Top

ಚಿತ್ರ ವಿಮರ್ಶೆ: ಬೀಟ್ ಹೊಡೆಯುವುದು ಇಲ್ಲಿ ವ್ಯರ್ಥ


Asianet News Saturday 18 June 2016 10:10 am IST Film Review
ಚಿತ್ರ ವಿಮರ್ಶೆ: ಬೀಟ್ ಹೊಡೆಯುವುದು ಇಲ್ಲಿ ವ್ಯರ್ಥ
18 Jun

ಚಿತ್ರ: ಬೀಟ್
ಭಾಷೆ : ಕನ್ನಡ
ತಾರಾಗಣ : ಪಟ್ರೆ ಅಜಿತ್, ಹರ್ಷಿಕಾ ಪೂಣಚ್ಚ, ಕಡ್ಡಿ ವಿಶ್ವ , ಶಂಕರ್ ಅಶ್ವಥ್, ಅಮಿತ್, ಶ್ರೀನಿವಾಸ ಪ್ರಭು, ಜೋ ಸೈಮನ್
ನಿರ್ದೇಶನ : ಘನಶ್ಯಾಮ್
ಸಂಗೀತ: ರವಿ ಬಸ್ರೂರು
ಛಾಯಾಗ್ರಹಣ : ಸಿನಿಟೆಕ್ ಸೂರಿ
ನಿರ್ಮಾಣ: ಕೆ ರಾಜು

ಶ್ರೀರಾಂಪುರದಂತಹ ಒಂದು ಕಾಲೋನಿ. ಅಲ್ಲೊಂದು ಮಧ್ಯಮ ವರ್ಗದ ಫ್ಯಾಮಿಲಿ. ಗಂಡ ಉದ್ಯೋಗಿ, ಹೆಂಡತಿ ಗೃಹಿಣಿ. ಆ ದಂಪತಿಗೊಬ್ಬ ಮಗ. ಆತ ಕಾಲೇಜು ಮೆಟ್ಟಿಲು ತುಳಿದ ವಿದ್ಯಾರ್ಥಿ. ತನ್ನ ಹಾಗೆ ಆ ಕಾಲೇಜಿನಲ್ಲಿ ಓದುವ ಶ್ರೀಮಂತ ಕುಟುಂಬದ ಸುರ ಸುಂದರಿಯ ಹಿಂದೆ ಬಿದ್ದ ಪ್ರೇಮಿ. ಅವರಿಬ್ಬರ ಪ್ರೇಮ ಇನ್ನೇನು ಫಲಿಸುವ ಹೊತ್ತಿಗೆ ಮನೆಯವರ ವಿರೋಧ. ಪ್ರಿಯತಮೆಗೆ ಅನ್ಯ ಹುಡುಗನೊಂದಿಗೆ ಮದುವೆ. ಬಿದ್ದಿಗೆ ಬಿದ್ದ ಪ್ರಿಯಕರ ಮದ್ಯ ವ್ಯಸನಿ. ಮಗನ ಪರಿಸ್ಥಿತಿಗೆ ಕಣ್ಣೀರಿಡುವ ಕುಟುಂಬ.

ಅಬ್ಬಾ, ಗಾಂಧಿನಗರದ ಮಟ್ಟಿಗೆ ಇದೊಂದು ಹರಕು-ಮುರುಕು ಸವೆದು ಹೋದ ಕತೆ. ಲೆಕ್ಕ ಹಾಕಿದರೆ ವರ್ಷದಲ್ಲಿ ಬರುವ ನೂರಿನ್ನೂರು ಚಿತ್ರಗಳಲ್ಲಿ ಕನಿಷ್ಟ ಅರ್ಧದಷ್ಟು ಚಿತ್ರಗಳಿಗೆ ಇದೇ ಸರಕು. ಡಿಫೆರೆಂಟ್ ಹೆಸರಲ್ಲಿ ಇಂಥದ್ದೇ ಕತೆಯಲ್ಲಿ ಮರ ಸುತ್ತಿಸುವುದು ಮಾಮೂಲು. ಆ ಸಾಲಿಗೆ ಈಗ ಮತ್ತೊಂದು ಸೇರ್ಪಡೆಯೇ ‘ಬೀಟ್’.

