Top

ಜಂಕ್'ಫುಡ್'ಗೆ ಶುಗರ್, ಬಿಪಿ ಫ್ರೀ


Asianet News Tuesday 06 September 2016 03:15 pm IST Health
ಜಂಕ್'ಫುಡ್'ಗೆ ಶುಗರ್, ಬಿಪಿ ಫ್ರೀ
06 Sep

-ಪ್ರಕಾಶ ಅರಳಿ

ರಸ್ತೆಬದಿಯಲ್ಲೀಗ ಎಲ್ಲೆಂದರಲ್ಲಿ ಜಂಕ್‌ಫುಡ್‌ಗಳ ಜಾತ್ರೆ. ಕರಿದ ತಿಂಡಿಗಳದ್ದೇ ಕಾರುಬಾರು. ತಿನ್ನದೆ ಹಾಗೆ ಸುಮ್ಮನೆ ನೋಡಿ ಹೋದರೆ ಹೊಟ್ಟೆಯಲ್ಲೂ ಏನೋ ಕಿಚ್ಚು. ಆಸೆಯನ್ನು ತಣಿಸಲು ಹಾಗೂ ನೀವು ಇವನ್ನು ಸೇವಿಸಿದರೆ ಹೊಟ್ಟೆಯಲ್ಲಿ ಹೊತ್ತಿಕೊಳ್ಳುವ ಬೆಂಕಿ ಯಾವ ಪ್ರಮಾಣದ್ದು ಗೊತ್ತೇ? ಇವುಗಳಲ್ಲಿನ ಅಪಾಯಕಾರಿ ರಾಸಾಯನಿಕ ಮಿಶ್ರಣಗಳು ನಮ್ಮೊಳಗೆ ಹಲವು ಕಾಯಿಲೆಗಳಿಗೆ ಜನ್ಮ ಕೊಡುತ್ತವೆ. ಬೊಜ್ಜು, ಹೃದ್ರೋಗ, ತೂಕ ಹೆಚ್ಚಾಗುವಿಕೆ, ಶುಗರ್, ಕ್ಯಾನ್ಸರ್- ಹೀಗೆ ಹೇಳುತ್ತಾ ಹೋದರೆ ಕೊನೆಯೇ ಇಲ್ಲ.

ಜಗತ್ತಿನಾದ್ಯಂತ ಅಂದಾಜು ೨.೫ ಶತಕೋಟಿ ಜನರು (ಯುವಜನಾಂಗವೇ ಹೆಚ್ಚು) ನಿತ್ಯ ರಸ್ತೆ ಬದಿ ಆಹಾರಕ್ಕೆ ಮುಗಿ ಬೀಳುತ್ತಿದ್ದಾರೆ ಎಂದು ಆಹಾರ ಹಾಗೂ ಕೃಷಿ ಸಂಸ್ಥೆ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ಇಂಥ ಆಹಾರ ಕೇಂದ್ರಗಳಲ್ಲಿ ಶುದ್ಧತೆಯ ಪರೀಕ್ಷೆ ನಡೆಸಬೇಕೆಂದು ಆದೇಶಿಸಿದ್ದರೂ, ನಮ್ಮ ದೇಶದಲ್ಲಿ ಅದರ ಪರಿಪಾಲನೆ ಸರಿಯಾಗಿ ಆಗುತ್ತಿಲ್ಲ. ಇಂದು ಬೀದಿ ಬದಿಯಲ್ಲಿ ತಿನ್ನುವುದೂ ಒಂದು ಫ್ಯಾಶನ್ ಆಗಿದೆ. ರೋಗಗಳನ್ನು ನಾವೇ ಮೈಮೇಲೆ ಎಳೆದುಕೊಳ್ಳುವ ಭರಾಟೆ ಇದಿರಬಹುದು.

ಅಂಥದ್ದೇನಿದೆ ಜಂಕ್‌ಫುಡ್‌ನಲ್ಲಿ?

