Top

ಗಂಡಸರ ಒಲಿಂಪಿಕ್ಸ್ ಎಂಬ ಶತಮಾನದ ಅಣಕ


Asianet News Thursday 08 September 2016 12:12 pm IST Specials
ಗಂಡಸರ ಒಲಿಂಪಿಕ್ಸ್ ಎಂಬ ಶತಮಾನದ ಅಣಕ
08 Sep

ಮಹಿಳೆಯರನ್ನು ಗೇಲಿ ಮಾಡುವಂಥ ನುಡಿಗಳಿಗೆ ನಮ್ಮಲ್ಲೇನೂ ಬರವಿಲ್ಲ. ಆದರೆ ಪುರುಷರನ್ನು ಗೇಲಿ ಮಾಡುವಂಥ ಅಣಕಗಳು ಮಹಿಳಾ ವಲಯದಿಂದ ಬರುವುದೇ ಅಪರೂಪ. ಹಾಗಿರುವಾಗ, ರಿಯೋ ಒಲಿಂಪಿಕ್ಸ್ ಹಿನ್ನೆಲೆಯಲ್ಲಿ ಕಂಡುಬಂದ ಅದ್ಭುತ ಅಣಕವೊಂದು ಇಂಡಿಯಾದ ಗಂಡಸರ ಆತ್ಮಾವಲೋಕನಕ್ಕೆ ಕಾರಣವಾಗುವ ಬದಲು ವ್ಯರ್ಥ ಸಮರ್ಥನೆಗಳ ಕಸರತ್ತಿಗೆ ಬಲಿಯಾಗಿದ್ದು ದುರಂತ

ಎದೆಬಡಿತ ಹೆಚ್ಚಾಗಿ ಹಣೆ ತುಂಬಾ ಬೆವರು ಅರಳಲಾರಂಭಿಸಿತ್ತು. ವಾರಂಗಲ್‌ನ ಕಾಕತೀಯ ಯುನಿವರ್ಸಿಟಿ ಮತ್ತು ಹೈದರಾಬಾದ್‌ನ ಉಸ್ಮಾನಿಯಾ ಯುನಿವರ್ಸಿಟಿ ನಡುವಿನ ಅಕ್ಷರಶಃ ಹೈವೋಲ್ಟೇಜ್ ವಾಲಿಬಾಲ್ ಪಂದ್ಯವದು. ಪ್ರತಿ ಬಾರಿ ಸರ್ವಿಸ್ ಮಾಡುವಾಗಲೂ ಕಾಕತೀಯ ತಂಡದ ಆ ಉದ್ದನೆಯ ಮನುಷ್ಯ ‘ಜೈ ತೆಲಂಗಾಣ’ ಎಂದು ಜೋರು ಅರಚುತ್ತಿದ್ದ. ಇದಕ್ಕೆ ಪ್ರತಿಯಾಗಿ ಅತ್ತ ಕಡೆಯಿಂದ, ಎತ್ತರಕ್ಕೆ ಜಿಗಿದು ಸರ್ವಿಸ್ ಮಾಡುತ್ತಿದ್ದ ಉಸ್ಮಾನಿಯಾ ತಂಡದ ತೆಳ್ಳನೆಯ ಹುಡುಗ ‘ಜೈ ಆಂಧ್ರ’ ಎಂಬ ಸದ್ದು ಮಾಡುತ್ತಿದ್ದ. ಸರ್ವಿಸ್ ಮಾಡುವಾಗ ಮಾತ್ರವಲ್ಲ, ಸರ್ವಿಸ್ ಕಟ್ ಮಾಡುವಾಗ, ನೆಟ್ ಬಳಿ ನಿಂತು ನೆಗೆದು ಬಾಲ್ ತಳ್ಳುವಾಗ, ಪಾಯಿಂಟ್ಸ್ ಬಂದಾಗ ಅಥವಾ ಕಳೆದುಕೊಂಡಾಗ ಕೂಡ ಎರಡೂ ಕಡೆಯಿಂದ ಹೀಗೆ ಘೋಷ ಮೊಳಗುತ್ತಿತ್ತು. ಒಂದೇ ಒಂದು ಸೆಕೆಂಡ್ ಕೂಡ ಯಾರೂ ನಿಂತಲ್ಲಿ ನಿಲ್ಲುತ್ತಿರಲಿಲ್ಲ, ಅತ್ತಿತ್ತ ನೋಡುತ್ತಿರಲಿಲ್ಲ, ಏದುಸಿರು ಬಿಡುತ್ತಿದ್ದರೂ ನೀರು ಕುಡಿಯುತ್ತಿರಲಿಲ್ಲ! ದಕ್ಷಿಣ ಭಾರತ ವಿಶ್ವವಿದ್ಯಾನಿಲಯಗಳ ವಾಲಿಬಾಲ್ ಪಂದ್ಯಾವಳಿ (ಕುವೆಂಪು ವಿವಿ, 2012) ನೋಡಲು ಸೇರಿದ್ದ ನಮಗೆಲ್ಲ ಕುರುಕ್ಷೇತ್ರದ ಪ್ರೇಕ್ಷಕರ ಗ್ಯಾಲರಿಯಲ್ಲಿ ನಿಂತ ಅನುಭವ!