ಯುವ ನಿರ್ದೇಶಕ ಘನ ಶ್ಯಾಮ್ ನಿರ್ದೇಶಿಸಿ, ತೆರೆಗೆ ತಂದ ಚಿತ್ರವಿದು. ಗಾಂಧಿನಗರಕ್ಕೆ ದಾಂಗುಡಿಯಿಟ್ಟ ಬಹುತೇಕ ಹೊಸಬರೇ ಇವತ್ತು ಹೆಚ್ಚು ಸದ್ದು ಮಾಡುತ್ತಿದ್ದರು, ಘನ ಶ್ಯಾಮ್ ಕೆಲಸದಲ್ಲಿ ಯಾವುದೇ ಹೊಸತನವಿಲ್ಲ. ಸರಿ ಸುಮಾರು ೨ ಗಂಟೆಯ ಅವಧಿಯಷ್ಟೂ ಅಲ್ಲಿ ಪ್ರೇಕ್ಷಕ ಬೀಟ್ ಹೊಡೆದರೂ ಅಂಥದ್ದೇನು ವಿಶೇಷತೆ ಕಾಣಿಸದು. ಬದಲಿಗೆ ಬೆಳಕು ಕಾಣದ ಕತ್ತಲ ಕೂಪದಲ್ಲಿಯೇ ಬಹುತೇಕ ಚಿತ್ರ ಹಳೇ ಸರಕನ್ನೇ ನಿಮ್ಮ ಮುಂದೆ ತಂದು ಬಿಸಾಕುವ ಮೂಲಕ, ಒಲ್ಲದ ತುತ್ತು ಉಣಬಡಿಸುತ್ತದೆ. ಕಥಾ ನಾಯಕ ಭರತ್ ಮಧ್ಯಮ ವರ್ಗದ ಹುಡುಗ. ಕಾಲೇಜು ಮೆಟ್ಟಿಲು ಹತ್ತಿದವನಿಗೆ ಭವಿಷ್ಯದ ಬಗ್ಗೆ ಯಾವುದೇ ಚಿಂತೆಯಿಲ್ಲ. ಬಿಂದಾಸ್ ಆಗಿ ಓಡಾಡಿಕೊಂಡವನಿಗೆ ಸಿಕ್ಕಿದ್ದು ಶ್ರೀಮಂತ ಕುಟುಂಬದ ಹುಡುಗಿ ತನು ಪ್ರೀತಿ. ಈ ಪ್ರೀತಿಯ ಗುಟ್ಟು ರಟ್ಟಾದಾಗ ತನು ತಂದೆ ತನ್ನ ಘನತೆ, ಗೌರವಕ್ಕೆ ಅಂಜಿ, ಮಗಳನ್ನು ಮನೆಯ ಕೊಠಡಿಯಲ್ಲಿ ಬಂಧಿಸಿಡುತ್ತಾರೆ.ಅಲ್ಲಿಂದ ಸವಕಲು ಕತೆಗೆ ಒಂದು ಟ್ವಿಸ್ಟ್ ಸಿಗುತ್ತದೆ.

