Top

ಬೆಂಕಿಪಟ್ಣ ವಿಮರ್ಶೆ: ಅಲ್ಲಲ್ಲಿ ಕಿಡಿ ಕಿಡಿ ಅಲ್ಲಲ್ಲಿ ಕಿರಿಕಿರಿ


Asianet News Sunday 22 February 2015 03:15 pm IST Film Review
ಬೆಂಕಿಪಟ್ಣ ವಿಮರ್ಶೆ: ಅಲ್ಲಲ್ಲಿ ಕಿಡಿ ಕಿಡಿ ಅಲ್ಲಲ್ಲಿ ಕಿರಿಕಿರಿ
22 Feb

ಚಿತ್ರ: ಬೆಂಕಿಪಟ್ಣ
ಬಿಡುಗಡೆ: 20 ಫೆಬ್ರವರಿ 2015

"ಬೂದಿಯಾಗೋದನ್ನ ನೋಡಕಾದ್ರೂ ಬೆಂಕಿ ಕಡ್ಡಿ ಇರಬೇಕಿತ್ತು" ಅನ್ನೋ ಯೋಗರಾಜ್ ಭಟ್ಟರ ಫನ್ನಿ ಫಿಲಾಸಫಿಕಲ್ ಸಾಲಿನೊಂದಿಗೆ ಆರಂಭವಾಗುವ ಬೆಂಕಿಪಟ್ಣ ಚಿತ್ರ ಪ್ರೇಕ್ಷಕರಲ್ಲಿ ಬಿಡುಗಡೆಗೆ ಮುಂಚೆ ಕುತೂಹಲ ಮಾತ್ರವಲ್ಲ ಗೊಂದಲವನ್ನೂ ಹುಟ್ಟಿಸಿದ್ದ ಚಿತ್ರ. ಬೆಂಕಿಪೊಟ್ಟಣವೋ ಬೆಂಕಿಪಟ್ಟಣವೋ ಎಂಬ ಕ್ಯೂರಿಯಾಸಿಟಿ ಚಿತ್ರ ಬಿಡುಗಡೆಯ ಹೊತ್ತಿಗೆ ಅಲ್ಲಸ್ವಲ್ಪ ತಿಳಿಯಾಗಿತ್ತಾದರೂ ಚಿತ್ರದ ತಿರುವಿನಲ್ಲಿ ಬರುವ ಭಟ್ಟರ ಮಾತುಗಳು ಮತ್ತು ಬೆಂಕಿಪಟ್ಣ, ಧೂಮಪಾನ ಸಂಬಂಧಿ ವಿಷಯಗಳು ಹಾಗೂ ಬೆಂಕಿ ಪಟ್ಟಣದ ಪರಿಚಯಗಳು ಮತ್ತೊಮ್ಮೆ ಪ್ರೇಕ್ಷಕರನ್ನು ಗೊಂದಲಕ್ಕೆ ತಳ್ಳುತ್ತವೆ.

ನಿರ್ದೇಶಕರು ಒಂದಕ್ಕೊಂದನ್ನು ಉಪಮೆಯಾಗಿ ಬಳಸಿದ್ದಾರೋ ಅಥವಾ ಸ್ವತಃ ಗೊಂದಲಕ್ಕೆ ಬಿದ್ದಿದ್ದಾರೋ ಎಂಬಂತೆ ಶುರುವಾಗುವ ಚಿತ್ರಕಥೆ, ಬೆಂಕಿಪಟ್ಣದಿಂದ ಬಿದ್ದು ಚದುರಿಹೋದ ಬೆಂಕಿಕಡ್ಡಿಗಳಂತೆ ಅಡ್ಡಾದಿಡ್ಡಿಯಾಗಿ ಕಾಣುತ್ತದೆ. ಚಿತ್ರದ ಪ್ರತಿ ಪಾತ್ರದಲ್ಲೂ ಕಿಡಿ ಕಾಣಿಸುತ್ತದಾದರೂ ಅವ್ಯಾವುದರಿಂದಲೂ ಬೆಳಕೋ ಬೆಚ್ಚಗಿನ ಅನುಭವವೋ ಸಿಗುವುದೇ ಇಲ್ಲ. ಕಾಕತಾಳೀಯವೆಂಬಂತೆ ಅತ್ತ ಹಿಂದಿಯಲ್ಲಿ ಬದಲಾಪುರ್ ಚಿತ್ರ ಬಿಡುಗಡೆಯಾದಾಗ ಇಲ್ಲಿ ಬೆಂಕಿ ಪಟ್ಣ ಬಿಡುಗಡೆಯಾಗಿದೆ. ಬೆಂಕಿ ಪಟ್ಟಣ ಎಂಬ ಹೆಸರೂ ಕೂಡ ಪಟ್ಟಣದಲ್ಲಿ ನಡೆಯುವ ಸೇಡಿನ ಕಥೆ ಇರಬಹುದಾ ಎಂಬ ಕುತೂಹಲಕ್ಕೂ ಇಲ್ಲಿ ಉತ್ತರ ಸಿಗುವುದಿಲ್ಲ.

ಸಮಾಜದಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ದಣಿದವರನ್ನು ಶ್ರೀಮಂತವರ್ಗ ಹೇಗೆಲ್ಲ ಶೋಷಿಸುತ್ತದೆ ಎಂಬ ಕ್ರೌರ್ಯವನ್ನು, ಅದರ ಮಧ್ಯೆಯೇ ಅರಳಿ ಸಾಯುವ ಪ್ರೀತಿಯನ್ನು ವಿವರಿಸಲು ಹೊರಟಿರುವ ದಯಾನಂದ್ ತಮ್ಮ ಚೊಚ್ಚಲ ಚಿತ್ರದಲ್ಲಿ ತಮ್ಮ ದೃಷ್ಟಿಕೋನದಲ್ಲಿ ಕಂಡ ಹಲವು ವಿಷಯಗಳನ್ನು ಸಿನಿಮಾದಲ್ಲಿ ತೋರಿಸಲು ಯತ್ನಿಸಿದ್ದಾರೆ. ಆದರೆ, ಅವರ ಬರಹವು ದೃಶ್ಯವಾಗಿ ಬರುವಲ್ಲಿ ಸಂಪೂರ್ಣ ಯಶ ಕಂಡಿಲ್ಲ. ಹಲವು ದೃಶ್ಯಗಳನ್ನು ಸೂಚ್ಯವಾಗಿ, ಸಂವೇದನಾತ್ಮಕವಾಗಿ ಹೇಳಲು ಅವರು ಪಟ್ಟಿರುವ ಶ್ರಮ ಕಾಣುತ್ತದೆ. ಚಿತ್ರದಲ್ಲಿ ಅವರು ಸೃಷ್ಟಿಸಿರುವ ಒಂದೊಂದು ಪಾತ್ರಕ್ಕೂ, ಅವುಗಳಿಗಿರುವ ಹೆಸರುಗಳಿಗೂ ಒಂದೊಂದು ದಾರುಣ ಕಥೆ ಇದೆಯಾದರೂ ಅದನ್ನು ಮನತಟ್ಟುವಂತೆ ಹೇಳುವ ಕಲೆಯನ್ನು ಅವರಿಗೆ ಪೂರ್ತಿಯಾಗಿ ಒಲಿಸಿಕೊಳ್ಳಲಾಗಿಲ್ಲ. ಸಂಭಾಷಣೆಗಳಲ್ಲಿಯೂ ಅಲ್ಲಲ್ಲಿ ಹೊಳಹು ಕಾಣುತ್ತದಾದರೂ ತೀರಾ ಅಗತ್ಯದ ಸಂದರ್ಭದಲ್ಲಿ ಭಾಷೆ ಭಾವ ಎರಡೂ ಸೋತು, ದೃಶ್ಯ ಪೇಲವವಾಗಿ ಹೋಗಿದೆ. ಒಂದು ದೃಶ್ಯಕ್ಕೂ ಇನ್ನೊಂದು ದೃಶ್ಯಕ್ಕೂ ಸಲೀಸಾದ ಪಯಣ ಇಲ್ಲದ ಕಾರಣ, ಹಲವು ದೃಶ್ಯಗಳು ಅನಗತ್ಯ ಎನಿಸುತ್ತದೆ. ಗ್ರಾಫಿಕ್ಸ್ ಮೊಸಳೆಯ ದೃಶ್ಯ, ಮರದಿಂದ ಹಾರುವ ಗ್ರಾಫಿಕ್ಸ್ ಹಕ್ಕಿಯ ದೃಶ್ಯ, ನಾಯಿಬೇಟೆಯ ದೃಶ್ಯಗಳೆಲ್ಲವೂ ಸಂಪೂರ್ಣ ಅಸಹಜ ಹಾಗೂ ಕಥಾ ವಿಸ್ತರಣೆಗೋಸ್ಕರ ಹೇರಲಾಗಿದೆ ಅನಿಸೋದ್ರಿಂದ ಚಿತ್ರಕ್ಕೆ ಹಾಗೂ ಬಜೆಟ್'ಗೆ ಭಾರವಾಗಷ್ಟೇ ಉಳಿದುಕೊಳ್ಳುತ್ತದೆ.

ನಟನೆಯಲ್ಲಿ ಅರುಣ್ ಸಾಗರ್ ಸರಿಯಾದ ಡೆಫಿನಿಷನ್ ಇಲ್ಲದ ಪಾತ್ರದಲ್ಲೂ ಪ್ರಬುದ್ಧ ಅಭಿನಯ ನೀಡಿದ್ದಾರೆ. ರೂಪದಲ್ಲಿ ಚೇತನ್'ರನ್ನು ನೆನಪಿಸುವ ಪ್ರತಾಪ್ ನಾರಾಯಣ್ ಭರವಸೆ ಮೂಡಿಸುತ್ತಾರೆ. ಅನುಶ್ರೀ ಮಾತು ಜಾಸ್ತಿಯಾಯ್ತು ಅಂತಷ್ಟೇ ಅನಿಸುತ್ತದೆ. ಕೌಶಿಕ್-ಸ್ಟೀವ್ ಸಂಗೀತದ ಹಾಡುಗಳು ಚಿತ್ರದಿಂದ ಬೇರೆಯೇ ನಿಂತಾಗಲೇ ಹೆಚ್ಚು ಸೊಗಸೆನಿಸುತ್ತವೆ. ಅಜನೀಶ್ ಹಿನ್ನೆಲೆ ಸಂಗೀತ ಚಿತ್ರದ ಮೂಡ್'ಗೆ ತಕ್ಕಂತಿಲ್ಲ. ದಯಾನಂದ್ ದೃಶ್ಯ ಮಾಧ್ಯಮವನ್ನು ಪಳಗಿಸಿಕೊಂಡರೆ ಉತ್ತಮ ಕಥೆಯ ಚಿತ್ರಗಳನ್ನು ನೀಡಬಲ್ಲರು ಎಂಬ ಸುಳಿವಂತೂ ಬೆಂಕಿಪಟ್ಣ ನೀಡುತ್ತದೆ.

- ನವೀನ್ ಸಾಗರ್, ಕನ್ನಡಪ್ರಭFollow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!