ಆಗಿನ್ನೂ ತೆಲಂಗಾಣ ಪ್ರತ್ಯೇಕ ರಾಜ್ಯ ಆಗಿರದಿದ್ದ ಕಾರಣ ಈ ಪಂದ್ಯವು ನೋಡುಗರ ಮನದಲ್ಲಿ ರಾಜಕೀಯ ಚರ್ಚೆಯೊಂದರ ಜೊತೆಗೆ ಅನೇಕ ಜೀವಂತ ಪ್ರಶ್ನೆಗಳನ್ನೂ ಹುಟ್ಟುಹಾಕಿತ್ತು. ಅಸಲಿಗೆ, ನಮ್ಮಲ್ಲಿನ ಪ್ರಾಥಮಿಕ ಶಾಲೆಗಳ ವಲಯ ಮಟ್ಟದ ಕ್ರೀಡಾಕೂಟದಿಂದ ಹಿಡಿದು ಒಲಿಂಪಿಕ್ಸ್‌ವರೆಗೂ ಯಾವುದೇ ಕ್ರೀಡಾಕೂಟ ಕೂಡ ಇಂಥದ್ದೊಂದು ಸಮಕಾಲೀನ ಸಾಂಸ್ಕೃತಿಕ ಅಥವಾ ಸಾಮಾಜಿಕ ಚರ್ಚೆಯನ್ನು ಒಳಗಿಟ್ಟುಕೊಂಡಿರುತ್ತದೆ. ಆದರೆ ಆ ಚರ್ಚೆ ಮಾತಿನ ರೂಪದಲ್ಲೇ ಇರಬೇಕು ಅಥವಾ ಪಂದ್ಯಾವಳಿಯ ವೇಳೆಯೇ ಹೊರಹೊಮ್ಮಬೇಕು ಅಂತೇನಿಲ್ಲ. ಇತ್ತೀಚೆಗೆ ತೆರೆಕಂಡ ರಿಯೋ ಒಲಿಂಪಿಕ್ಸ್ ವೇಳೆಯೂ ಮೂರು ಪ್ರಮುಖ ಚರ್ಚೆ ಕಂಡುಬಂದವು: ಒಂದು, ತನ್ನೆಲ್ಲ ದೇಶವಾಸಿಗಳಿಗೆ ಅನ್ನ, ನೀರು, ಸೂರನ್ನು ಇನ್ನೂ ಕಲ್ಪಿಸಲಾಗದ ಬ್ರೆಜಿಲ್ ಎಂಬ ಅಭಿವೃದ್ಧಿಶೀಲ ದೇಶ ಪ್ರತಿಷ್ಠೆಗಾಗಿ ಒಲಿಂಪಿಕ್ಸ್ ನಡೆಸಿದ್ದು; ಎರಡನೆಯದು, ಇದೇ ಮೊದಲ ಬಾರಿಗೆ ನಿರಾಶ್ರಿತರ ತಂಡವೊಂದು ಭಾಗವಹಿಸಿದ್ದು ಮತ್ತು ಮೂರನೆಯದು, ಡೋಪಿಂಗ್ ವಿವಾದದಿಂದಾಗಿ ರಷ್ಯಾ ಅನುಭವಿಸಿದ ಮುಖಭಂಗ. ಆ ಚರ್ಚೆಗಳು ಒತ್ತಟ್ಟಿಗಿರಲಿ. ಆದರೆ ಇದೇ ಕ್ರೀಡಾಕೂಟ ಇಂಡಿಯಾದಲ್ಲಿ ಹುಟ್ಟುಹಾಕಿದ ಚರ್ಚೆ ಮಾತ್ರ ಅತ್ಯಂತ ವಿಭಿನ್ನ ಮತ್ತು ಸ್ವಾರಸ್ಯಕರ ಕೂಡ. ಇಂಥದ್ದೊಂದು ಮಹತ್ವದ ಚರ್ಚೆಗೆ ಚಾಲನೆ ನೀಡಿದ್ದು, ‘ಪುರುಷರ ಒಲಿಂಪಿಕ್ಸ್ ಶುರುವಾಗೋದು ಯಾವಾಗ?’ ಎಂಬ ಅತ್ಯದ್ಭುತ ಕೇಳ್ವಿ.

