Top

ಋಗ್ವೇದವೊಂದು ಜನಪದ: ಸಂದರ್ಶನದಲ್ಲಿ ಜಿ.ರಾಮಕೃಷ್ಣ ಮಾತು


Asianet News Sunday 04 September 2016 10:22 pm IST Specials
ಋಗ್ವೇದವೊಂದು ಜನಪದ: ಸಂದರ್ಶನದಲ್ಲಿ ಜಿ.ರಾಮಕೃಷ್ಣ ಮಾತು
04 Sep

ವೇದಗಳಲ್ಲಿ ಏರೋಪ್ಲೇನ್ ಉಲ್ಲೇಖವಿದೆ ಎಂಬ ಪ್ರತಿಪಾದನೆ, ನಿರ್ದಿಷ್ಟ ಸಮುದಾಯಕ್ಕಷ್ಟೇ ವೇದಗಳ ಓದು ಸೀಮಿತ ಎಂಬ ತಾರತಮ್ಯಗಳು ಸಲ್ಲ ಎನ್ನುತ್ತಾರೆ ವಿದ್ವಾಂಸ ಜಿ ರಾಮಕೃಷ್ಣ. ವೇದಗಳು ಎಲ್ಲರೂ ಓದಬೇಕಾದ ಕಾವ್ಯ. ಅದರಲ್ಲೂ ಋಗ್ವೇದವೊಂದು ಆದಿ ಕೃತಿ, ಬುಡಕಟ್ಟುಗಳ ಬದುಕನ್ನು ಕಟ್ಟಿಕೊಡುವ ಮೂಲಗ್ರಂಥ ಎನ್ನುತ್ತಾರೆ ಅವರು. ಇತ್ತೀಚೆಗೆ ತಾನೇ ‘ಋಗ್ವೇದ ಪ್ರವೇಶಿಕೆ: ಐತಿಹ್ಯ ಮತ್ತು ವಾಸ್ತವ’ ಕೃತಿಯನ್ನು ಹೊರತಂದಿರುವ ಜಿಆರ್ ಎಲ್ಲ ಮಡಿವಂತಿಕೆ ಮತ್ತು ಶ್ರೇಷ್ಠತೆ ಆರೋಪಗಳನ್ನು ದೂರವಿಟ್ಟು ಋಗ್ವೇದ ಓದಬೇಕೆಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಹೊಸ ಕೃತಿಯಿಂದ ಆಯ್ದ ಅಧ್ಯಾಯ ಮತ್ತು ವೇದಗಳ ಓದು ಕುರಿತು ಕುಮಾರ್ ಎಸ್. ಜತೆ ಹಂಚಿಕೊಂಡ ಮಾತುಗಳ ಆಯ್ದ ಭಾಗವಿಲ್ಲಿದೆ.

ಋಗ್ವೇದವನ್ನು ಯಾಕೆ ಓದಬೇಕು?
ಋಗ್ವೇದ ಪ್ರಾಚೀನ ಗ್ರಂಥ. ಪ್ರಪಂಚದಲ್ಲಿ ಮೊದಲ ಸ್ಥಾನದಲ್ಲಿರುವ ಒಂದು ಸಾಹಿತ್ಯ ಕೃತಿ. ಬೇರೆ ರೀತಿಯ ಸಾಂಸ್ಕೃತಿಕ ಚಿಹ್ನೆಗಳು ಜಗತ್ತಿನ ವಿವಿಧೆಡೆ ಬೇಕಾದಷ್ಟು ನೋಡಲು ಸಿಗುತ್ತವೆ. ಉದಾಹರಣೆಗೆ, ಈಜಿಪ್ತಿನಲ್ಲಿರುವ ಪಿರಮಿಡ್‌ಗಳು. ಅವು ಋಗ್ವೇದಕ್ಕಿಂತಲೂ ಹಿಂದಿನವು. ಹೈರೊಗ್ಲಸ್ ಎಂಬ ಲಿಪಿಯೂ ಆ ಕಾಲದಲ್ಲಿತ್ತು. ಆದರೆ ಒಂದು ಸಾಹಿತ್ಯದ ರೂಪದಲ್ಲಿ, ಛಂದಸ್ಸು, ಕಾವ್ಯತ್ವ, ಪುರಾಣ ಇರುವ, ಅಂದರೆ ಮಿತ್‌ಗಳಿರುವ; ಚಾರಿತ್ರಿಕವಾಗಿ ಸಾಮಾಜಿವಾಗಿ ಅತ್ಯಂತ ಹಿಂದಿನ ಬುಡಕಟ್ಟು ಜೀವನದ ಪ್ರತಿಫಲನ ಇರುವ ಗ್ರಂಥವೆಂದರೆ ಋಗ್ವೇದವೇ. ಇತಿಹಾಸದಲ್ಲಿ ಅತ್ಯಂತ ಪುರಾತನವಾದದ್ದು ಏನಾದರೂ ಓದಬೇಕೆಂದರೆ ಋಗ್ವೇದವನ್ನು ಓದಲೇಬೇಕು.

