Top

ಸೌದಿಯಲ್ಲಿ ನರಕ ಕಂಡ ಕನ್ನಡಿಗರಿಗೆ ಬೇಕಿದೆ ಸರ್ಕಾರದ ನೆರವು (ಸುವರ್ಣ ನ್ಯೂಸ್ ವೆಬ್ ಎಕ್ಸ್'ಕ್ಲೂಸಿವ್)


Asianet News Tuesday 30 August 2016 12:12 pm IST Interview
ಸೌದಿಯಲ್ಲಿ ನರಕ ಕಂಡ ಕನ್ನಡಿಗರಿಗೆ ಬೇಕಿದೆ ಸರ್ಕಾರದ ನೆರವು (ಸುವರ್ಣ ನ್ಯೂಸ್ ವೆಬ್ ಎಕ್ಸ್'ಕ್ಲೂಸಿವ್)
30 Aug

ಬೆಂಗಳೂರು(ಆ.30): ದುಬೈ, ಸೌದಿ ಅರೇಬಿಯಾ, ಅರಬ್ ದೇಶಗಳಂದರೆ ಉದ್ಯೋಗ ಅರಸಿ ಹೋಗುವ ಭಾರತೀಯರಿಗೆ  ಆಗಾಧವಾದ  ಪ್ರೀತಿ. ಇದಕ್ಕೆ ನಮ್ಮ ಕನ್ನಡಿಗರು ಹೊರತಲ್ಲ. ಕೈತುಂಬ ಸಂಬಳ, ನಿರೀಕ್ಷೆಗೂ ಮೀರಿದ ಸೌಲಭ್ಯ ಇವೆಲ್ಲಗಳು ಉದ್ಯೋಗಿಗಳಿಗೆ ಸಿಗುತ್ತವೆ.  ಆದರೆ ಅರಬ್ ದೇಶಗಳೆಂದರೆ ಸ್ವರ್ಗವಲ್ಲ ಅಲ್ಲಿ ನಮಗೆ  ನರಕ ದರ್ಶನವಾಗಿದೆ ಎಂದು ಮೂವರು ಕನ್ನಡಿಗರು ತಮ್ಮ ನೋವನ್ನು ಸುವರ್ಣ ನ್ಯೂಸ್ ವೆಬ್'ಸೈಟ್'ನೊಂದಿಗೆ ಹಂಚಿಕೊಂಡಿದ್ದಾರೆ.

ಕಾರವಾರದ ರಿಜ್ವಾನ್ ಉಸ್ಮಾನ್ ಶೇಖ್, ಕುಮಟಾ ಬೆಟ್ಕುಳಿಯ ಮುಕಬುಲ್ ಖರೀಮ್, ಶಿರಸಿಯ ಇಮ್ರಾನ್ ಖಾಜಿ ಮೂವರು ಕನ್ನಡಿಗರು ಚೆನ್ನಾಗಿ ಹಣ ಸಂಪಾದಿಸಿ ತಮ್ಮ ಕುಟುಂಬವನ್ನು ನೋಡಿಕೊಳ್ಳಬೇಕೆಂದು 8 ವರ್ಷಗಳ ಹಿಂದೆ ಸೌದಿ ಅರೇಬಿಯಾದ ಜೆಡ್ಡಾ ಪಟ್ಟಣದಲ್ಲಿ ವಿವಿಧ ಸೇವೆಗಳನ್ನು ಒದಗಿಸುವ 'ಸೌದಿ ಓಗರ್ ಲಿಮಿಟೆಡ್' ಎಂಬ ಬಹುರಾಷ್ಟ್ರೀಯ ಸಂಸ್ಥೆಗೆ ಸೇರಿದ್ದಾರೆ. 'ಸೌದಿ ಓಗರ್ ಲಿಮಿಟೆಡ್' ಸಂಸ್ಥೆಯು ರಿಯಾದ್'ನಲ್ಲಿ ಮುಖ್ಯ ಕಚೇರಿ ಹೊಂದಿದ್ದು ಲೆಬೆನಾನ್, ಜೋರ್ಡಾನ್, ದಕ್ಷಿಣ ಆಫ್ರಿಕಾ ಸೇರಿದಂತೆ ಹಲವು ದೇಶಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದೆ. 40 ಸಾವಿರಕ್ಕೂ ಅಧಿಕ ಮಂದಿ ಈ ಸಂಸ್ಥೆಯಡಿ ಕೆಲಸ ನಿರ್ವಹಿಸುತ್ತಿದ್ದಾರೆ.