ಜಿತು ರಾಯ್ ನಿರ್ಗಮನದೊಂದಿಗೇ ರಿಯೋದಲ್ಲಿ ಇಂಡಿಯಾದ ಪುರುಷರ ಸ್ಪರ್ಧೆ ಅಧಿಕೃತವಾಗಿ ಮುಗಿಯಿತಾದರೂ ಈ ಪ್ರಶ್ನೆ ಅಂತರ್ಜಾಲದಲ್ಲಿ ಹರಿದಾಡಲು ಶುರುವಾಗಿದ್ದು ಆಗಸ್ಟ್ 19ರ ರಾತ್ರಿ. ಅಂದಿನ ಬ್ಯಾಡ್ಮಿಂಟನ್ ಫೈನಲ್ ಪಂದ್ಯದ ನಂತರ, ಸಿಂಧು ಬೆಳ್ಳಿ ಗೆದ್ದ ಸಂಭ್ರಮ ಹಂಚಿಕೊಂಡ ಅನೇಕ ಹೆಣ್ಣುಮಕ್ಕಳು ಈ ಪ್ರಶ್ನೆಯನ್ನೂ ತೇಲಿಬಿಟ್ಟರು. ನಂತರದ ಒಂದು ವಾರ ಈ ಕುರಿತ ಚರ್ಚೆ ಸಾಮಾಜಿಕ ಜಾಲತಾಣಗಳನ್ನು ಆಳಿತು. ಈ ವೇಳೆ ಹೆಣ್ಣುಮಕ್ಕಳ ಪೋಸ್ಟ್ ಅಥವಾ ಸ್ಟೇಟಸ್‌ಗಳಿಗೆ ಪುರುಷರು ನೀಡಿದ ಪ್ರತಿಕ್ರಿಯೆಗಳು ಮೇಲ್ನೋಟಕ್ಕೆ ಸ್ವಾರಸ್ಯಕರ ಅಥವಾ ತಮಾಷೆ ಎನಿಸಿದರೂ, ಆ ಎಲ್ಲ ಮಾತುಗಳ ಆಳದಲ್ಲಿ ಇನ್ನೇನೋ ಇದ್ದಿದ್ದು ನಿಜ.

