ಮಾಡಿದ್ದಾರೆ. ನಾಯಕಿಯ ಪಾತ್ರದಲ್ಲಿ ಅಭಿನಯಿಸಿರುವ ಕರ್ನಾಟಕದ ಬೆಡಗಿ ಪೂಜಾ ಹೆಗ್ಡೆ ನೋಡಲು ಆಕರ್ಷಣೀಯವಾಗಿರುವುದರ  ಜೊತೆಗೆ ತನ್ನ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇನ್ನುಳಿದಂತೆ ಕಬೀರ್ ಬೇಡಿಯ ಪಾತ್ರ ಮನಸ್ಸಿನಲ್ಲಿ ಉಳಿಯುತ್ತದೆ.

ಚಿತ್ರದ ಅಂದವನ್ನು ಹೆಚ್ಚಿಸುವಲ್ಲಿ ಛಾಯಾಗ್ರಾಹಕ ಸಿ.ಕೆ. ಮುರಳೀಧರನ್ ಅವರ ಕ್ಯಾಮೆರಾ ಕೈಚಳಕ ಹೆಚ್ಚು ಕೆಲಸ ಮಾಡಿದೆ. ದೃಶ್ಯ ಹಾಗೂ ಸಾಂಸ್ಕೃತಿಕ ವೈಭವದ ನಡುವೆ ಎ.ಆರ್. ರೆಹಮಾನ್ ಅವರ ಸಂಗೀತ ಸ್ವಲ್ಪ ಮೊನಚು ಕಳೆದುಕೊಂಡಿದೆ. ಅಶುತೋಷ್ ಗೋವರಿಕರ್ ಅವರ ಜೊತೆ ಹಿಂದಿನ ಚಿತ್ರಗಳಲ್ಲಿ ನೀಡಿದ್ದ ಗಾನಸುಧೆಯ ಇಂಪು ಇಲ್ಲಿ ಕಂಡು ಬರುವುದಿಲ್ಲ.

ಈ ಹಿಂದೆ ಸಾಮಾಜಿಕ, ಐತಿಹಾಸಿಕ ಹಾಗೂ ಪೌರಾಣಿಕ ಚಿತ್ರಗಳನ್ನು ತೆರೆಗೆ ಇಳಿಸುತ್ತಿದ್ದ ನಮ್ಮ ನಿರ್ದೇಶಕರಿಗೆ ಕ್ರಿಸ್ತ ಪೂರ್ವದ ಕತೆಯನ್ನು ಇಟ್ಟುಕೊಂಡು ಸಿನಿಮಾ ಮಾಡುವುದನ್ನು ಅಶುತೋಷ್ ತೋರಿಸಿಕೊಟ್ಟಿದ್ದಾರೆ. ನಂತರದ ದಿನಗಳಲ್ಲಿ ಈ ರೀತಿಯ ಕತೆಗಳುಳ್ಳ ಸಿನಿಮಾಗಳು ವಿವಿಧ ಭಾಷೆಗಳಲ್ಲಿ ತೆರೆಕಾಣುವ ದಿನಗಳು ದೂರವಿಲ್ಲ ಅನ್ನಬಹುದು.Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!