ಈ ಆದಿ ಗ್ರಂಥದಲ್ಲಿ ಏನಿದೆ?
ಅದರಲ್ಲಿ ವಿಸ್ಮಯವಿದೆ. ಇಂದು ಮೋಡ ಯಾಕೆ ಬರುತ್ತೆ ಎಂದು ಯಾರಾದರೂ ಕೇಳಿದರೆ, ಪ್ರೈಮರಿ ಸ್ಕೂಲ್‌ನಲ್ಲಿ ಏನೋ ಹೇಳಿಕೊಟ್ಟಿದ್ದಾರೆ, ಅದು ಸರಿಯೊ, ತಪ್ಪೊ. ಗೊತ್ತಿದೆ ಎಂಬ ಧೋರಣೆ. ಅದು ಏನೂಂತ ಗೊತ್ತಿಲ್ಲದ ಕಾಲದಲ್ಲಿ ನೋಡಿದವನ ಮನಸ್ಸಿನಲ್ಲಿ ಏನಾಗುತ್ತದೆ? ಏನಿದು ಅಗಾಧವಾಗಿದೆ ಎಂಬ ವಿಸ್ಮಯದ ಕಲ್ಪನೆಯನ್ನು ಈ ಕೃತಿ ಉದ್ದೀಪಿಸುತ್ತದೆ. ಪ್ರಕೃತಿಯನ್ನು ನೋಡಿ, ಅದರ ಜೊತೆಗೆ ಸಂಬಂಧವುಳ್ಳವನು, ಅದನ್ನು ಮಾರ್ಪಡಿಸುವುದಕ್ಕೆ ಪ್ರಯತ್ನಿಸುತ್ತಿದ್ದವನು, ಅದರ ಬಗ್ಗೆ ಅವನಲ್ಲಿ ಏನೆಲ್ಲಾ ಪ್ರತಿಫಲನಗಳಿರಬಹುದು ಎಂಬುದು ತಿಳಿಯುವುದಕ್ಕೆ ನೆರವಾಗುವ ಕೃತಿ ಇದು.