`ಹೆಣ್ಣುಮಗುವಿನ ತಂದೆಯಾಗಿ ನಾನು ಹೆಮ್ಮೆಪಡುವೆ,’ ‘ಗಂಡ್ಮಕ್ಳು ಜೀವನ ಸ್ವಲ್ಪ ಕಷ್ಟ ಇದೆ. ಲೇಡೀಸ್ ಫಸ್ಟ್ ಅಂತ ಮೂಢನಂಬಿಕೆ ಇಟ್ಟಿದ್ದೀವಲ್ಲ, ಇವೆಲ್ಲ ಬ್ಯಾನ್ ಆಗ್ಬೇಕು,’ ‘ಕಷ್ಟ ಕಾಲಕ್ಕೆ ಆಗೋರು ಹೆಣ್ಣುಮಕ್ಕಳೇ...’ -ಸಾಮಾಜಿಕ ಜಾಲತಾಣಗಳಲ್ಲಿ ನಡೆದ ಉದ್ದುದ್ದ ಚರ್ಚೆಗಳ ಪೈಕಿ ಗಂಡಸರು ಹಾಕಿದ ಫೋಸ್ಟ್‌ಗಳಿಗೆ ಗಂಡಸರಿಂದಲೇ ಸಿಕ್ಕ ಪ್ರತಿಕ್ರಿಯೆಯ ಸ್ಯಾಂಪಲ್‌ಗಳಿವು. ಸಾಕ್ಷಿ ಮಲಿಕ್, ದೀಪಾ ಕರ್ಮಾಕರ್, ಪಿ ವಿ ಸಿಂಧು ಅವರನ್ನು ಉಲ್ಲೇಖಿಸಿ ಗಂಡಸರು ನಡೆಸಿದ ಈ ಚರ್ಚೆಗಳಲ್ಲಿ ಸಕಾರಾತ್ಮಕ ಮನೋಭಾವ ಇದೆ ಎಂದು ಭಾವಿಸಲಾಗಿದೆ. ಅಂದರೆ, ಈ ನೆಲದಲ್ಲಿ ಹೆಚ್ಚೂಕಡಿಮೆ ಲಿಂಗ ತಾರತಮ್ಯವೇ ಇಲ್ಲ, ಹೆಣ್ಣುಮಕ್ಕಳನ್ನು ಸಹಜಕ್ಕಿಂತ ಹೆಚ್ಚಾಗಿಯೇ ಗೌರವಿಸುತ್ತಾರೆ, ಕಟ್ಟಿಕೊಂಡವನ ಮನೆಯಲ್ಲಿ ಅವಳನ್ನೂ ಮನುಷ್ಯಳಂತೆ ನಡೆಸಿಕೊಳ್ಳುತ್ತಾರೆ ಎಂಬ ಅರ್ಥ ಈ ಮಾತುಗಳಲ್ಲಿದೆ. ಆದರೆ ಅಸಲಿ ಪರಿಸ್ಥಿತಿ ಹಾಗಿದೆಯೇ ಎಂಬುದು ಪ್ರಶ್ನೆ. 34,651 ಅತ್ಯಾಚಾರ,4,437 ಅತ್ಯಾಚಾರ ಯತ್ನ,56,277 ಅಪಹರಣ ಮತ್ತು ಒತ್ತೆ, 7,624 ವರದಕ್ಷಿಣೆ ಸಾವು,1,12,402 ಗಂಡ ಮತ್ತು ಗಂಡನ ಕಡೆಯವರಿಂದ ಹಲ್ಲೆ, 9,898 ವರದಕ್ಷಿಣೆ ಕಿರುಕುಳ,82,422 ಹಲ್ಲೆ,4,060 ಆತ್ಮಹತ್ಯೆಗೆ ಪ್ರಚೋದನೆ,2,424 ಮಾನವ ಕಳ್ಳಸಾಗಣೆ... (ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೊ ವರದಿ) ಇವೆಲ್ಲ 2015ರಲ್ಲಿ ಇದೇ ಇಂಡಿಯಾದಲ್ಲಿ ದಾಖಲಾದ, ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು! ಮುಚ್ಚಿಹಾಕಿದ, ಸಂಧಾನ ನಡೆಸಿ ಸುಮ್ಮನಾಗಿಸಿದ ಪ್ರಕರಣಗಳು ಇದರ ಹಲವು ಪಟ್ಟು ಇದ್ದೀತು.

