Top

ಮಾರುಕಟ್ಟೆಯ ಸಾಮರ್ಥ್ಯ ಪಡೆಯದೇ ಕನ್ನಡಕ್ಕೆ ಬೆಲೆ ಇಲ್ಲವೇ? (ಜಗದ ಜಾಲ)


Asianet News Thursday 08 September 2016 02:14 pm IST Specials
ಮಾರುಕಟ್ಟೆಯ ಸಾಮರ್ಥ್ಯ ಪಡೆಯದೇ ಕನ್ನಡಕ್ಕೆ ಬೆಲೆ ಇಲ್ಲವೇ? (ಜಗದ ಜಾಲ)
08 Sep

- ಎಸ್. ಕುಮಾರ್, ಕನ್ನಡಪ್ರಭ

ಇ-ಬುಕ್ ಮಾಡಲು ನಾವು ಸಿದ್ಧವಿದ್ದೇವೆ, ಬೇಕಾದ ತಾಂತ್ರಿಕ ಬೆಂಬಲ ನೀಡುತ್ತೇವೆ ಎಂದು ಮುಂದೆ ಬಂದ ಉತ್ಸಾಹಿಗಳನ್ನು ಈ ಪ್ರಕಾಶನ ಸಂಸ್ಥೆಗಳು ನಿರಾಸೆ ಹುಟ್ಟಿಸಿ, ಹಿಂದೆ ಕಳಿಸಿವೆ....

****

ಇತ್ತೀಚೆಗೆ ನಡೆದದ್ದು; ಕನ್ನಡದ ಲೇಖಕರೊಬ್ಬರ ಪುಸ್ತಕವೊಂದು ಇ-ಬುಕ್ ರೂಪದಲ್ಲಿ ಅಮೆಜಾನ್‌ನಲ್ಲಿ ಲಭ್ಯವಿತ್ತು. ಇದಾಗಿ ಸ್ವಲ್ಪ ಸಮಯದಲ್ಲಿ ಆ ಪುಸ್ತಕವನ್ನು ತೆಗೆದುಹಾಕಲಾಯಿತು. ಅದಕ್ಕವರು ನೀಡಿದ ಕಾರಣ, ಕನ್ನಡದ ಪುಸ್ತಕವನ್ನು ಬೆಂಬಲಿಸುವ ತಂತ್ರಜ್ಞಾನ ಇಲ್ಲ. ಮಾರಾಟಕ್ಕೆ ಲಭ್ಯವಾಗಿದ್ದು, ಇದಕ್ಕಿದ್ದಂತೆ ತಂತ್ರಜ್ಞಾನದ ನೆಪದಲ್ಲಿ ಮಾಯವಾಗಿದ್ದು ಅಚ್ಚರಿ. ನಿಜಕ್ಕೂ ಕನ್ನಡ ಭಾಷೆಯನ್ನು ಬೆಂಬಲಿಸುವ ತಂತ್ರಜ್ಞಾನವಿಲ್ಲವೆ? ಇದೆ, ಆದರೆ ಕನ್ನಡ ಭಾಷೆಗೆ ಇರುವ ಸೀಮಿತ ಮಾರುಕಟ್ಟೆ ಈ ನಿರ್ಧಾರಕ್ಕೆ ಕಾರಣ.

ಈ ಬೆಳವಣಿಗೆಯಿಂದಾಗಿ ಈಗ ಕನ್ನಡದ ಓದುಗರ ಬಳಗ ನಾವು ಬಳಸುವ ಗ್ಯಾಜೆಟ್‌ಗಳು ಪ್ರಾದೇಶಿಕ ಭಾಷೆಗಳಿಂದ ಕೂಡಿರಬೇಕು ಎಂದು ಆಗ್ರಹಿಸುತ್ತಿದ್ದಾರೆ. ನಾವು ಬಳಸುವ ಮೊಬೈಲ್, ಟ್ಯಾಬ್ಲೆಟ್, ಇ-ಬುಕ್ ಎಲ್ಲವೂ ನಮ್ಮ ಭಾಷೆಯನ್ನು ಬೆಂಬಲಿಸುವ ತಂತ್ರಜ್ಞಾನವನ್ನು ಹೊಂದಿರಬೇಕು. ಎಲ್ಲ ರೀತಿಯ ಸಾಫ್ಟ್‌ವೇರ್‌ಗಳನ್ನು ಕನ್ನಡ ಭಾಷೆಯನ್ನು ಬೆಂಬಲಿಸುವಂತೆ ಕಡ್ಡಾಯಗೊಳಿಸಬೇಕು. ಎಲೆಕ್ಟ್ರಾನಿಕ್ ರೂಪದಲ್ಲೂ ಕನ್ನಡ ಲಭ್ಯವಾಗಬೇಕೆಂದು ಕೇಂದ್ರ ಮಂತ್ರಿಗಳಿಗೂ ಒತ್ತಡ ಹಾಕಿದ್ದಾರೆ. ಈ ಪ್ರಯತ್ನಕ್ಕೆ ಕನ್ನಡಿಗರೂ ಕೈ ಜೋಡಿಸಬೇಕು.