ಮೊದಲೇ ನಮ್ಮದು ಎಲುಬಿಲ್ಲದ ನಾಲಿಗೆ. ಉಪ್ಪು, ಹುಳಿ, ಸಿಹಿ ಜತೆಗೆ ಸ್ವಲ್ಪ ಖಾರ ಕಂಡ್ರೆ ಸಾಕು, ನಮ್ಮ ನಾಲಿಗೆಯನ್ನು ಕಂಟ್ರೋಲ್ ಮಾಡೋದೇ ಕಷ್ಟ. ಜೊಲ್ಲು ಸುರಿಸೋಕೆ ಶುರು. ಹೀಗಿರುವಾಗ ಇಷ್ಟವಾದ ಆಹಾರ ಪದಾರ್ಥದಲ್ಲಿ ಸ್ವಲ್ಪ ಸಿಹಿ, ಹುಳಿ, ಖಾರ ಜಾಸ್ತಿ ಮಾಡಿ ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆ ಬಳಸುವ ಮೂಲಕ ಬಣ್ಣ ಬಣ್ಣದ ವಿನೇಗರ್ ಸೇರಿದಂತೆ ಹದಭರಿತ ರಾಸಾಯನಿಕ ಮಿಶ್ರಣ ಮಾಡಿ ನಂತರ ವೈವಿಧ್ಯಮಯ ಚಿತ್ತಾರಗಳಲ್ಲಿ ಡೆಕೋರೇಟ್ ಮಾಡಿ, ಸೈಡ್ಸ್‌ಗಳ ಜತೆಗೆ ನೀಡುವ ಈ ಆಹಾರ ಸಾಮಾನ್ಯವಾಗಿ ಯಾರನ್ನೇ ಆಗಲಿ ಮನಸೆಳೆಯದೇ ಇರಲಿಕ್ಕಿಲ್ಲ. ಪಕ್ಕಾ ಲೋಕಲ್ ಸ್ಟೆ ಲ್‌ನಲ್ಲಿ ಹಿಂದೆಮುಂದೆ ನೋಡದೆ ಬಾಯಿ ಚಪ್ಪರಿಸಿಯೇ ಬಿಡುತ್ತೇವೆ. ಇವುಗಳಿಗೆ ಮಾದಕ ರುಚಿಯ ಗತ್ತು ಬರುವುದು ಟೇಸ್ಟಿಂಗ್ ಪೌಡರ್ ಬಳಕೆಯ ಕಾರಣಕ್ಕೆ. ಅದು ಆರೋಗ್ಯವನ್ನೇ ಕಿತ್ತು ತಿನ್ನುವ ಪುಡಿ. ಅಲ್ಲದೆ, ರಾಸಾಯನಿಕ ಬಣ್ಣಗಳಿಂದಲೂ ಈ ಆಹಾರ ನಮ್ಮ ಆರೋಗ್ಯಕ್ಕೆ ದಕ್ಕೆ ತರುತ್ತದೆ.

ಮುಖ್ಯ ಕಾಯಿಲೆಗಳು

ಅತಿಸಾರ, ವಾಂತಿ, ಹೊಟ್ಟೆಯಲ್ಲಿ ಹುಳು, ಜಾಂಡೀಸ್, ತೋಕ ಜಾಸ್ತಿ ಆಗುವುದು, ಬೊಜ್ಜು ಬರುವುದು, ಗ್ಯಾಸ್ಟ್ರಿಕ್, ಅಜೀರ್ಣ, ರಕ್ತಹೀನತೆ, ಕ್ಯಾನ್ಸರ್, ಡಯಾಬಿಟೀಸ್, ರಕ್ತದೊತ್ತಡ ಸೇರಿದಂತೆ ಮತ್ತಿತರ ಬಹುತೇಕ ಕಾಯಿಲೆಗಳು ನಮ್ಮನ್ನು ಬಾಧಿಸುತ್ತವೆ. ಮೊದಲೇ ಈ ಆಹಾರಗಳ ತಯಾರಿಕೆಯಲ್ಲಿ ಶುದ್ಧ ನೀರು ಬಳಸಿರುವುದಿಲ್ಲ. ಅಶುದ್ಧ ನೀರಿನಿಂದ ಮೊದಲು ಬರುವ ರೋಗವೇ ಜಾಂಡೀಸ್ ಆಗಿರುವುದರಲ್ಲಿ ಅನುಮಾನವೇ ಇಲ್ಲ.

