Top

ಪರಮ್ ಚಿತ್ರಕತೆ ಗೊತ್ತಾ?


Asianet News Saturday 27 August 2016 08:20 pm IST Interview
ಪರಮ್ ಚಿತ್ರಕತೆ ಗೊತ್ತಾ?
27 Aug

- ನವೀನ್ ಕೊಡಸೆ

ಮೂಲತಃ ಬೆಂಗಳೂರಿಗರಾದ ಪರಮೇಶ್ವರ್ ವಾಣಿಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ಈ ನಡುವೆಯೇ ಅವರನ್ನು ರಂಗಭೂಮಿ ಸೆಳೆಯಿತು. ‘ಗೋದಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದಲ್ಲಿ ಎಸ್‌ಐ ತಿಮ್ಮಪ್ಪ ಪಾತ್ರದ ಮೂಲಕ ಜನರಿಗೆ ಪರಿಚಿತರಾದ ಇವರು, ‘ಮತ್ತೆ ಮತ್ತೆ ತೇಜಸ್ವಿ’ ಕಿರುಚಿತ್ರದ ಮೂಲಕ ನಿರ್ದೇಶನ ಕ್ಷೇತ್ರದಲ್ಲಿಯೂ ಸೈ ಎನಿಸಿಕೊಂಡವರು. ಸದ್ಯ ಇವರ ಮುಂದೀಗ ಸಾಲು ಸಾಲು ಚಿತ್ರಗಳಿವೆ. ಈ ಬಹುಮುಖ ಪ್ರತಿಭೆ ಸುವರ್ಣನ್ಯೂಸ್ ವೆಬ್'ಸೈಟ್ ಜೊತೆ ಅನಿಸಿಕೆ ಹಂಚಿಕೊಂಡಾಗ...

- ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರಕ್ಕೆ ಅವಕಾಶ ಬಂದಿದ್ದು ಹೇಗೆ?

ಈ ಸಿನಿಮಾದಲ್ಲಿ ಅಭಿನಯಿಸುತ್ತೇನೆಂದು ನಾನು ನಿರೀಕ್ಷಿಸಿರಲಿಲ್ಲ. ನಿರ್ದೇಶಕ ಹೇಮಂತ್ ರಾಜ್‌ರ ಅನಿರೀಕ್ಷಿತ ಫೋನ್ ಕರೆಯಿಂದಾಗಿ ಒಮ್ಮೆ ಆಡಿಶನ್‌ಗೆ ಹೋದಾಗ ಒಂದು ಸ್ಕ್ರಿಪ್ಟ್ ಕೊಟ್ಟು ಅಭಿನಯಿಸಲು ಹೇಳಿದ್ರು. ನಾನು ಇದನ್ನು ಸವಾಲಾಗಿ ತೆಗೆದುಕೊಂಡು ತುಂಬಾ ಚೆನ್ನಾಗಿ ಆಡಿಷನ್ ಕೊಟ್ಟೆ. ಚಿತ್ರದಲ್ಲಿ ಬರುವ ಎಸ್‌ಐ ತಿಮ್ಮಪ್ಪ ಪಾತ್ರಕ್ಕೆ ನೀವೇ ಸೂಕ್ತ ಎಂದು, ಆ ಪಾತ್ರಕ್ಕೆ ಪರಿಚಯಿಸಿದರು. ನನಗೂ ಆ ಪಾತ್ರ ಇಷ್ಟವಾಯಿತು. ತುಂಬಾ ಆದರ್ಶವಿಟ್ಟುಕೊಂಡ ಎಸ್‌ಐ ತಿಮ್ಮಪ್ಪನಿಗೆ ತಾನು ನಿರೀಕ್ಷೆಗೂ ಮೀರಿದ ಪ್ರಕರಣದ ತನಿಖೆ ನಡೆಸುವ ಅವಕಾಶ ಬರುತ್ತದೆ. ಚಿತ್ರದ ಕೊನೆಯಲ್ಲಿ ದುರಂತ ಅಂತ್ಯವನ್ನು ಕಾಣಬೇಕಾಗುತ್ತದೆ. ಈ ಚಿತ್ರದ ನಂತರ ನನ್ನನ್ನು ಗುರುತಿಸುವವರ ಸಂಖ್ಯೆ ಜಾಸ್ತಿಯಾಯಿತು.