2015 ರವರೆಗೂ 'ಸೌದಿ ಓಗರ್ ಲಿಮಿಟೆಡ್' ಸಂಸ್ಥೆಯಲ್ಲಿ ಎಲ್ಲವೂ ಚೆನ್ನಾಗಿತ್ತು. 2015ರ ನಂತರ ಎಲ್ಲಾ ಸಂಸ್ಥೆಗಳಿಗೂ ಆವರಿಸಿದಂತೆ ಈ ಸಂಸ್ಥೆಗೂ ಆರ್ಥಿಕ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ  ಕಂಪನಿಯ 2 ಸಾವಿರ ಮಂದಿ ನೌಕರರನ್ನು ಕೆಲಸದಿಂದ ತೆಗೆಯಲು ನಿರ್ಧರಿಸಿದೆ. ಕೆಲಸ ಕಳೆದುಕೊಂಡ 2 ಸಾವಿರ ಮಂದಿಯಲ್ಲಿ ಕನ್ನಡಿಗರು ಒಳಗೊಂಡಂತೆ ನೂರಾರು ಮಂದಿ ಭಾರತೀಯರು ಸೇರಿದ್ದರು.

8 ತಿಂಗಳಿಂದ ಸಂಬಳವಿಲ್ಲ, ಅನ್ನಕ್ಕೂ ಪರದಾಟ

2016 ರ ಜನವರಿಯಿಂದ ಕಂಪನಿಯು ಸುಮಾರು 2 ಸಾವಿರ ಮಂದಿಗೆ ಸಂಬಳವನ್ನು ಸ್ಥಗಿತಗೊಳಿಸಿದೆ. ವೇತನ ಪಡೆಯದವರಲ್ಲಿ ಕನ್ನಡಿಗರಾದ ರಿಜ್ವಾನ್ ಉಸ್ಮಾನ್ ಶೇಖ್, ಮುಕಬುಲ್ ಖರೀಮ್, ಇಮ್ರಾನ್ ಖಾಜಿ ಸೇರಿದಂತೆ ಹಲವು ಕನ್ನಡಿಗರಿದ್ದರು.

ಸಂಬಳ, ಪರಿಹಾರ ಇವತ್ತು ಬರಬಹುದು, ನಾಳೆ ಬರಬಹುದು ಎಂದು 7 ತಿಂಗಳು ಕಾದರೂ ಉದ್ಯೋಗಿಗಳಿಗೆ ಯಾವುದೇ ಪ್ರಯೋಜನವಾಗಲಿಲ್ಲ. ಪ್ರತಿಭಟನೆ ಮಾಡಿದರೂ ಯಾವುದೇ ಉಪಯೋಗವಾಗಲಿಲ್ಲ.ಕಂಪನಿಯು ಕ್ಯಾಟರಿಂಗ್ ಸಂಸ್ಥೆಗೆ ಹಣ ನಿಲ್ಲಿಸಿದ ಕಾರಣ ವಸತಿ ಗೃಹದಲ್ಲಿ ಉಳಿದುಕೊಂಡ  ಉದ್ಯೋಗಿಗಳಿಗೆ ಊಟವೂ ಇಲ್ಲದಂತಾಯಿತು. ಸಾಲ ಮಾಡಿ ಬದುಕು ಕಟ್ಟಿಕೊಳ್ಳುವ ಸ್ಥಿತಿ ನಿರ್ಮಾಣವಾಯಿತು.ತವರು ದೇಶಕ್ಕೆ ಹೋಗಲು ಹಣವಿಲ್ಲ, ಊಟವೂ ಇಲ್ಲ.

ಇಲ್ಲಿ ಮಕ್ಕಳು ಸಂಬಳ, ಉಟವಿಲ್ಲದೆ ನರಕವನ್ನು ಅನುಭವಿಸುತ್ತಿದ್ದರೆ, ಊರಿನಲ್ಲಿ ಇವರ ಸಂಬಳವನ್ನೇ ನೆಚ್ಚಿಕೊಂಡು ಜೀವನ ಸಾಗಿಸುತ್ತಿದ್ದ ತಂದೆ ತಾಯಿ ಕುಟುಂಬ ವರ್ಗದವರಿಗೆ ಆತಂಕ ಕಾಡಲು ಶುರುವಾಯಿತು. ಇತ್ತ ಸಂಬಳವು ಬರುತ್ತಿಲ್ಲ ಅತ್ತ ಮಕ್ಕಳು ಮನೆಗೆ ಬರಲಿಲ್ಲ. ಕೈಯಲ್ಲಿ ಹಣವಿಲ್ಲದ ಕಾರಣ ದೂರವಾಣಿಯಲ್ಲೂ ಮನೆಯವರನ್ನು ಸಂಪರ್ಕಿಸಲು ಇವರಿಗೆ ತೊಂದರೆಯಾಯಿತು.