ಅಂದರೆ ಋಗ್ವೇದವನ್ನು ಚರಿತ್ರೆಯಾಗಿ ನೋಡುತ್ತೀರಾ?
ಸಾಂಸ್ಕೃತಿಕ ಚರಿತ್ರೆಯನ್ನು ನೋಡಬಹುದು. ಇವತ್ತಿನ ಘಟನೆ ಅಲ್ಲದಿದ್ದರೂ, ಅನೇಕ ಶತಮಾನಗಳಿಂದ ಯಾವುದೋ ಒಂದು ಭಾವನೆ, ವಿಷಯ ತಲೆ ತಲಾಂತರವಾಗಿ ತಟಾಯಿಸಿಕೊಂಡು ಬಂದಿರುತ್ತದೆ. ಅದರಲ್ಲಿ ಪ್ರಾಚೀನ ಜೀವನದ ಸ್ಮತಿ ಇರುತ್ತದೆ. ಋಗ್ವೇದ ಕಾಲದಲ್ಲೂ ಸ್ಮತಿ ಇತ್ತು. ಅದರ ಹಿಂದಿನ ಕಾಲದ ಸಾಮಾಜಿಕ ವ್ಯವಸ್ಥೆ, ಸಂಬಂಧಗಳು ಸ್ಮತಿಯ ರೂಪದಲ್ಲಿ ಉಳಿದುಕೊಂಡು ಬಂದಿರುತ್ತದೆ. ಒಂದು ನಾಗರಿಕತೆಯ ವಿಕಾಸದ ಹಾದಿಯನ್ನು ನೋಡಲು ಹೋದಾಗ ಋಗ್ವೇದ ಅತ್ಯಂತ ಪ್ರಶಸ್ತವಾದ ಗ್ರಂಥ ಎನಿಸುತ್ತದೆ. ಜೊತೆಗೆ ದಾರ್ಶನಿಕವಾದ ಚಿಂತನೆಗಳು ಬರುತ್ತವೆ, ಯಾರು ಈ ಜಗತ್ತನ್ನು ಸೃಷ್ಟಿಸಿದವನು ಎಂದು ಪ್ರಶ್ನಿಸಿಕೊಳ್ಳುತ್ತಾನೆ. ತಿರುಪತಿಗೆ ಹೋದವನಿಗೆ ಆ ಪ್ರಶ್ನೆಯೇ ಬರುವುದಿಲ್ಲ. ಆತನ ಪ್ರಕಾರ ವೆಂಕಟೇಶ್ವರ ಎಲ್ಲವನ್ನೂ ಮಾಡಿಬಿಟ್ಟಿದ್ದಾನೆ. ಪ್ರಶ್ನೆ ಹಾಕಿಕೊಳ್ಳುವುದಿಲ್ಲ. ವಿಸ್ಮಯದ ಹೊಸ್ತಿಲಲ್ಲಿರುವವನು ಹೇಗೆ ಮಾಡಿದ ಇಷ್ಟು ದೊಡ್ಡಪ್ರಪಂಚವನ್ನು, ಇದನ್ನು ಮಾಡುವುದಕ್ಕೆ ಏನು ಸಾಮಗ್ರಿ ಇತ್ತು? ಉತ್ತರ ಗೊತ್ತಿಲ್ಲ ಎಂದೇ ಹೇಳುವುದು. ಪ್ರಾಚೀನ ಗ್ರಂಥಗಳಲ್ಲಿ ಎಲ್ಲಕ್ಕೂ ಉತ್ತರವಿದೇ ಎಂದೇ ಬಹಳ ಜನ ನಂಬಿದ್ದಾರೆ. ಆದರೆ ಚಾರಿತ್ರಿಕವಾಗಿ ಎಲ್ಲ ಪ್ರಶ್ನೆಗಳಿಗೆ ಯಾರೂ ಉತ್ತರ ಕೊಟ್ಟಿಲ್ಲ, ಕೊಡೊದಿಲ್ಲ.

ವೇದಗಳನ್ನು ಮನುಷ್ಯರು ಬರೆದದ್ದೇ ಅಲ್ಲ ಅಂತಾರೆ. ಋಗ್ವೇದ ಇದಕ್ಕೆ ಹೊರತೇ?
ನಿಗೂಢವಾದದ್ದು ಋಗ್ವೇದಲ್ಲಿ ಇದೆ. ಬರೀ ಅಧ್ಯಾತ್ಮ ಇದೆ ಎನ್ನುವ ಮಾತಿದೆ. ಮನುಷ್ಯನಿಂದ ಬರೆಯಲಾಗದ್ದು ಋಗ್ವೇದ ಎನ್ನಲಾಗುತ್ತದೆ. ಯಾವ ಧರ್ಮಗ್ರಂಥಗಳು ತಾನೇ ತಾನಾಗಿ ಬಂದಿದ್ದಲ್ಲ. ಯಾರಾದರೂ ಒಬ್ಬರು ಬರೆದಿರಬೇಕು. ಅನುಭವ ಇರತಕ್ಕಂಥವರು ಅಭಿವ್ಯಕ್ತಿಸಿದಾಗ ಕಾವ್ಯ ಬರುತ್ತೆ. ಋಗ್ವೇದಲ್ಲೂ ಈ ಬಗ್ಗೆ ಪ್ರಶ್ನೆ ಬರುತ್ತದೆ. ‘ನಾನೂ ಈ ಪ್ರಪಂಚ ನೋಡ್ತೀನಿ. ಆದರೆ ಆತನಿಗೆ ಅದೇನೊ ಹೇಳುವ ಶಕ್ತಿ ಇದೆ’ ಎಂಬ ಮಾತು ಬರುತ್ತದೆ. ‘ಕವಿ ಅವನಿಗೆ ಬರೆಯಲು ಸಾಧ್ಯವಾಯಿತು, ನನಗೇಕೆ ಬರೆಯಲು ಆಗುತ್ತಿಲ್ಲ ಎಂಬ ಪ್ರಶ್ನೆ ಬರುತ್ತದೆ. ಅಂದ ಮೇಲೆ ಋಗ್ವೇದವನ್ನು ದೇವರು ಬರೆದ ಎಂದು ಹೇಗೆ ಹೇಳಲು ಸಾಧ್ಯ? ಅದರಲ್ಲಿ ಅಧ್ಯಾತ್ಮ, ನಿಗೂಢವಾದದ್ದೇನು ಇಲ್ಲ. ಚಾರಿತ್ರಿಕವಾಗಿ, ಸಾಮಾಜಿಕವಾಗಿ ದೊಡ್ಡ ಪರ್ವ ಕಾಲದ ದಾಖಲೆಯ ರೀತಿಯ ಕಾವ್ಯವಿದು. ಅದರಲ್ಲಿರುವುದನ್ನು ಮುಂದೆ ಯಾವುದೋ ಆಚರಣೆಗಳಲ್ಲಿ ಬಳಸಿಕೊಂಡಿದ್ದಾರೆ.