ಇದೆಲ್ಲಾ ನಡೆಯುವಾಗ ಹತ್ತು ಹನ್ನೆರಡು ವರ್ಷಗಳ ಹಿಂದೆ ಬ್ಲಾಗ್ ಬರೆಯುತ್ತಿದ್ದ ದಿನಗಳು ನೆನಪಾದವು. ಆಗಿನ್ನೂ ಯೂನಿಕೋಡ್ ಪರಿಚಯವಾಗಿರಲಿಲ್ಲ. ನಾನು ಕೆಲಸ ಮಾಡುತ್ತಿದ್ದ ಪತ್ರಿಕೆಯ ಪುಟ್ಟ ಅಂಕಣವನ್ನು ಬ್ಲಾಗ್‌ನಲ್ಲಿ ಪ್ರಕಟಿಸುವುದಕ್ಕೆ ಸರ್ಕಸ್ಸೇ ಮಾಡಬೇಕಾಗುತ್ತಿತ್ತು. ಅದನ್ನು ಇಮೇಜ್ ರೂಪದಲ್ಲಿ ಪ್ರಕಟ ಮಾಡುತ್ತಿದ್ದೆ. ನಾಲ್ಕಾರು ಮಾಡಿದ ಮೇಲೆ ಇಡೀ ಪ್ರಕ್ರಿಯೆ ಬೇಸರ ಹುಟ್ಟಿಸಿ ಬಿಟ್ಟುಬಿಟ್ಟೆ. ಇದಾಗಿ ಕೆಲವು ದಿನಗಳಿಗೆ ಯೂನಿಕೋಡ್ ಮೂಲಕ ಬ್ಲಾಗ್‌ನಲ್ಲಿ ಬರೆಯುವ ಸಾಧ್ಯತೆ ನನ್ನ ಬರಹದ ಉಮೇದಿಗೆ ಇಂಬುಕೊಟ್ಟಿತು.

ಕನ್ನಡದಲ್ಲಿ ಬರೆಯಲು ಸಾಧ್ಯವಾಗುವುದರಿಂದ ಅಂತರ್ಜಾಲದಲ್ಲಿ ಸಕ್ರಿಯರಾಗಲು ಇಷ್ಟಪಡುವ ಎಷ್ಟೋ ಮಂದಿಗೆ ಆತ್ಮವಿಶ್ವಾಸ ಸಿಗುತ್ತದೆ. ಫೇಸ್‌ಬುಕ್‌ನಲ್ಲಿ ಕನ್ನಡದಲ್ಲಿ ಬರೆಯಲು ಸಾಧ್ಯವಾಗದೇ ಹೋಗಿದ್ದರೆ ಎಷ್ಟು ಮಂದಿ ಖಾತೆ ತೆರೆಯುತ್ತಿದ್ದರು!?

ನಾವೀಗ ಆನ್‌ಲೈನ್‌ನಲ್ಲಿ ಯೂನಿಕೋಡ್ ಬಳಸಿ ಬರೆಯುತ್ತಿದ್ದೇವೆ. ನಮ್ಮ ಈಮೇಲ್, ವಾಟ್ಸ್‌ಆ್ಯಪ್ ಸಂದೇಶಗಳು ಕನ್ನಡದಲ್ಲಿ ವಿನಿಮಯವಾಗುತ್ತವೆ. ಇಂಗ್ಲಿಷ್ ಬಾರದವರು ವಾಟ್ಸ್‌ಆ್ಯಪ್ ಬಳಸುತ್ತಾರೆ, ಫೇಸ್‌ಬುಕ್‌ನಲ್ಲಿ ಸ್ಟೇಟಸ್ ಬರೆಯುತ್ತಾರೆ. ಆದರೆ ಕನ್ನಡದ್ದೇ ಈ ಪುಸ್ತಕಗಳು, ಮೊಬೈಲ್ ಆ್ಯಪ್‌ಗಳ ವಿಷಯಕ್ಕೆ ಬಂದರೆ ಚಿತ್ರಣವೇ ಬೇರೆ. ಕನ್ನಡದ ಆ್ಯಪ್‌ಗಳೆಂದರೆ ಹಾಡುಗಳು, ಗಾದೆಗಳು, ವಚನಗಳು, ಜೋಕ್‌ಗಳು, ಕ್ಯಾಲೆಂಡರ್‌ಗಳು. ಇವುಗಳಿಗೆ ಹೊರತಾಗಿ ಅಲ್ಲೋ ಇಲ್ಲೋ ಕೆಲವು ಗಂಭೀರವಾದ ಭಿನ್ನವಾದ ಆ್ಯಪ್‌ಗಳು ಲಭ್ಯವಾಗುತ್ತವೆ.