ನೆರವಿಗೆ ಬಂದ ಭಾರತ ಸರ್ಕಾರ

8 ತಿಂಗಳಲ್ಲಿ ಪ್ರತ್ಯಕ್ಷ ನರಕವನ್ನೇ ಕಂಡ ಇವರ ನೆರವಿಗೆ ಬಂದಿದ್ದು, ಸೌದಿ ಅರೇಬೀಯದಲ್ಲಿರುವ ಭಾರತೀಯ ರಾಯಭಾರಿ ಕಚೇರಿ. 'ಸೌದಿ ಓಗರ್ ಲಿಮಿಟೆಡ್' ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ನೂರಾರು ಭಾರತೀಯರೆಲ್ಲರೂ ಒಟ್ಟಾಗಿ ತಮ್ಮ ದಾಖಲೆಗಳನ್ನು ಕೂಡಿಹಾಕಿ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿದ್ದಾರೆ. ಭಾರತೀಯ ಸಮಸ್ಯೆಗೆ ಸ್ಪಂದಿಸಿದ ಭಾರತೀಯ ಅಧಿಕಾರಿಗಳು ಕೇಂದ್ರ ಸರ್ಕಾರವನ್ನು ಸಂಪರ್ಕಿಸಿದ್ದಾರೆ. ಈ ಬೆಳವಣಿಗೆಗಳು ನಡೆದ ಮೇಲೆ ವಿದೇಶಾಂಗ ರಾಜ್ಯ ಸಚಿವ ವಿ.ಕೆ. ಸಿಂಗ್ ಸೌದಿಗೆ ಆಗಮಿಸಿ ಅಲ್ಲಿನ ದೇಶದ ರಾಜರೊಂದಿಗೆ ಮಾತನಾಡಿ ಭಾರತೀಯರ ಸಮಸ್ಯೆಯನ್ನು ಸರಿಪಡಿಸಲು ಮನವಿ ಮಾಡಿದ್ದಾರೆ. ನಂತರ ಸೌದಿ ರಾಜರು ಉದ್ಯೋಗಿಗಳಿಗೆ ಆಹಾರವನ್ನು ಒದಗಿಸಲು ಹಣ ಬಿಡುಗಡೆ ಮಾಡಿದ್ದಾರೆ. ಇದರ ಜೊತೆಗೆ 8 ತಿಂಗಳಿಂದ ತಡೆಯಿಡಿದಿರುವ ವೇತನವನ್ನು ವಾಪಸ್ ಕೊಡಿಸಲು ವಿ.ಕೆ. ಸಿಂಗ್ ಅವರು ಭರವಸೆ ನೀಡಿದ್ದಾರೆ.

ರಾಜತಾಂತ್ರಿಕ ಮಾತುಕತೆ ನಡೆದ 2 ತಿಂಗಳ ನಂತರ 'ಸೌದಿ ಓಗರ್ ಲಿಮಿಟೆಡ್' ಸಂಸ್ಥೆಯಿಂದ ಪರದಾಡುತ್ತಿದ್ದ   100 ಭಾರತೀಯರನ್ನು ಕೇಂದ್ರ ಸರ್ಕಾರ ವಾಪಸ್ ಕರೆಸಿಕೊಂಡಿದೆ. ಇನ್ನು ಕೆಲ ದಿನಗಳಲ್ಲಿ ಹಂತ ಹಂತವಾಗಿ ತೊಂದರೆಗೊಳಗಾಗಿರುವ ಎಲ್ಲರನ್ನು ವಾಪಸ್ ಕರೆಸಿಕೊಳ್ಳಲಿದೆ.

ನೆರವಿಗೆ ಮೋರೆಯಿಟ್ಟ ಕನ್ನಡಿಗರು

ಏಳೆಂಟು ವರ್ಷಗಳಿಂದ ಕುಟುಂಬವನ್ನು ಸಾಕುತ್ತಿದ್ದ  ಮೂವರು ಕನ್ನಡಿಗರಿಗೆ ಸದ್ಯ ಭವಿಷ್ಯದ್ದೇ ಚಿಂತೆಯಾಗಿದೆ. ಕುಟುಂಬವನ್ನು ಸಾಕುವ ಜವಾಬ್ದಾರಿ ಹೊತ್ತವರು ಈಗ ಮನೆಯಲ್ಲಿ ಕುಳಿತುಕೊಳ್ಳುವಂತಾಗಿದೆ. ಆರ್ಥಿಕ ತೊಂದರೆ ಎದುರಾಗಿರುವ ಇವರಿಗೆ, ಮುಂದೆ ನಮಗೆ ಕೆಲಸ ಸಿಗುವವರೆಗೂ ಕುಟುಂಬವನ್ನು ನಿಭಾಯಿಸಿಕೊಳ್ಳಲು ಸಾಧ್ಯವಾಗುವಂತೆ ಕರ್ನಾಟಕ ಅಥವಾ ಕೇಂದ್ರ ಸರ್ಕಾರ ಹಣಕಾಸಿನ ನೆರವು ನೀಡಬೇಕೆಂದು' ಮನವಿ ಮಾಡಿದ್ದಾರೆ.Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!