ಹೊಸ ಕಾಲದ ಜ್ಞಾನಶಾಖೆಗಳನ್ನೆಲ್ಲಾ ಋಗ್ವೇದದಲ್ಲಿತ್ತು ಎಂದೋ, ವೇದಗಳಲ್ಲಿದೆ ಎಂದೋ ಆರೋಪಿಸಲಾಗುತ್ತದೆ, ನಿಜವೇ?
ಇಲ್ಲದ್ದನ್ನು ಆರೋಪಿಸಿ ವೇದಗಳನ್ನು ಶ್ರೇಷ್ಠ ಎಂದು ಸಾರಬೇಕಿಲ್ಲ. ಚಾರಿತ್ರಿಕವಾಗಿ ಇದು ಸಾಧ್ಯವೇ ಎಂಬುದನ್ನು ಪರಿಶೀಲಿಸಬೇಕು. ಏರೋಪ್ಲೇನ್ ಪ್ರಸ್ತಾಪವಿತ್ತು ಎನ್ನುತ್ತಾರೆ. ಅದಿಲ್ಲದೇ ಇದ್ದರೆ ಯಾರೂ ಪುಸ್ತಕ ಓದುವುದಿಲ್ಲವೆ? ಪಂಪಭಾರತದಲ್ಲಿ ಏರೋಪ್ಲೇನ್ ಇಲ್ಲವಲ್ಲ, ನಾವು ಓದುವುದಿಲ್ಲವೆ? ವೇದಗಳು ಚಿಂತನೆ, ವಿಸ್ಮಯ, ಕಾವ್ಯಾತ್ವ, ಚರಿತ್ರೆಯ ದೃಷ್ಟಿಯಿಂದ ಮುಖ್ಯ. ಅವುಗಳಲ್ಲಿರುವ ಮೌಲಿಕತೆಯನ್ನು ಬಿಟ್ಟು, ಇಲ್ಲದ್ದನ್ನು ಆರೋಪಿಸುವುದು ಸರಿಯಲ್ಲ. ಚಾರಿತ್ರಿಕ ಸಂದರ್ಭಕ್ಕೆ ಹೊಂದದೇ ಇರುವುದನ್ನು ಆರೋಪಿಸಿ, ಅದಕ್ಕೆ ಪ್ರಾಶಸ್ತ್ಯ ಗಳಿಸಿಕೊಡಬೇಕಾಗಿಲ್ಲ. ಏರೋಪ್ಲೇನ್ ಬಂದ ಮೇಲೆ ಋಗ್ವೇದದಲ್ಲಿ ಏರೋಪ್ಲೇನ್ ಕಾಣಿಸಿತು, ನ್ಯೂಕ್ಲಿಯರ್ ಸೈನ್ಸ್ ಬಂದ ಮೇಲೆ ಋಗ್ವೇದದಲ್ಲೂ ನ್ಯೂಕ್ಲಿಯರ್ ಸೈನ್ಸ್ ಇದೆ ಎಂಬ ವಾದ ಬಂತು. ಗುರುತ್ವಾಕರ್ಷಣೆ ಇದೆ ಎಂಬುದು ಗೊತ್ತಾದ ಮೇಲೆ ಋಗ್ವೇದದಲ್ಲೂ ಗುರುತ್ವಾಕರ್ಷಣೆ ಇದೆ ಎಂಬುದು ಕಾಣಿಸಿತು. ನೂರು ವರ್ಷ ಆದಮೇಲೆ ಏನೇ ಹೊಸತು ಬಂದರೂ ಅದು ಋಗ್ವೇದದಲ್ಲಿದೆ ಎಂದು ಹೇಳುವುದು. ಹೀಗ ಆರೋಪಿಸುವುದು ಗ್ರಂಥಕ್ಕೆ ಮಾಡುವ ಅಪಚಾರ ಅಷ್ಟೆ.

