Top

ಮಗು ಹಠಕ್ಕೆ ಪರ್ಯಾಯ ಉತ್ತರಗಳ ಚಿಕಿತ್ಸೆ


Asianet News Tuesday 06 September 2016 05:17 pm IST Health
ಮಗು ಹಠಕ್ಕೆ ಪರ್ಯಾಯ ಉತ್ತರಗಳ ಚಿಕಿತ್ಸೆ
06 Sep

-ಡಾ. ಕೆ ಎಸ್ ಶುಭ್ರತಾ

ಸಿರಿ ನಾಲ್ಕು ವರ್ಷದ ಮುದ್ದು ಕಂದ. ತಂದೆ- ತಾಯಿಗೆ ಬಲು ಪ್ರೀತಿ. ಸಿರಿಯೇನೋ ತುಂಬಾ ಚುರುಕಿನ ಹುಡುಗಿ, ಬುದ್ಧಿವಂತೆ ಕೂಡ. ಆದರೆ ಅಷ್ಟೇ ಹಠವೂ ಇದೆ. ಸಿರಿಯ ತಂದೆ ಬೆಳಗ್ಗೆ ಕೆಲಸಕ್ಕೆ ಹೋದರೆ ಬರುವುದು ರಾತ್ರಿ ಎಂಟು ಗಂಟೆಗೇ. ಸಿರಿಯ ತಾಯಿಗಂತೂ ಇತ್ತೀಚೆಗೆ ಸಾಕಾಗಿ ಹೋಗಿದೆ. ಬೆಳಗ್ಗೆ ಎದ್ದಾಗ ಹಲ್ಲು ಉಜ್ಜುವುದರಿಂದ, ರಾತ್ರಿ ಮಲಗುವವರೆಗೆ ಹಠ. ಹಲ್ಲು ಉಜ್ಜುವುದಿಲ್ಲ, ತಿಂಡಿ ತಿನ್ನುವುದಿಲ್ಲ, ಚಾಕ್ಲೆಟ್ ಬೇಕೇ ಬೇಕು, ಅಂಗಡಿಗೆ ಹೋದರೆ ಆಟದ ಸಾಮಾನು ಕೊಡಿಸು ಎಂದು ದಿನವೂ ಒಂದಲ್ಲ ಒಂದು ಹಠ, ರಂಪಾಟ. ‘ಅದು ಬೇಡ, ಇದು ಬೇಡ’ ಎಂದು ಹೇಳಿ ಹೇಳಿ ರೋಸಿದ್ದಾಳೆ ಸಿರಿಯ ತಾಯಿ.

ಮಕ್ಕಳು, ಅಂಬೆಗಾಲು ಬಿಟ್ಟು ನಡೆಯುವುದಕ್ಕೆ ಪ್ರಾರಂಭಿಸಿ, ಮುದ್ದು ಮುದ್ದಾಗಿ ಮಾತನಾಡತೊಡಗಿದಾಗ ನಮಗೂ ಪ್ರೀತಿ ಉಕ್ಕಿ ಹರಿಯುತ್ತದೆ. ಮುದ್ದು ಮಾಡೋಣವೆಂದು ತವಕ. ಈ ಭರದಲ್ಲಿ ಮಕ್ಕಳು ಹಠವನ್ನೂ ಕಲಿಯುತ್ತಾರೆ. ಅವಿಧೇಯತನವನ್ನೂ ರೂಢಿಸಿಕೊಳ್ಳುತ್ತಾರೆ. ಅದಕ್ಕೇ ಈ ವಯಸ್ಸನ್ನು ‘Terrible two’s’’ ಎಂದು ಕರೆಯುವುದು. ಈ ಸಮಯದಲ್ಲಿ ಪೋಷಕರಿಗೆ ಮಕ್ಕಳನ್ನು ಸಂಭಾಳಿಸುವಲ್ಲಿ ಸಾಕಾಗಿ ಹೋಗುತ್ತದೆ. ದೈನಂದಿನ ಚಟುವಟಿಕೆಗಳಲ್ಲಿ, ಇಲ್ಲ, ಕೊಡಿಸುವುದಿಲ್ಲ, ಇದನ್ನು ಮಾಡಬೇಡ, ಅದನ್ನು ಮುಟ್ಟಬೇಡ ಎಂದು ಹೇಳುವುದರಲ್ಲೇ ಬಹಳಷ್ಟು ಸಮಯ ಕಳೆಯುತ್ತದೆ. ಇದಕ್ಕೆ ಮಕ್ಕಳು ಪ್ರತ್ಯುತ್ತರವಾಗಿ ಅಳುವುದು, ಹಠ ಹಿಡಿಯುವುದು ಮಾಡುತ್ತಾರೆ. ತಂದೆ- ತಾಯಿ ಸಂಯಮ ಕಳೆದುಕೊಂಡು ಮಗುವಿಗೆ ಬೈದು, ಹೊಡೆಯುತ್ತಾರೆ. ಹಾಗಾದರೆ ಈ ನಕಾರಾತ್ಮಕ ಉತ್ತರಗಳನ್ನು ತಡೆದರೆ, ಅದರಿಂದಾಗುವ ಈ ಸರಪಳಿ ಪ್ರಕ್ರಿಯೆಯನ್ನು (Chain reaction) ತಡೆಯಬಹುದೆ? ಹೌದು ಎನ್ನುತ್ತದೆ ಮನಃಶಾಸ್ತ್ರ ಅಧ್ಯಯನಗಳು. ಒಂದು ಕ್ಷಣ ಕುಳಿತು ಯೋಚಿಸಿದರೆ, ‘ಇಲ್ಲ/ ಬೇಡ’ ಎಂದು ನಕಾರಾತ್ಮಕವಾಗಿ ಉತ್ತರಿಸುವ ಬದಲು ಬೇರೆಯ ರೀತಿಗಳಲ್ಲಿ ಈ ಸಂದರ್ಭವನ್ನು ನಿಭಾಯಿಸಬಹುದು.