- ನಟನೆಯತ್ತ ಒಲವು ಮೂಡಿದ್ದು ಹೇಗೆ?

ನಾನು ಕಾಲೇಜು ಹಂತಗಳಲ್ಲೇ ಕಿರುನಾಟಕ, ಮೂಕಾಭಿನಯದಲ್ಲಿ ಪಾಲ್ಗೊಳ್ಳುತ್ತಿದ್ದೆ. ಒಮ್ಮೆ ಜ್ಞಾನಭಾರತಿ ಕಾಲೇಜು ಆವರಣದಲ್ಲಿ ನಡೆದ ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭೂಮಿಯ ಕುರಿತಂತೆ ಕಿರುನಾಟಕ ಪ್ರದರ್ಶನ ನೀಡಿದ್ದೆವು. ನಮಗೆ ಪ್ರಶಸ್ತಿ ಬರದಿದ್ದರೂ ಕಾಲೇಜು ಮಟ್ಟದಲ್ಲಿ ನಮ್ಮನ್ನು ಗುರುತಿಸಿಕೊಳ್ಳಲು ಸಹಾಯಕವಾಯಿತು. ಇದು ಕಲೆ, ನಾಟಕಗಳಲ್ಲಿ ಇನ್ನೂ ಹೆಚ್ಚಿಗೆ ತೊಡಗಿಸಿಕೊಳ್ಳಲು ಪ್ರೇರಣೆ ನೀಡಿತು. ‘ನಟರಂಗ’ ಎಂಬ ಹವ್ಯಾಸಿ ತಂಡಕ್ಕೆ ಸೇರಿಕೊಂಡೆ. 2004ರ ಕುವೆಂಪು ಶತಮಾನೋತ್ಸವ ವರ್ಷದಲ್ಲಿ ‘ಕಾನೂರು ಹೆಗ್ಗಡತಿ’ ನಾಟಕದಲ್ಲಿ ಅಭಿನಯಿಸಿದೆ. ಅಲ್ಲಿ ಗಾಡಿ ನಿಂಗನ ಪಾತ್ರದಲ್ಲಿ ಅಭಿನಯಿಸಿದ ನೆನಪು ನನಗೆ ಇನ್ನೂ ಹಾಗೆಯೇ ಇದೆ. ನಂತರ ಸಮಷ್ಠಿ ರಂಗತಂಡ ಸೇರಿದೆ. ೨೦೧೦ರಲ್ಲಿ ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾ ಸೇರಿದೆ. ಅಲ್ಲಿ ಚಿದಂಬರ ಜಂಬೆ ನನ್ನ ಗುರುಗಳಾಗಿದ್ದರು. ಅವರಿಂದ ನನಗೆ ನನ್ನ ಗುರಿ ಸ್ಪಷ್ಟವಾಗುತ್ತಾ ಹೋಯಿತು.

- ರಂಗಭೂಮಿಯಿಂದ ನೀವು ಸಿನೆಮಾದತ್ತ ಹೊರಳಿದ್ದು ಹೇಗೆ?

ಸೀರಿಯಲ್ ಜಗತ್ತು ನನ್ನನ್ನು ಹತ್ತಿರವೂ ಸೇರಿಸಲಿಲ್ಲ. 2012ರಲ್ಲಿ ನಿರ್ದೇಶಕ ಜಯತೀರ್ಥ ಅವರು ನನಗೆ ‘ಟೋನಿ’ ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಲು ಅವಕಾಶ ಕೊಟ್ಟರು. ನಂತರ ‘ಬುಲೆಟ್ ಬಸ್ಯಾ’ದಲ್ಲೂ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದೆ. ಇದರಿಂದ ಪಾತ್ರದ ಒಳ- ಹೊರಗುಗಳನ್ನು ಅರಿಯಲು ಸಾಧ್ಯವಾಯಿತು. ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದು ನನಗೆ ಸಾಕಷ್ಟು ಒಳ್ಳೆಯ ಅನುಭವಗಳನ್ನು ನೀಡಿತು. ರಂಗಭೂಮಿಯ ಹಿನ್ನೆಲೆಯವರಾದ ಪತ್ನಿ ಕವಿತಾಳ ಸಲಹೆಗಳು, ಪ್ರೋತ್ಸಾಹ ಚಿತ್ರರಂಗದಲ್ಲಿ ನೆಲೆ ನಿಲ್ಲಲು ಕಾರಣವಾಗಿದೆ.