ಆದರೆ ನೆರೆಯ ತಮಿಳು, ತೆಲುಗು ಭಾಷೆಯ ಆ್ಯಪ್‌ಗಳನ್ನು ಹುಡುಕಿದರೆ ಸಾಹಿತ್ಯ ಮತ್ತು ಸಾಹಿತ್ಯೇತರ ಓದಿಗೆ ಪ್ರೇರೇಪಿಸುವ ಹಲವು ಆ್ಯಪ್‌ಗಳು ಲಭ್ಯವಿವೆ. ತಮಿಳಿನ ಶ್ರೇಷ್ಠ ಲೇಖಕರು, ತೆಲುಗಿನ ಕಥೆಗಾರರು ಆ್ಯಪ್ ರೂಪದಲ್ಲಿ, ಆಯಾ ಭಾಷೆಯ ಓದುಗರಿಗೆ ಸುಲಭವಾಗಿ, ಉಚಿತವಾಗಿ ಲಭ್ಯವಿದ್ದಾರೆ. ಕನ್ನಡದ ಯಾವ ಲೇಖಕನ ಬರಹಗಳು, ಕಥೆಗಳು, ಕಾದಂಬರಿಗಳು ಆ್ಯಪ್ ರೂಪದಲ್ಲಿ ಸಿಕ್ಕುವುದಿಲ್ಲ.

ಇನ್ನು ಕನ್ನಡದ ಇ-ಬುಕ್‌ಗಳ ವಿಷಯ; ಅದು ಇನ್ನೂ ಮರೀಚಿಕೆ. ಡೈಲಿಹಂಟ್, ಕ್ವಿಲ್ ರೀತಿಯ ಸಂಸ್ಥೆಗಳು ಒಂದಿಷ್ಟು ಲೇಖಕರ ಬೆನ್ನುಬಿದ್ದು ಅವರ ಪುಸ್ತಕಗಳನ್ನು ಈ ಪುಸ್ತಕದಲ್ಲಿ ಕೊಡಲು ಪ್ರಯತ್ನಿಸುತ್ತಿವೆ. ಆದರೆ ಅವರಿಗೂ ಸೂಕ್ತ ಪ್ರೋತ್ಸಾಹ ಸಿಗದೆ ತಡಕಾಡುತ್ತಿದ್ದಾರೆ.