ಅಪಾಯ ಅಪಾರ

-ವಿನೇಗರ್‌ನಲ್ಲಿನ ರಾಸಾಯನಿಕಗಳು ಮೆದುಳಿನ ಕೋಶಗಳನ್ನು ಕೊಲ್ಲಬಹುದು

-ಆಹಾರ ಸರಿಯಾಗಿ ಜೀರ್ಣ ಆಗದೇ ಇರುವುದು

-ಕಾಲರಾದಂಥ ಸಾಂಕ್ರಮಿಕ ಕಾಯಿಲೆಗೆ ಆಹ್ವಾನ

-ನಿಮ್ಮ ನಾಲಿಗೆ ಗೊತ್ತಿಲ್ಲದೆ ಮನೆರುಚಿಯನ್ನು ಕಳೆದುಕೊಳ್ಳುವುದು

-ಸದಾ ಹೊರಗೆ ಆಹಾರ ಸೇವಿಸುವುದರಿಂದ ಕೌಟುಂಬಿಕ ಬಾಂಧವ್ಯದ ಕೊಂಡಿ ಕಳಚಿ ಬೀಳುವುದು

-ಹೊರಗೆ ಆಹಾರ ಸೇವಿಸಿದ ಮೇಲೆ ಏನೋ ಮಾನಸಿಕ ಕಿರಿಕಿರಿ

-ಮನೆಯವರೊಂದಿಗೆ ಸಂವಹನ ಕೊರತೆ

-ಸೇವಿಸಲು ಬಳಸಿದ ಪ್ಲಾಸ್ಟಿಕ್ ತಟ್ಟೆಗಳನ್ನು ಎಸೆಯುವುದರಿಂದ ಪರಿಸರಕ್ಕೆ ಹಾನಿ

ಮಾಡಬೇಕಾದ್ದೇನು?

-ನಮ್ಮ ಆಹಾರದಲ್ಲಿ ಸುತ್ತಲಿನ ಪ್ರದೇಶವೂ ಪರಿಣಾಮ ಬೀರಲಿದ್ದು, ಪರಿಸರ ಸ್ವಚ್ಛತೆ, ಧೂಳು, ವಾಸನೆ ಪರಿಗಣಿಸಿ ಅಂಗಡಿಗೆ ಪ್ರವೇಶ ಕೊಡಬೇಕು. ಸುತ್ತ ಚರಂಡಿ ಇದೆಯೇ ಗಮನಿಸಬೇಕು. ಯಾಕೆಂದರೆ ಚರಂಡಿಯಲ್ಲಿನ ನೊಣ ನಮ್ಮ ಆಹಾರದ ತಟ್ಟೆ ಮೇಲೆ ಕುಳಿತುಕೊಳ್ಳುವ ಸಂಭವ ಹೆಚ್ಚಿರುತ್ತದೆ.

-ಹೈ ಕ್ಯಾಲೊರಿ ಆಹಾರದಿಂದ ಆದಷ್ಟು ದೂರವಿರಿ. ಜಾಸ್ತಿ ಜನ ಹೋಗಿಬರುವ ಹಾಗೂ ಆಹಾರ ಪದಾರ್ಥ ಖರ್ಚಾಗುವ ಅಂಗಡಿಯಲ್ಲಿ ಮಾತ್ರ ಆಹಾರ ಸೇವಿಸಿ. ಯಾಕಂದ್ರೆ ಇಲ್ಲಿ ಮಾಡಿಟ್ಟ ಆಹಾರ ಯಾವಾಗಲೂ ಸರ್ಕ್ಯುಲೇಟ್ ಆಗುವುದರಿಂದ ಹೆಚ್ಚು ಫ್ರೆಶ್ ಆಗಿರುತ್ತೆ.