ವೇದ ಕಾಲದಲ್ಲಿ ಧರ್ಮವಿತ್ತೆ?
ನಾವು ಇಂದು ಯಾವುದು ಹಿಂದೂ ಧರ್ಮ ಎಂದು ಕರೆಯುತ್ತೇವೊ, ಅದು ಋಗ್ವೇದ ಕಾಲದಲ್ಲಿ ಇರಲಿಲ್ಲ. ಹಿಂದೂ ಧರ್ಮ ಕುರಿತ ಪ್ರಶ್ನೆಗಳನ್ನು ಕೇಳಿಕೊಂಡರೆ, ನಮ್ಮ ಎಲ್ಲ ಆಚರಣೆಗಳ ಮೂಲ ಆಕರ ವೇದ. ಆದರೆ ಋಗ್ವೇದಲ್ಲಿ ಏನಿದೆ ಎಂಬುದನ್ನು ಅರ್ಥ ಮಾಡಿಕೊಂಡಷ್ಟೂ, ಮೌಢ್ಯದ ವಾತಾವರಣ ಸೃಷ್ಟಿಸಿ, ಎಲ್ಲ ನಿಗೂಢ, ಯಾರಿಗೂ ಅರ್ಥವಾಗಲ್ಲ ಎಂಬ ಭ್ರಮೆಯಿಂದ ಹೊರಗೆ ಬರುತ್ತೇವೆ. ಅರ್ಥಮಾಡಿಕೊಳ್ಳುವುದಕ್ಕೆ ಪ್ರಯತ್ನಿಸಬೇಕು ಅಷ್ಟೆ. ೩೫೦೦ ವರ್ಷಗಳ ಹಿಂದಿನ ಸಮಾಜ ಹೇಗಿತ್ತು ತಿಳಿಯಬೇಕು. ವೇದ ಕಾಲದಲ್ಲಿದ್ದವನಿಗೆ ಕಲ್ಲನ್ನುಪೂಜೆ ಮಾಡು, ಕತ್ತೆ ಪೂಜೆ, ವರಾಹ ಪುರಾಣ ಇವ್ಯಾವೂ ಗೊತ್ತಿಲ್ಲ. ಅವನಿಗೆ ಗೊತ್ತಿರುವುದು, ಸಸ್ಯ ನೀರು, ಪರ್ವತ, ಕಾಡು.