ಕನ್ನಡದ ಪ್ರಕಾಶನ ಸಂಸ್ಥೆಗಳು ಕನ್ನಡದ ಪುಸ್ತಕಗಳನ್ನು ಇ-ಬುಕ್ ರೂಪದಲ್ಲಿ ಕೊಡುವುದಕ್ಕೆ ಹೆಚ್ಚು ಆಸಕ್ತಿ ತೋರದೇ ಇರುವುದು ಒಂದು ಗಮನಿಸಬೇಕಾದ ವಿಚಾರ. ಒಂದೆರಡು ಸಂಸ್ಥೆಗಳು ಈಗ ಇ-ಪುಸ್ತಕಗಳನ್ನು ಲಭ್ಯ ಮಾಧ್ಯಮಗಳ ಮೂಲಕ ತಾವು ಪ್ರಕಟಿಸುತ್ತಿರುವ ಪುಸ್ತಕಗಳನ್ನು ಇ-ಬುಕ್ ರೂಪದಲ್ಲಿ ಮಾರುಕಟ್ಟೆಗೆ ಪರಿಚಯಿಸುತ್ತಿವೆ. ಇನ್ನೊಂದೆಡೆ ಹಲವು ಪ್ರತಿಷ್ಠಿತ ಸಂಸ್ಥೆಗಳೇ ಇ-ಬುಕ್ ಮಾಡಿದರೆ, ಮಾರುಕಟ್ಟೆಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬ ಆತಂಕವನ್ನು ಎದುರಿಸುತ್ತಿವೆ. ಇ-ಬುಕ್ ಮಾಡಲು ನಾವು ಸಿದ್ಧವಿದ್ದೇವೆ, ಬೇಕಾದ ತಾಂತ್ರಿಕ ಬೆಂಬಲ ನೀಡುತ್ತೇವೆ ಎಂದು ಮುಂದೆ ಬಂದ ಉತ್ಸಾಹಿಗಳನ್ನು ಈ ಪ್ರಕಾಶನ ಸಂಸ್ಥೆಗಳು ನಿರಾಸೆ ಹುಟ್ಟಿಸಿ, ಹಿಂದೆ ಕಳಿಸಿವೆ. ಅಷ್ಟೇ ಅಲ್ಲ, ಉಳಿದ ಪ್ರಕಾಶನ ಸಂಸ್ಥೆಗಳಿಗೂ ಎಚ್ಚರಿಸಿವೆ! ಮಾರುಕಟ್ಟೆ ಇಲ್ಲವೆನ್ನುವ ಭಯವೂ ಕೆಲವರಿಗೆ ಈ ನಿಟ್ಟಿನ ಪ್ರಯತ್ನ ಮಾಡುವುದಕ್ಕೆ ಧೈರ್ಯವಿಲ್ಲದಂತೆ ಮಾಡಿದೆ. ಇರುವ ಸಾಧ್ಯತೆಗಳನ್ನು ಪರೀಕ್ಷಿಸದೆಯೇ ಮಾರುಕಟ್ಟೆಯ ಸಾಧ್ಯತೆಯಾದರೂ ಹೇಗೆ ತಿಳಿದೀತು? ಇಂಥ ಹುಂಬತನದಿಂದ ಹೊಸದೊಂದು ಓದುಗ ವರ್ಗವನ್ನು ಸೆಳೆಯಬಹುದಾದ ಅವಕಾಶ ಕಳೆದುಕೊಂಡರು ಎಂಬುದು ಮಾತ್ರ ಸತ್ಯ.

ಎಲ್ಲರ ಕೈಗೂ ಮೊಬೈಲ್ ಬಂದಿದೆ. ಮೊಬೈಲ್ ಅನೇಕ ಮೊಬೈಲ್‌ನಲ್ಲಿ ಓದುವುದಕ್ಕೆ ಅನುಕೂಲವಾಗುವ ಆ್ಯಪ್‌ಗಳು ಬಂದಿವೆ (ಯೂಬಿ ರೀಡರ್, ಮೂನ್ ರೀಡರ್, ವ್ಯಾಟ್‌ಪ್ಯಾಡ್, ಕಿಂಡಲ್ ಇನ್ನೂ ಹಲವು). ಮೆನಿಬುಕ್ಸ್.ನೆಟ್, ಆರ್ಕೈವ್.ಆರ್ಗ್ ಮುಂತಾದ ಕೆಲವು ವೆಬ್‌ಸೈಟ್‌ಗಳಲ್ಲಿ ಇ-ಬುಕ್ ರೂಪದಲ್ಲಿ ಲಭ್ಯವಿರುವ ಪುಸ್ತಕಗಳನ್ನು ಡೌನ್‌ಲೋಡ್ ಮಾಡಿಕೊಂಡು ಓದಲು ಸಾಧ್ಯವಿದೆ. ಶೇಕ್ಸ್‌ಪಿಯರ್, ಬ್ಲೇಕ್, ವುಡ್‌ಹೌಸ್, ಕ್ರಿಸ್ಟಿಯಂಥ ಓದುಗರನ್ನು ಉಚಿತವಾಗಿ ಓದಬಹುದು. ಇದೊಂದು ಸಾಧ್ಯತೆ. ಹೀಗೆ ಸಿಗುವ ಸಾಹಿತ್ಯವನ್ನು ಅನೇಕ ಆಸಕ್ತರು ತಮ್ಮ ಮೊಬೈಲ್, ಟ್ಯಾಬ್ಲೆಟ್‌ಗಳಲ್ಲಿ ಓದುತ್ತಿದ್ದಾರೆ.