ಪೋಷಕರಿಂದಲೇ ಗೃಹಬಂಧನಕ್ಕೆ ಸಿಲುಕಿ ಮಾನಸಿಕ ಕಾಯಿಲೆಗೆ ತುತ್ತಾಗುವ ತನು, ಸುಮಾರು ಮೂರ್ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿನ ಮಲ್ಲೇಶ್ವರಂ ಬಡಾವಣೆಯಲ್ಲಿ ಬೆಳಕಿಗೆ ಬಂದಿದ್ದ ಯುವತಿಯ ಗೃಹಬಂಧನವನ್ನು ನೆನಪಿಸುತ್ತದೆ. ಆ ಮಟ್ಟಿಗೆ ಕತೆ ಒಂದಷ್ಟು ಪ್ರಸ್ತುತ ಎನಿಸಿದರೂ ಅದು ನಡೆದು ಹೋಗಿ ಮೂರ್ನಾಲ್ಕು ವರ್ಷಗಳೇ ಆಗಿವೆ. ಇನ್ನು ಪ್ರೀತಿಸಿದವನೊಂದಿಗೆ ಮದುವೆ ಆಗುವುದೇ ಆಕೆಯ ಮಾನಸಿಕ ಕಾಯಿಲೆಗೆ ಚಿಕಿತ್ಸೆ ಎನ್ನುವ ವೈದ್ಯರ ಸಲಹೆ ಮೂಲಕ ಕತೆ ಇನ್ನೊಂದು ತಿರುವು ಪಡೆದುಕೊಂಡು ಸುಖಾಂತ್ಯದಂತೆ ಕಂಡರೂ, ಈ ಹೊತ್ತಿಗೆ ತನು ಗೆಳತಿ ವಿಲನ್ ರೂಪದಲ್ಲಿ ಕಾಣಸಿಕೊಳ್ಳುತ್ತಾಳೆ. ಆ ವೇಳೆಗಾಗಲೇ ಆಕೆ ಭರತನನ್ನು ಗಾಢವಾಗಿ ಪ್ರೀತಿಸುತ್ತಾಳೆ. ಅದು ಒನ್‌ವೇ ಮಾತ್ರ. ಅಲ್ಲಿಂದ ಮುಂದೇನಾಗುತ್ತೆ ಎನ್ನುವುದಷ್ಟೇ ‘ಬೀಟ್’ ಒನ್‌ಲೈನ್ ಸ್ಟೋರಿ.

ಕತೆಯೇ ಇಲ್ಲಿ ಸವೆದು ಹೋದ ಸರಕು ಎಂದ ಮೇಲೆ ಅದರ ಉಳಿದ ತಾಂತ್ರಿಕ ಕೆಲಸಗಳ ಬಗ್ಗೆ ಹೆಚ್ಚು ಹೇಳುವ ಔಚಿತ್ಯ ಕಾಣಿಸದು. ಸಿನಿಟೆಕ್ ಸೂರಿ ಅವರ ಕ್ಯೆಮೆರಾ ಬಹುತೇಕ ಕತ್ತಲಲ್ಲಿಯೇ ಮುಳುಗಿ ಹೋಗಿದೆ. ಮೊದಲ ಚಿತ್ರ ಎನ್ನುವ ಕಾರಣಕ್ಕೋ ಎನೋ ರವಿ ಬಸ್ರೂರು ಸಂಗೀತ ಸಿಕ್ಕಾಪಟ್ಟೆ ಬೋರ್. ‘ಕಳ್ಳ ಇವ ಕಳ್ಳ’ಎನ್ನುವ ಯುಗಳ ಗೀತೆ ಮಾತ್ರ ನೊಂದ ಪ್ರೇಕ್ಷಕನಿಗೆ ಒಂದಷ್ಟು ರಿಲ್ಯಾಕ್ಸ್ ನೀಡುತ್ತದೆ. ಮದನ್ ಹರಿಣಿ, ಮುರಳಿ, ಹರಿಕೃಷ್ಣ, ರಾಜು ನೃತ್ಯ ನಿರ್ದೇಶನದಲ್ಲೂ ವಿಶೇಷತೆ ಇಲ್ಲ. ಮಾಸ್ ಮಾದ ಸಾಹಸದಲ್ಲೂ ಅಂಥದ್ದೇ ನೋಟ. ನಾಯಕ ಪಟ್ರೆ ಅಜಿತ್, ನಾಯಕಿ ಹರ್ಷಿಕಾ ಅಭಿನಯ ಅಷ್ಟಕಷ್ಟೇ. ಕಡ್ಡಿ ಇಲ್ಲಿ ಖಡಕ್ ಆಗಿಲ್ಲ. ಹಾಗೆ ನೋಡಿದರೆ, ಪೋಷಕ ಪಾತ್ರಗಳಲ್ಲಿ ಶಂಕರ್ ಅಶ್ವಥ್, ಅಮಿತ್, ಶ್ರೀನಿವಾಸ ಪ್ರಭು, ಜೋ ಸೈಮನ್ ಗಮನ ಸೆಳೆಯುತ್ತಾರೆ.

(ರೇಟಿಂಗ್ 2)

- ದೇಶಾದ್ರಿ ಹೊಸ್ಮನೆ

 Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!