ಸಾಮಾಜಿಕ ಜಾಲತಾಣಗಳಲ್ಲಿನ ಚರ್ಚೆಗಳಿಗೆ ಇಷ್ಟು ಮಹತ್ವ ಕೊಡಬೇಕೇ ಎಂಬ ಪ್ರಶ್ನೆ ಬರಬಹುದು. ಆದರೆ ಈ ವಿಷಯಕ್ಕೆ ಸಂಬಂಧಪಟ್ಟಂತೆ ಸಾರ್ವಜನಿಕ ಮಾತುಕತೆಗಳಲ್ಲೂ ಇಂಥದ್ದೇ ಮನೋಭಾವ ಇಣುಕಿದೆಯಲ್ಲ? ‘‘ನನ್ನಪ್ಪ-ಅಮ್ಮ ಇಡೀ ಊರನ್ನೇ ಎದುರು ಹಾಕಿಕೊಂಡು ನನಗೆ ಟ್ರೇನಿಂಗ್ ಕೊಡಿಸಿದ್ದರು,’’ ಎಂದು ಸಾಕ್ಷಿ ಮಲಿಕ್ ಒದ್ದೆಗಂಟಲಿನಿಂದ ಹೇಳುವಾಗ ತಲೆದೂಗಿದ, ಸಿಂಧು ಫೈನಲ್ ತಲುಪಿದಾಗ ಆಕೆ ಗೆದ್ದೇ ಗೆಲ್ಲುತ್ತಾಳೆ ಎಂಬ ವಿಶ್ವಾಸದಿಂದ ಹಾರೈಸಿದ, ದೀಪಾ ಕರ್ಮಾಕರ್ ಸೋತು ಹನಿಗಣ್ಣಾದಾಗ ತಾವೂ ಕಣ್ಣಂಚಲ್ಲಿ ನೀರು ತರಿಸಿಕೊಂಡ ಪುರುಷರು ಬಹಳಷ್ಟು ಸಂಖ್ಯೆಯಲ್ಲಿ ಇರಬಹುದು. ಆದರೆ ಹಾಗೆ ಭಾವುಕರಾದ ಎಷ್ಟು ಮಂದಿ, ತಮ್ಮ ಮನೆಯ ಹೆಣ್ಣುಮಕ್ಕಳಿಗೆ ಪ್ರೋತ್ಸಾಹ, ಸ್ವಾತಂತ್ರ್ಯ, ಸಮಾನತೆ ಕಲ್ಪಿಸಿದ್ದಾರೆ ಎಂಬುದು ಪ್ರಶ್ನಾರ್ಹ. ಸಾಕ್ಷಿ, ದೀಪಾ, ಸಿಂಧು ಅವರ ಸಾಧನೆಯಿಂದ ಖುಷಿಪಟ್ಟಷ್ಟೇ ಸಂಖ್ಯೆಯ ಪುರುಷರು, ತಮ್ಮೊಂದಿಗಿರುವ ಹೆಣ್ಣುಮಕ್ಕಳ ಬದುಕಿನ ಬಗೆಗೆ ಅಲ್ಪಸ್ವಲ್ಪ ಕಾಳಜಿ ತೋರಿದ್ದರೂ ಇಂಡಿಯಾದಲ್ಲಿ ಮಹಿಳೆಯರ ವಿರುದ್ಧ ಈ ಪ್ರಮಾಣದ ಅಪರಾಧ ಜರುಗುತ್ತಿರಲಿಲ್ಲ ಅಲ್ಲವೇ? ಅಂದರೆ, ಸಾಮಾಜಿಕ ಜಾಲತಾಣಗಳು ಕೂಡ ಪುರುಷಪ್ರಧಾನ ಮನಸ್ಥಿತಿಗೆ ಹೊರತಲ್ಲ, ಅವುಗಳಲ್ಲಿ ಕಂಡುಬಂದ ಪ್ರತಿಕ್ರಿಯೆಗಳಿಗೂ ಹಾಗೂ ವಾಸ್ತವ ಮನಸ್ಥಿತಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದಾಯಿತು.