ಕನ್ನಡದಲ್ಲಿ ಬರೆದು, ಹಂಚಿಕೊಂಡು ಸಂಭ್ರಮಿಸುವ ಬಳಕೆದಾರರಿಗೆ ಅವರವರ ಆಸಕ್ತಿಯ ಪುಸ್ತಕಗಳನ್ನು ಈ ಬುಕ್ ರೂಪದಲ್ಲಿ ಕೊಟ್ಟರೆ ಓದುವುದಿಲ್ಲವೆ?

ಓದುವಂತೆ ಮಾಡುವ ಪ್ರಯತ್ನವಾದರೂ ನಡೆದಿದೆಯೇ? ಹೊಸ ತಲೆಮಾರಿನ ಹುಡುಗರಿಗೆ ಕನ್ನಡ ಭಾಷೆಯ ಬಗ್ಗೆ ಆಸಕ್ತಿ ಇಲ್ಲ, ಕನ್ನಡದ ಪುಸ್ತಕಗಳನ್ನು ಓದುವುದಿಲ್ಲ ಎಂದು ದೂರಲಾಗುತ್ತದೆ. ಆದರೆ ಅವರಿಗೆ ಲಭ್ಯವಾಗಬೇಕಾದ ರೀತಿಯಲ್ಲಿ ಸಿಕ್ಕರೆ ಯಾಕೆ ಓದದೇ ಇರುತ್ತಾರೆ. ಈ ವಿಷಯ ಯೋಚಿಸುವಾಗ ನನಗೆ ಪದೇಪದೇ ನೆನಪಾಗುವುದು ತೇಜಸ್ವಿ. ಮಿಲಿಯನಮ್ ಸರಣಿಯನ್ನು ಪರಿಚಯಿಸದೇ ಹೋಗಿದ್ದರೆ ಕನ್ನಡ ಎಷ್ಟು ಓದುಗರನ್ನು ಕಳೆದುಕೊಳ್ಳುತ್ತಿತ್ತೆಂದು! ಕುತೂಹಲ, ರೋಚಕತೆಯ ಜೊತೆಗೆ ಹೊಸ ಜಗತ್ತನ್ನು ಪರಿಚಯಿಸಿದ ಈ ಪುಸ್ತಕಗಳ ಮೂಲಕ ಕನ್ನಡ ಸಾಹಿತ್ಯ ಪ್ರವೇಶಿಸಿದ ನೂರಾರು ಓದುಗರಿದ್ದಾರೆ.

ಹಾಗೆಯೇ ಇ-ಬುಕ್‌ಗಳ ಮೂಲಕ ಕನ್ನಡಕ್ಕೆ ದೊಡ್ಡ ಓದುಗ ವಲಯ ಲಭಿಸುತ್ತದೆ ಎಂಬುದು ನನ್ನ ವಿಶ್ವಾಸ. ಆದರೆ ನಿಟ್ಟಿನಲ್ಲಿ ಬದ್ಧತೆ ಬೇಕು, ಅದು ಸಾಮೂಹಿಕ ಬದ್ಧತೆ. ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನ ಒಂದೆಡೆಯಾದರೆ, ಭಾಷಿಕವಾಗಿ ನಮ್ಮ ನೆಲೆಯಲ್ಲೇ ಒಂದಿಷ್ಟು ಪ್ರಯತ್ನಗಳಾಗಬೇಕು. ಮುದ್ರಿತ ಪುಸ್ತಕಗಳಷ್ಟೇ ಮಾರುಕಟ್ಟೆಯಲ್ಲ. ಹೆಚ್ಚಿನ ಖರ್ಚಿಲ್ಲದೆ ಉತ್ಪಾದಿಸಬಹುದಾದ ಇ-ಬುಕ್‌ನಿಂದಲೂ ಒಂದು ಮಾರುಕಟ್ಟೆಯನ್ನು ಸೃಷ್ಟಿಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಇಡಬೇಕು. ಈ ನಿಟ್ಟಿನ ಪ್ರಚಾರವೂ ಅಗತ್ಯವಿದೆ. ಮೊಬೈಲ್ ಬಳಸುವ ಅನೇಕರಿಗೆ (ಕನ್ನಡಮಟ್ಟಿಗೆ) ಐದಿಂಚಿನ ಸ್ಕ್ರೀನ್‌ನಲ್ಲಿ ಕನ್ನಡ ಪುಸ್ತಕವನ್ನೂ ಓದಲು ಸಾಧ್ಯ ಎನ್ನುವುದು ತಿಳಿಯುವಂತಾಗಬೇಕು. ಸುಲಭವಾಗಿ ಲಭ್ಯವಾಗುತ್ತದೆ ಗೊತ್ತಾಗಬೇಕು.