- ನಟನೆಯಿಂದ ನಿರ್ದೇಶನದತ್ತ ಜಿಗಿಯುತ್ತೀರಾ?

ಎರಡು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ನಂತರ ‘ಮತ್ತೆ ಮತ್ತೆ ತೇಜಸ್ವಿ’ ಕಿರುಚಿತ್ರವನ್ನು ನಿರ್ಮಿಸಿದೆ. ಅದಕ್ಕೆ ಈಗಲೂ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇತ್ತೀಚೆಗಷ್ಟೇ ಎಂ.ಎಂ. ಕಲಬುರ್ಗಿ ಜೀವನ ಆಧರಿಸಿದ ‘ಮಾರ್ಗಕ್ಕೆ ಕೊನೆಯಿಲ್ಲ’ ಚಿತ್ರವನ್ನು ನಿರ್ದೇಶಿಸಿದ್ದು, ಪ್ರದರ್ಶನಗೊಂಡಿದೆ. ಖಂಡಿತ ಮುಂದಿನ ದಿನಗಳಲ್ಲಿ ಒಂದೊಳ್ಳೆ ಸಿನಿಮಾವನ್ನು ನಿರ್ಮಾಣ ಮಾಡುತ್ತೇನೆ.

- ಚಿತ್ರರಂಗಕ್ಕೆ ಕಾಲಿಡಬೇಕು ಅಂದ್ರೆ ಗಾಡ್ ಫಾದರ್ ಅವಶ್ಯಕತೆಯಿದೆಯಾ?

ನಮಗೆ ಕಲೆಯ ಬಗ್ಗೆ ನಂಬಿಕೆ, ಬದ್ಧತೆಯಿದ್ದರೆ ಗಾಡ್ ಫಾದರ್‌ನ ಅವಶ್ಯಕತೆಯಿಲ್ಲ. ಚಿತ್ರರಂಗದ ಹಿನ್ನೆಲೆಯಿಂದ ಬಂದವರಿಗೆ ಒಂದಷ್ಟು ಅಡ್ವಾಂಟೇಜ್ ಇರುತ್ತೆ ಅಷ್ಟೇ ಹೊರತು, ಅದರಿಂದಲೇ ಎಲ್ಲ ಸಾಧ್ಯ ಅನ್ನೋದೆಲ್ಲ ಸುಳ್ಳು. ಚಿತ್ರರಂಗದಲ್ಲಿ ಎಲ್ಲ ರಂಗದಲ್ಲಿ ಪಳಗಿ ಬಂದವರು ಹೆಚ್ಚುಕಾಲ ನೆಲೆ ನಿಲ್ಲುತ್ತಾರಷ್ಟೇ.

- ಮುಂದಿನ ನಿಮ್ಮ ಚಿತ್ರಗಳ ಬಗ್ಗೆ?

ಜಯತೀರ್ಥ ನಿರ್ದೇಶನದ ‘ಬ್ಯೂಟಿಫುಲ್ ಮನಸುಗಳು’ ಚಿತ್ರದಲ್ಲಿ ಹೀರೋ ಆಗಿ ನಟಿಸುತ್ತಿದ್ದೇನೆ. ‘ಅಮರಾವತಿ’ಯಲ್ಲಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ‘ಬಬ್ಲೂಷ’ ಎನ್ನುವ ಥ್ರಿಲ್ಲರ್ ಸಿನಿಮಾದಲ್ಲಿ ಸೆಕೆಂಡ್ ಹೀರೋ ಆಗಿ ನಟಿಸುತ್ತಿದ್ದೇನೆ. ‘ಹತ್ಯಾರ್’ ಸಿನಿಮಾ ಇನ್ನಷ್ಟೇ ಆರಂಭವಾಗಬೇಕಿದೆ. ಸದ್ಯದಲ್ಲಿಯೇ ಹಂಸಲೇಖ ಅವರು ಸಿನಿಮಾವನ್ನು ನಿರ್ಮಿಸಲಿದ್ದು, ಅದರಲ್ಲೂ ನೀವು ನನ್ನನ್ನು ಕಾಣಬಹುದು.Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!