-ಮಗುವಿನ ಗಮನವನ್ನು ಬೇರೆಯ ಕಡೆ ಹೋಗುವಂತೆ ಮಾಡುವುದು (Distraction). ಉದಾಹರಣೆಗೆ ಮಗು ಹಲ್ಲು ಉಜ್ಜುವುದಿಲ್ಲವೆಂದು ಹಠ ಶುರುಮಾಡಿದರೆ, ನಾವು ಹಲ್ಲುಗಳನ್ನು ಹುಳುಕು ಮಾಡುವ ಕೀಟಗಳ ಬಗ್ಗೆ ಕತೆ ಹೇಳುತ್ತಾ ಮಗುವಿಗೆ ಆ ಕತೆಯಲ್ಲಿ ಆಸಕ್ತಿ ತರಿಸಿ, ಹಲ್ಲುಜ್ಜುವಂತೆ ಮಾಡುವುದು.

-ಮಗು ಇವತ್ತು ತಾನು ಕೊಳೆಯಾದ ಬಟ್ಟೆಯನ್ನೇ ಹಾಕಿಕೊಳ್ಳುತ್ತೇನೆಂದು ಹಠ ಹಿಡಿದಾಗ, ಬೇಡ ಎನ್ನುವ ಬದಲು, ಮಗುವಿಗೆ ಬೇರೆಯ ಎರಡು ಬಟ್ಟೆಗಳನ್ನು ತೋರಿಸಿ, ಎರಡರಲ್ಲಿ ಒಂದನ್ನು ಆರಿಸುವ ಸ್ವಾತಂತ್ರ್ಯ ನೀಡುವುದು (Offering choices).

- ಕೆಲವು ಬಾರಿ ಅಂತಹ ಸಂದರ್ಭಗಳನ್ನು ಸಂಪೂರ್ಣವಾಗಿ ತಡೆಯಬಹುದು. ಉದಾಹರಣೆಗೆ ಮೂರು ವರ್ಷದ ಮಗುವನ್ನು, ಅದು ಹಠ ಮಾಡುತ್ತದೆಂದು ತಿಳಿದೂ ಆಟದ ಸಾಮಾನು ಅಂಗಡಿಗೆ ಕರೆದುಕೊಂಡು ಹೋಗುವುದು ಹಿರಿಯರದೇ ತಪ್ಪು.

-ಮಗು ಮರಳಿನೊಂದಿಗೆ ಆಡುತ್ತಿದೆ ಎಂದುಕೊಳ್ಳೋಣ. ಆ ಮರಳನ್ನು ಅದು ಎಲ್ಲ ಕಡೆ ಚೆಲ್ಲುತ್ತಿದ್ದರೆ, ನಾವು ಅದಕ್ಕೆ ‘ಹಾಗೆ ಮಾಡಬೇಡ’ ಎನ್ನುವುದಕ್ಕಿಂತ, ಏನು ಮಾಡಬೇಕು ಎಂಬುದನ್ನು ಮಾಡಿ ತೋರಿಸಬೇಕು.

-ಇನ್ನೂ ಕೆಲವು ಬಾರಿ ಕೆಲವು ಸಣ್ಣಪುಟ್ಟ ವರ್ತನಾ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡಿದರೇ, ತನ್ನಷ್ಟಕ್ಕೇ ಅದು ಕಡಿಮೆಯಾಗುತ್ತದೆ. ಉದಾಹರಣೆಗೆ, ಮಗು ಯಾವುದೋ ಒಂದು ಕೆಟ್ಟ ಶಬ್ದವನ್ನು ಉಪಯೋಗಿಸಲು ಕಲಿತಿದ್ದರೆ, ಅದನ್ನು ಉಚ್ಚರಿಸಿದಾಗ, ಅದಕ್ಕೆ ಯಾರೂ ಗಮನ ನೀಡದೇ ಇರುವುದು ಮತ್ತು ಮನೆಯಲ್ಲಿ ಬೇರೆ ಯಾರೂ ಆ ಶಬ್ದಗಳನ್ನು ಮಾತನಾಡದೇ ಇರುವುದು, ನಾವು ‘ನೀನು ಆ ಶಬ್ದ ಬಳಸಬೇಡ’ ಎಂದು ಮತ್ತೆ ಮತ್ತೆ ಹೇಳಿದರೆ, ಮಗುವಿಗೆ ಕೆಟ್ಟ ಕುತೂಹಲ ಉಂಟಾಗಿ, ಸಿಟ್ಟು ಬಂದಾಗ ಮತ್ತೆ ಉಪಯೋಗಿಸುತ್ತದೆ.

ಮುಂದಿನ ಬಾರಿ ನಿಮ್ಮ ಮಗು ಹಠ ಹಿಡಿದಾಗ, ಈ ಮೇಲಿನವುಗಳಲ್ಲಿ ಒಂದನ್ನು ಮಾಡುತ್ತೀರಿ ತಾನೆ?

(ಕನ್ನಡ ಪ್ರಭ)Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!