ಇದೆಲ್ಲ ಮಾಡಬೇಕಾದರೆ ತಂತ್ರಜ್ಞಾನ, ನಮ್ಮ ಭಾಷೆಯನ್ನು ಬೆಂಬಲಿಸುವಂತಿರಬೇಕು ಎಂಬುದು ಈಗಾಗಲೇ ಬೇಡಿಕೆ ಇಟ್ಟಿರುವ ತಂಡದ ಆಗ್ರಹ. ಅಮೆಜಾನ್‌ಕ್ಕೆ ಕನ್ನಡ ದೊಡ್ಡ ಮಾರುಕಟ್ಟೆಯಲ್ಲದೇ ಇರುವುದೇ ಅವರು ಕನ್ನಡ ಪುಸ್ತಕಗಳನ್ನು ತಿರಸ್ಕರಿಸುವುದಕ್ಕೆ ಕಾರಣ. ಆದರೆ ಕನ್ನಡದಲ್ಲೇ ಬೇರುಬಿಟ್ಟು ನಿಂತಿರುವ ದಶಕಗಳ ಹೆಗ್ಗಳಿಕೆಯ ಪ್ರಕಾಶನ ಸಂಸ್ಥೆಗಳು ಹೊಸ ಕಾಲದ ಸಾಧ್ಯತೆಗಳಿಗೆ ಕಣ್ಣು ಬಿಡದೇ ಇದ್ದರೆ ಕನ್ನಡ ಪುಸ್ತಕಗಳು ಕಾಲದೊಂದಿಗೆ ಸರಿದು ಹೋಗುತ್ತವೆ. ಹೊಸ ಕಾಲದ ಹೊಸ ರೂಪಗಳನ್ನು ಪಡೆದುಕೊಳ್ಳುವುದಿಲ್ಲ. ಇನ್ನೂವರೆಗೂ ಈ ನಿಟ್ಟಿನಲ್ಲಿ ಪ್ರಯತ್ನವೇ ಆಗಿಲ್ಲದೇ ಹೋಗಿದ್ದರೆ ಹೀಗೆ ನಿರಾಶೆಯಿಂದ ಹೇಳಬಹುದಿತ್ತು. ಆದರೆ ಪ್ರಯತ್ನಗಳು ಆಗಿವೆ. ಅದಕ್ಕೆ ಕನ್ನಡದ ಲೇಖಕರು ಮತ್ತು ಪ್ರಕಾಶಕರು ಸೂಕ್ತ ಬೆಂಬಲ ನೀಡಿದ್ದರೆ ತಕ್ಕಮಟ್ಟಿಗೆ ಪ್ರಗತಿಯೂ ಕಾಣಬಹುದಿತ್ತೇನೊ.

ನಮ್ಮ ಪ್ರಕಾಶಕರೇ ಆಸಕ್ತಿ ತೋರಿದರೆ, ಇ-ಬುಕ್ ಲೋಕದಲ್ಲೂ ಕನ್ನಡದ ಪುಸ್ತಕಗಳೂ ಸದ್ದು ಮಾಡಬಹುದು. ಕನ್ನಡ ಭಾಷೆ ಬಗ್ಗೆ ಅಭಿಮಾನವಿರುವ ಅನೇಕ ಕನ್ನಡದ ತಂತ್ರಜ್ಞರಿದ್ದಾರೆ. ಅವರೊಂದಿಗೆ ಕನ್ನಡದ ಪ್ರಕಾಶಕರು ಕೈ ಜೋಡಿಸಿ ತಮ್ಮ ಪುಸ್ತಕಗಳನ್ನು ಇ-ಬುಕ್ ರೂಪದಲ್ಲಿ ತರುವುದಕ್ಕೆ ಬೇಕಾದ ತಂತ್ರಜ್ಞಾನದ ನೆರವು ಪಡೆಯಬೇಕು. ಈ ನಿಟ್ಟಿನಲ್ಲಿ ಪ್ರಯತ್ನ ನಡೆದರೆ ಕನ್ನಡದಲ್ಲಿ ಇ-ಬುಕ್ ಪ್ರಕಟಣೆ ಹೊಸ ಶಕೆಯನ್ನು ಬರೆಯುತ್ತದೆ.Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!