ಯಾವ ಜಾತಿ, ಧರ್ಮ, ವರ್ಗಗಳಿಲ್ಲದ ಕಾಲದಲ್ಲಿ ಪ್ರಕೃತಿಯೊಂದಿಗೆ ಬದುಕಿದವರ ಜೀವನವನ್ನು ಹೇಳುವ ಈ ಕೃತಿ ಯಾಕೆ ಒಂದು ಸಮುದಾಯದ ಕೃತಿಯಾಗಿ ಸೀಮಿತವಾಯಿತು?
ಆ ಕಾಲದಲ್ಲಿ ಜಾನಪದ ಕೃತಿಯಾಗಿ ಬಂತು. ಸಮಾಜ ವಿಕಾಸವಾಗುತ್ತಾ ಶ್ರೇಣೀಕೃತ ಸಮಾಜ ಬಂತು. ಗುಂಪುಗಳು ಹೆಚ್ಚಿ, ಆಸ್ತಿವಂತರು, ದುಡಿಯುವವರು ಬೇರೆಯಾದರು. ದೈಹಿಕ ಶ್ರಮ ಕೀಳು ಮತ್ತು ಬೌದ್ಧಿಕ ಶ್ರಮ ಶ್ರೇಷ್ಠ ಎಂಬ ಭಾವನೆಯನ್ನು ಬೆಳೆಯಿತು. ಆಸ್ತಿವಂತನಾದವನು ಬೌದ್ಧಿಕ ಶ್ರಮವನ್ನು ಪ್ರತಿಪಾದಿಸಿದ. ಆದರೆ ಈ ಬದಲಾವಣೆಯನ್ನು ಒಪ್ಪಿಕೊಳ್ಳದೆ ದೈಹಿಕವಾಗಿ ಶ್ರಮಿಸುವವ ಪ್ರತಿಭಟಿಸಿದ. ಅವನಿಗೆ ಶ್ರೇಣೀಕರಣ ಒಳ್ಳೆಯದು ಎಂಬುದನ್ನು ಮನವರಿಕೆ ಮಾಡಿಕೊಡಬೇಕಾಯಿತು. ಹಾಗಾಗಿ ಋಗ್ವೇದದಲ್ಲಿ ಇಲ್ಲದಿರುವುದನ್ನು ಅದಕ್ಕೆ ಹೇರಿ, ಬೇರೆಯವರನ್ನು ಅಂಕೆಯಲ್ಲಿಡುವುದಕ್ಕೆ ಪ್ರಯತ್ನಿಸಲಾಯಿತು. ಅದೇ ಮುಂದುವರೆದು ಬಂದಿದೆ. ಹೀಗಾಗುವುದಕ್ಕೂ ಒಂದು ಕಾರಣವಿದೆ. ಋಗ್ವೇದ ಅರ್ಥವು ಆಕಾಲಕ್ಕ ಎಷ್ಟು ಲಭ್ಯವಿತ್ತೊ, ನಂತರದ ಕಾಲದಲ್ಲಿ ಅದಕ್ಕಿಂತ ಕಡಿಮೆ ಆಗಿತ್ತು. ಭಾಷೆಯ ತೊಡಕು ಕಾರಣ. ಇಂಥ ಸಂದರ್ಭದಲ್ಲಿ ಋಗ್ವೇದಕ್ಕೆ ಔನ್ನತ್ಯ ಕಲ್ಪಿಸಿಕೊಟ್ಟರೆ, ಅದೊಂದು ಸಾಧನವಾಗಿ ಪರಿಣಮಿಸುತ್ತದೆ ಎಂಬುದನ್ನು ಅರಿತ ಜನ, ಅದನ್ನು ನಿರಂತರವಾಗಿ ಬೇರೆಯವರ ಮೇಲೆ ಹತೋಟಿ ಸಾಧಿಸುವುದಕ್ಕೆ ಅಸ್ತ್ರವಾಗಿಸಿಕೊಂಡಿದ್ದಾರೆ.

ವೇದಗಳ ಮರು ಓದು, ವ್ಯಾಖ್ಯಾನಗಳು ಶುರುವಾಗಿದ್ದು ಯಾವಾಗ?
ಹತ್ತನೇ ಶತಮಾನದಿಂದಲೂ ಇದೆ. ಸಾಯನಾಚಾರ್ಯರು ಋಗ್ವೇದ ಮೇಲೆ ವ್ಯಾಖ್ಯಾನ ಬರೆದರು. ನಮಗೆ ತಿಳಿದಿದ್ದನ್ನು ಹೇಳುತ್ತೇನೆ ಎಂದೇ ವ್ಯಾಖ್ಯೆ ಬರೆದರು. ಅವರಿಗೂ ಸಂಶಯ ಬರುವ ಸಂದರ್ಭಗಳಿದ್ದು. ಆದರೆ ಋಗ್ವೇದದ ಮೇಲೆ ಮಹತ್ವದ ಭಾಷ್ಯವನ್ನು ಬರೆದರು. ಅವರಿಗೂ ಮೊದಲು ವೆಂಕಟಮಾಧವರು, ಕಂದಸ್ವಾಮಿ ವ್ಯಾಖ್ಯಾನ ಬರೆದಿದ್ದಾರೆ.