ಇನ್ನು, ಹೆಣ್ಣುಮಕ್ಕಳು ಹುಟ್ಟುಹಾಕಿದ, ‘ಗಂಡಸರ ಒಲಿಂಪಿಕ್ಸ್ ಶುರುವಾಗೋದು ಯಾವಾಗ?’ ಎಂಬ ಕೇಳ್ವಿ ಇದ್ದ ಸ್ಟೇಟಸ್‌ಗಳಿಗೆ ಪುರುಷರು ನೀಡಿದ ಪ್ರತಿಕ್ರಿಯೆಗಳು ವಿಭಿನ್ನ ಮನಸ್ಥಿತಿ ಹೊಂದಿದ್ದವು. ಗಂಡಸರಷ್ಟೇ ಚರ್ಚೆ ಮಾಡುವಾಗ ಕಂಡುಬಂದ ಹೆಮ್ಮೆ, ಪ್ರೀತಿ, ದೇಶಪ್ರೇಮ, ಸಂಭ್ರಮ, ಪ್ರೋತ್ಸಾಹದ ನುಡಿಗಳು ಅಲ್ಲಿರಲಿಲ್ಲ. ಬದಲಿಗೆ, ಹೆಣ್ಣುಮಕ್ಕಳು ಹುಟ್ಟುಹಾಕಿದ ಅಣಕಕ್ಕೆ ಪ್ರತ್ಯುತ್ತರ ನೀಡುವ ಧಾವಂತ ಇತ್ತು. ಈ ಸಂದರ್ಭ ಪುರುಷರ ನೆರವಿಗೆ ಬಂದಿದ್ದು ದೀಪಾ, ಸಿಂಧು ಮತ್ತು ಸಾಕ್ಷಿಯರ ಕೋಚ್‌ಗಳು. ರಿಯೋನಲ್ಲಿ ಸಾಧನೆ ಮೆರೆದ ಮಹಿಳಾ ಕ್ರೀಡಾಪಟುಗಳಿಗೆ ಕಾಕತಾಳೀಯವಾಗಿ ಪುರುಷ ಕೋಚ್‌ಗಳೇ ಇದ್ದದ್ದು ಗಂಡಸರ ವಾದಕ್ಕೆ ಆನೆಬಲ ಬಂದಂತಾಯಿತು. ಹಾಗಾಗಿ, ‘ಪ್ರತಿ ಯಶಸ್ವಿ ಮಹಿಳೆಯ ಹಿಂದೆಯೂ ಪುರುಷ ಇದ್ದೇ ಇರುತ್ತಾನೆ’ ಎಂಬ ಸಮರ್ಥನೆ ಹೊರಬಿತ್ತು. ಕೋಚ್‌ಗಳ ಫೋಟೊಗಳನ್ನು ಸಿಂಧು, ದೀಪಾ ಮತ್ತು ಸಾಕ್ಷಿಯರ ಫೋಟೊಗಳ ಜೊತೆ ಅಪ್‌ಲೋಡ್ ಮಾಡುವ ಮೂಲಕ, ಪುರುಷ ತರಬೇತುದಾರ ಇಲ್ಲದೆ ಹೋಗಿದ್ದರೆ ಈ ಕ್ರೀಡಾಳುಗಳು ಅಪೂರ್ಣ ಎಂದೂ ಪರೋಕ್ಷವಾಗಿ ಸಾರಲಾಯಿತು!

ಈ ಚರ್ಚೆಗಳೆಲ್ಲವೂ ಇಂಡಿಯಾದ ಪುರುಷರ ಎರಡು ಮುಖಗಳನ್ನು ತೆರೆದಿಡುತ್ತಿವೆ. ಬಾರ್‌ನಲ್ಲಿ ಮಹಿಳಾ ಸಪ್ಲೇಯರ್‌ಗಳು ಬೇಕು ಎಂದು ಪ್ರತಿಪಾದಿಸುವ ಮಂದಿ ತಮ್ಮ ಮಗಳನ್ನು ಆ ಕೆಲಸದ ಹತ್ತಿರವೂ ಸುಳಿಯದಂತೆ ನೋಡಿಕೊಳ್ಳುತ್ತಾರೆ. ಸಮಾಜದಲ್ಲಿ ವೇಶ್ಯೆಯರು ಇರಬೇಕೆಂದು ಬಯಸುವ ಮಂದಿ ತಮ್ಮವರನ್ನು ಆ ಸ್ಥಳದಲ್ಲಿ ಕಲ್ಪಿಸಿಕೊಳ್ಳಲೂ ಹಿಂಜರಿಯುತ್ತಾರೆ. ಮಹಿಳೆಯರು ಸೇನೆ ಸೇರಿದಾಗ, ವಿಮಾನ ಚಲಾಯಿಸಿದಾಗ, ಸಿನಿಮಾದ ಸವಾಲಿನ ಪಾತ್ರಗಳಲ್ಲಿ ನಟಿಸಿದಾಗ, ಸರ್ಕಾರದ ವಿರುದ್ಧ ಮಾತನಾಡಿ ಗೆದ್ದಾಗ, ಮಹತ್ವದ ಸಂಶೋಧನೆ ನಡೆಸಿದಾಗ, ಹಿಮಾಲಯ ಏರಿ ಬೀಗಿದಾಗ... ಇಂಥ ನೂರಾರು ಸಂದರ್ಭದಲ್ಲಿ ಪುರುಷರು ಭಾರಿ ಮೆಚ್ಚುಗೆಯಿಂದ ಮಾತನಾಡುತ್ತಾರೆ. ಆದರೆ ತನ್ನ ಕುಟುಂಬದ ಹೆಣ್ಣುಮಕ್ಕಳ ವಿಷಯ ಬಂದಾಗ ಅವರದ್ದು ಅದೇ ರಾಗ, ಅದೇ ಹಾಡು! ಹಾಗಾಗಿ, ಈ ನೆಲದ ಪುರುಷರ ಇಂಥ ಮನಸ್ಥಿತಿಗೆ ಮೂಲ ಕಾರಣವಾದ ‘ಭಾರತೀಯ ಸಂಸ್ಕೃತಿ’ ಯಾವ ಅರ್ಥದಲ್ಲಿ ಶ್ರೇಷ್ಠ ಎಂಬುದನ್ನು ಮತ್ತೊಮ್ಮೆ ತೂಕ ಹಾಕಬೇಕಿದೆ.