-ನೀವು ಪ್ರವೇಶಿಸುವ ಹೋಟೆಲ್ ಅಥವಾ ಗಾಡಿಗಳಲ್ಲಿ ಎಂಥ ನೀರು ಉಪಯೋಗಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಿ.

-ಸಾಧ್ಯವಾದಷ್ಟು ನೀವೇ ಮನೆಯಿಂದ ನೀರಿನ ಬಾಟಲ್ ಕೊಂಡೊಯ್ದರೆ ಅರ್ಧದಷ್ಟು ಅಪಾಯವನ್ನು ತಪ್ಪಿಸಬಹುದು.

-ತಲೆಗೆ ಟೋಪಿ, ಕೈವಸ್ತ್ರ, ಸ್ವಚ್ಛವಾದ ಬಟ್ಟೆ ಧರಿಸಿದ ಹೋಟೆಲ್ಲುಗಳ ಆಯ್ಕೆ ಉತ್ತಮ.

-ರಸ್ತೆಬದಿಯ ಗಾಡಿ ಆಗಿದ್ದರೆ ಅಲ್ಲಿ ಆಹಾರಕ್ಕೆ ಧೂಲು ಸೇರುವುದನ್ನು ನಿಯಂತ್ರಿಸುತ್ತಾರಾ ಎಂಬುದನ್ನು ತಿಳಿದುಕೊಳ್ಳಿ. ಶುಚಿತ್ವಕ್ಕೆ ಮಹತ್ವ ಕೊಡದೇ ಇದ್ದರೆ ಆಹಾರ ಸೇವಿಸಲು ಅದು ಯೋಗ್ಯ ಸ್ಥಳವಲ್ಲ.

-ಕೇವಲ ಹೋಟೆಲ್‌ನವರಷ್ಟೇ ಅಲ್ಲ, ನೀವೂ ಸ್ವಚ್ಛವಾಗಿ ಕೈ, ಬಾಯಿ ತೊಳೆದು ಆಹಾರ ಸೇವಿಸುವುದೂ ಸಭ್ಯ ಲಕ್ಷಣ.

ಬೀದಿ ಬದಿಯ ವ್ಯಾಪಾರಸ್ಥರು ಆಹಾರಗಳಲ್ಲಿ ಬಣ್ಣ ಬಣ್ಣದ ರಾಸಾಯನಿಕಗಳನ್ನು ಪೌಡರ್, ಕಳಪೆ ಎಣ್ಣೆಗಳನ್ನು ಬಳಸುತ್ತಾರೆ. ಇಂಥ ಗಾಡಿ, ಹೋಟೆಲ್ಲುಗಳಲ್ಲಿ ಶುದ್ಧ ನೀರನ್ನೂ ಬಳಸಿರುವುದಿಲ್ಲ. ಆಹಾರ ರುಚಿಯಿದೆ ಎಂದು ದೇಹದ ಆರೋಗ್ಯದ ರುಚಿಯನ್ನು ಕಳೆದುಕೊಳ್ಳುವುದು ತಪ್ಪು. ಮನೆ ಅಡುಗೆಯೇ ಶ್ರೇಷ್ಠ ಎಂಬುದನ್ನು ಅರಿತುಕೊಂಡರೆ, ಶೇ.೮೦ರಷ್ಟು ಕಾಯಿಲೆಗಳನ್ನು ದೂರವಿಡಬಹುದು.

-ಡಾ. ದಶರಥ

(ಕನ್ನಡ ಪ್ರಭ)Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!