ಕಡೆಯದಾಗಿ, ಋಗ್ವೇದ ಏನನ್ನು ಪ್ರತಿಪಾದಿಸುತ್ತದೆ ಎಂದು ನಿಮಗೆ ಅನ್ನಿಸುತ್ತದೆ?
ರಾಮಾಯಣವನ್ನು ಇಂದಿಗೂ ಒಂದು ಮೌಲ್ಯವಿದೆ ಎಂಬ ಕಾರಣಕ್ಕೆ ಓದುತ್ತೇವೆ. ಹಾಗೆಯೇ ಋಗ್ವೇದವನ್ನೂ ಒಂದು ಕಾರಣಕ್ಕೆ ಓದಲೇಬೇಕು. ಸಾಮೂಹಿಕ ಜೀವನದ ಬಗ್ಗೆ ಈ ಕೃತಿಯಲ್ಲಿ ಒಳ್ಳೆಯ ಮಾತುಗಳಿವೆ. ನಾವೆಲ್ಲರೂ ಸಮಾನ ಮನಸ್ಕರಾಗಿ, ಸಮಾನವಾದ ಕ್ರಿಯೆಯಲ್ಲಿ ತೊಡಗೋಣ ಎನ್ನುತ್ತದೆ. ಅದನ್ನು ಜೀವಂತವಾಗಿಟ್ಟುಕೊಳ್ಳುವುದು, ಸಮಾಜವನ್ನು ಅಂತಹ ಅಡಿಪಾಯದ ಮೇಲೆ ನಿಲ್ಲಿಸುವ ಕಾರಣಕ್ಕೆ ಋಗ್ವೇದವನ್ನು ಓದಬೇಕು. ಋಗ್ವೇದ ಕಾಲದಲ್ಲಿ ಬುಡಕಟ್ಟುಗಳ ನಡುವೆ ಸಮಾನತೆಯ ಭಾವವಿತ್ತು. ಹೆಣ್ಣು-ಗಂಡಿನ ನಡುವೆ ಹಾಗೂ ಬೌದ್ಧಿಕ ಮತ್ತು ದೈಹಿಕ ಶ್ರಮಗಳ ನಡುವೆಯೂ ಸಮಾನತೆಯಿತ್ತು. ಆ ಸಮಾನತೆ ಬೇಕು. ಅಂತಹ ಸಮೂಹ ಜೀವನ ಸಾಧ್ಯವಾಗಬೇಕು.

ಅಂತಹ ಜೀವನ ಪ್ರಸ್ತುತ ಅನ್ನಿಸುತ್ತದೆಯೇ?
ಕಾವ್ಯ ಕಾರಣದಿಂದ ಪ್ರಸ್ತುತ. ಚಾರಿತ್ರಿಕ ಸಾಮಗ್ರಿ ಇದೆ ಎಂಬ ಕಾರಣದಿಂದ ಪ್ರಸ್ತುತ. ವಿಸ್ಮಯದ ಬಗ್ಗೆ ಯಾವುದೋ ಒಂದು ಕುತೂಹಲದಿಂದ ಅನ್ವೇಷಿಸಬೇಕು ಎಂಬುದು ಪ್ರಸ್ತುತ. ಋತ ಪರಿಕಲ್ಪನೆ ಋಗ್ವೇದದಲ್ಲಿದೆ. ಪ್ರಕೃತಿಯ ನಿಯಮವನ್ನು ದೇವತೆಯೂ ಬದಲಿಸಲು ಸಾಧ್ಯವಿಲ್ಲ ಎನ್ನುತ್ತದೆ. ಪ್ರಕೃತಿಯ ಈ ತಿಳಿವೇ ಅಲ್ಲವೆ ವಿಜ್ಞಾನದ ಮೂಲದ್ರವ್ಯ. ಈ ರೀತಿಯ ಸಾಮಾನ್ಯೀಕರಿಸುವುದು, ಪರಿಕಲ್ಪನೆ ಕೊಡುವುದು ಅದ್ಭುತ. ಆ ದೃಷ್ಟಿಯಿಂದ ದಾರ್ಶನಿಕ, ಅಂತಃಸಂಬಂಧಗಳ ದೃಷ್ಟಿಯಿಂದ ಪ್ರಸ್ತುತವೇ.

(ಕೃಪೆ: ಕನ್ನಡಪ್ರಭ)Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!