ಸಿಡ್ನಿ ಒಲಿಂಪಿಕ್ಸ್‌ನಲ್ಲಿ (2000) ಪುರುಷ ಕ್ರೀಡಾಳುಗಳೆಲ್ಲ ಕೈಚೆಲ್ಲಿದಾಗ, ವೇಯ್ಟ್ ಲಿಫ್ಟರ್ ಕರ್ಣಂ ಮಲ್ಲೇಶ್ವರಿ ಕಂಚಿನ ಪದಕ ಗೆದ್ದಿದ್ದರು. ಈಗ ಮತ್ತೊಮ್ಮೆ ಸಾಕ್ಷಿ, ಸಿಂಧು, ದೀಪಾ ತಮ್ಮ ಸಾಧನೆಯ ಮೂಲಕ ಪುರುಷಪ್ರಧಾನ ದೇಶವೊಂದರ ಮರ್ಯಾದೆ ಉಳಿಸಿದ್ದಾರೆ. ಸುಕನ್ಯಾ ಮಾರುತಿಯವರ ಪದ್ಯದ ತುಣುಕೊಂದು ನೆನಪಾಗುತ್ತಿದೆ: ‘ನಾವು ವೇಶ್ಯೆಯರು/ ನಿಮ್ಮ ದಾಸಿಯರು/ ಆಗಿದ್ದ ಕಾಲ/ ಈಗಿಲ್ಲ ಎನ್ನುವಂತಿಲ್ಲ/ ಆದರೂ ಅಲ್ಲಲ್ಲಿ/ ಕಾಯಿಸುತ್ತಿದ್ದೇವೆ/ ನಿಮ್ಮ ಬುರುಡೆಗೆ/ ಬಿಸಿನೀರು.’ ದೀಪಾ, ಸಾಕ್ಷಿ, ಸಿಂಧು ಮಾಡಿದ್ದು ಕೂಡ ಗಂಡಸರ ಬುರುಡೆಗೆ ಬಿಸಿನೀರು ಕಾಯಿಸುವ ಕೆಲಸವೇ. ಹಾಗಾಗಿ ‘ಗಂಡಸರ ಒಲಿಂಪಿಕ್ಸ್ ಶುರುವಾಗೋದು ಯಾವಾಗ?’ ಎಂಬುದು ಅರ್ಥಪೂರ್ಣ ಅಣಕ. ಇಂಡಿಯಾದ ಒಲಿಂಪಿಕ್ಸ್ ಪಾಲ್ಗೊಳ್ಳುವಿಕೆಗೆ ಶತಮಾನ ದಾಟಿರುವುದರಿಂದ ಇದು ಶತಮಾನದ ಅಣಕ ಕೂಡ. ಆದರೆ ಈ ಅಣಕ ಇಂಡಿಯಾದ ಗಂಡಸರ ಆತ್ಮಾವಲೋಕನಕ್ಕೆ ಕಾರಣವಾಗುವ ಬದಲು ವ್ಯರ್ಥ ಸಮರ್ಥನೆಗಳ ಕಸರತ್ತಿಗೆ ಬಲಿಯಾಗಿದ್ದು ಮಾತ್ರ ದುರಂತ.

(ಕನ್ನಡ ಪ್ರಭ)Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!