Top

ಸರಣಿ ರೇಪಿಸ್ಟ್ ಸೆರೆ : ಕಾಮುಕ ಮಾಡಿದ ಅತ್ಯಾಚಾರಗಳೆಷ್ಟು ಗೊತ್ತೆ ?


Asianet News Friday 02 September 2016 02:14 pm IST Karnataka
ಸರಣಿ ರೇಪಿಸ್ಟ್ ಸೆರೆ : ಕಾಮುಕ ಮಾಡಿದ ಅತ್ಯಾಚಾರಗಳೆಷ್ಟು ಗೊತ್ತೆ ?
02 Sep

ಗದಗ(ಸೆ.2): ಮಹಿಳೆಯರನ್ನು ನಂಬಿಸಿ ಅಥವಾ ಲಿಫ್ಟ್ ಕೊಡುವ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿ ದೋಚುತ್ತಿದ್ದ ಸರಣಿ ರೇಪಿಸ್ಟ್‌ನನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕಲಿವಾಳ ಗ್ರಾಮದ ಫಕೀರಪ್ಪ ಕಾಡಣ್ಣವರ ಬಂಧಿತ ಆರೋಪಿ. ಈತನ ಸಹಚರರಾದ ಕೆ. ಸಂತೋಷ ಬಾಬು, ಬಸವರಾಜ ಗದಿಗೆಣ್ಣವರ ಹಾಗೂ ಗದಗ ಜಿಲ್ಲೆಯ ಆಶಾ ಕಾರ್ಯಕರ್ತೆ ಮಹಾದೇವಿ ಬೇವಿನಮರದ ಕೂಡ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಗದಗ ಜಿಲ್ಲಾ ವರಿಷ್ಠಾಧಿಕಾರಿ ಆರೋಪಿ ಫಕೀರಪ್ಪ ಹಾಗೂ ಆತನ ಸಹಚರರಿಂದ ರೂ.19  ಲಕ್ಷ ಮೌಲ್ಯದ ಚಿನ್ನ, ರೂ.21 ಸಾವಿರದ ಬೆಳ್ಳಿ,2 ಬೈಕ್, 32 ಮೊಬೈಲ್ ವಶ ಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಮದ ಮಹಿಳೆಯನ್ನು ಮನೆಗೆಲಸ ಕೊಡಿಸುವುದಾಗಿ ನಂಬಿಸಿ ಕರೆದುಕೊಂಡು ಹೋಗಿ ಕಳಸಾಪುರ ರಸ್ತೆಯ ಜಮೀನಿನಲ್ಲಿ ಅತ್ಯಾಚಾರ ನಡೆಸಿ, ಚಿನ್ನಾಭರಣ ದೊಚಿದ ಕುರಿತು ಡಿ.30, 2015ರಂದು ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರಂತೆ ಕಾರ್ಯಾಚರಣೆಗೆ ವಿಶೇಷ ತಂಡ ರಚಿಸಿ ಆರೋಪಿಯನ್ನು ಬಂಧಿಸಿ ವಿಚಾರಿಸಿದಾಗ ಫಕೀರಪ್ಪ ನಡೆಸಿದ ಭಯಾನಕ ಕುಕೃತ್ಯಗಳು ಬಯಲಿಗೆ ಬಂದಿವೆ ಎಂದರು.

ಮೂಲಗಳ ಪ್ರಕಾರ, ಈತ ಏಳು ಅತ್ಯಾಚಾರ ಎಸಗಿದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಆದರೆ, ಸದ್ಯ ಎರಡು ಪ್ರಕರಣಗಳಷ್ಟೇ ಖಚಿತಗೊಂಡಿವೆ. ಉಳಿದ ಪ್ರಕರಣಗಳ ಕುರಿತು ತನಿಖೆ ನಡೆಯುತ್ತಿದೆ. ಫಕೀರಪ್ಪ ತಂಡಕ್ಕೆ ಸಹಕಾರ ನೀಡುತ್ತಾ, ಒಂಟಿ ಮಹಿಳೆಯರ ಕುರಿತು ಮಾಹಿತಿ ನೀಡುತ್ತಿದ್ದ ಮುಂಡರಗಿ ತಾಲೂಕಿನ ರಾಮೇನಹಳ್ಳಿಯ ಆಶಾ ಕಾರ್ಯಕರ್ತೆ ಮಹಾದೇವಿ ಬೇವಿನಮರದಳನ್ನು ವಿಚಾರಿಸಿದಾಗ ಗದಗ, ಹಾವೇರಿ ಹಾಗೂ ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿ ಈ ರೀತಿಯ 14 ಪ್ರಕರಣಗಳ ಕುರಿತು ಮಾಹಿತಿ ಸಿಕ್ಕಿದೆ. ಈ ಕುರಿತು ತನಿಖೆ ನಡೆಯುತ್ತಿದೆ.

ಆರೋಪಿಗಳು ಸಂದರ್ಭಕ್ಕನುಸಾರವಾಗಿ ಅಮಾಯಕ ಮಹಿಳೆಯರಿಗೆ ಲಿಫ್ಟ್ ಕೊಟ್ಟು, ಸರ್ಕಾರಿ ನೌಕರಿ, ವೈದ್ಯ, ಪೊಲೀಸ್ ಎಂದೆಲ್ಲ ಹೇಳಿಕೊಂಡು ಅವರ ವಿಶ್ವಾಸಗಳಿಸಿ ಅವರನ್ನು ಹೊರವಲಯದ ನಿರ್ಜನ ಪ್ರದೇಶಗಳಿಗೆ ಕರೆದೊಯ್ದು ಅತ್ಯಾಚಾರ ಹಾಗೂ ಸುಲಿಗೆ ಮಾಡುತ್ತಿದ್ದರು.



Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!