img

Navigation

Entertainment

ರಾಧಿಕಾ ಕುಮಾರಸ್ವಾಮಿ ನಾಪತ್ತೆ: ಸ್ವೀಟಿಯ ಮತ್ತೊಂದು ಚಿತ್ರವೂ ಡ್ರಾಪ್!

Suvarnanews: 1 year ago
ರಾಧಿಕಾ ಕುಮಾರಸ್ವಾಮಿ ನಾಪತ್ತೆ: ಸ್ವೀಟಿಯ ಮತ್ತೊಂದು ಚಿತ್ರವೂ ಡ್ರಾಪ್!

ನಟಿ ರಾಧಿಕಾ ಕುಮಾರಸ್ವಾಮಿ ಯಾವಾಗ ಮತ್ತೆ ತೆರೆಮೇಲೆ ಕಾಣಿಸಿಕೊಳ್ಳೋದು? ಈ ಪ್ರಶ್ನೆ ಅನೇಕರನ್ನು ಕಾಡ್ತಿದೆ. ‘ಲಕ್ಕಿ’ ಚಿತ್ರದ ಮೂಲಕ ನಿರ್ಮಾಪಕರಾಗಿ, ‘ಸ್ವೀಟಿ’ ಹಾಗೂ ‘ರುದ್ರತಾಂಡವ’ಕ್ಕೆ ನಾಯಕಿಯಾಗಿ ರೀ ಎಂಟ್ರಿ ಕೊಟ್ಟ ರಾಧಿಕಾ ಕುಮಾರಸ್ವಾಮಿ, ಹಿಂದಿನಂತೆ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರ್ತಾರೆಂದೇ ಭಾವಿಸಲಾಗಿತ್ತು. ರಘುರಾಮ್ ನಿರ್ದೇಶನದಲ್ಲಿ ‘ನಮಗಾಗಿ’ ಚಿತ್ರಕ್ಕೂ ರಾಧಿಕಾ ನಾಯಕಿಯಾದರು. ಆದರೆ, ‘ನಮಗಾಗಿ’ ಸಿನಿಮಾ ಸೆಟ್ಟೇರಿದ ಕೆಲವೇ ತಿಂಗಳಲ್ಲಿ ಡ್ರಾಪ್ ಆಗಿದೆ. ಇದರ ಜತೆಗೆ ಕನ್ನಡ ಚಿತ್ರರಂಗದಲ್ಲಿ ಬಹುನಿರೀಕ್ಷೆಗೆ ಕಾರಣವಾಗಿದ್ದ ‘ಬಂಗಾರದ ವಂಶ’ ಸಿನಿಮಾದಲ್ಲೂ ಅವರು ನಟಿಸಬೇಕಿತ್ತು. ಆದರೆ, ಅಲ್ಲೂ ರಾಧಿಕಾ ಅವರ ಸುಳಿವಿಲ್ಲ!

ಬಹಳ ವರ್ಷಗಳ ನಂತರ ಶಿವಣ್ಣ ಹಾಗೂ ರಾಧಿಕಾ ಒಟ್ಟಿಗೆ ಕಾಣಿಸಿಕೊಳ್ಳುವುದಕ್ಕೆ ಸಿದ್ಧವಾಗುತ್ತಿದ್ದ ಚಿತ್ರವೇ ‘ಬಂಗಾರದ ವಂಶ’. ಇದು ನಿರ್ದೇಶಕ ಓಂ ಸಾಯಿ ಪ್ರಕಾಶ್ ಅವರ ೧೦೦ನೇ ಸಿನಿಮಾ ಬೇರೆ. ಹೀಗಾಗಿ ಸಿನಿಮಾ ಸೆಟ್ಟೇರುವ ಮುನ್ನವೇ ಲಕ್ಷಾಂತರ ರುಪಾಯಿ ವೆಚ್ಚ ಮಾಡಿ ಅದ್ಧೂರಿಯಾಗಿ ಫೋಟೋಶೂಟ್ ಮಾಡಲಾಗಿತ್ತು. ಎಲ್ಲ ಕಡೆ ಜಾಹೀರಾತುಗಳೂ ರಾರಾಜಿಸಿದವು. ‘ಅಣ್ಣತಂಗಿ’ ನಂತರ ಮತ್ತೆ ಈ ಜೋಡಿ ಒಂದಾಗುತ್ತಿದ್ದ ಕಾರಣ ‘ಬಂಗಾರದ ವಂಶ’ಕ್ಕೆ ಸಾಕಷ್ಟು ಮಹತ್ವವೂ ಸಿಕ್ಕಿತ್ತು. ಆದರೆ, ಈಗಷ್ಟೇ ಬಂದಿರುವ ಸುದ್ದಿಯ ಪ್ರಕಾರ ‘ಬಂಗಾರದ ವಂಶ’ ಸಿನಿಮಾ ಟೇಕಪ್ ಆಗುವ ಯಾವ ಸಾಧ್ಯತೆಗಳೂ ಇಲ್ಲ. ಚಿತ್ರವನ್ನು ಸಂಪೂರ್ಣವಾಗಿ ಡ್ರಾಪ್ ಮಾಡಲಾಗಿದೆ ಎಂದು ಸ್ವತಃ ಈ ಚಿತ್ರದ ನಿರ್ದೇಶಕ ಓಂ ಸಾಯಿ ಪ್ರಕಾಶ್ ಹೇಳಿಕೊಂಡರು. ‘ರಾಧಿಕಾ, ಶಿವಣ್ಣ ಹಾಗೂ ನನ್ನ ಕಾಂಬಿನೇಷನ್‌ನ ಬಹುನಿರೀಕ್ಷಿತ ಸಿನಿಮಾ ಬಂಗಾರದ ವಂಶ ಎನ್ನುವುದು ನಿಜ. ಈ ಚಿತ್ರವೇ ನನ್ನ ನೂರನೇ ನಿರ್ದೇಶನದ ಸಿನಿಮಾ ಆಗುತ್ತದೆಂದು ನಾನೂ ಕನಸು ಕಂಡಿದ್ದೆ. ಆದರೆ, ಆ ಚಿತ್ರವನ್ನು ಆರಂಭಿಸಿ ವರ್ಷಗಳೇ ಕಳೆಯುತ್ತಿವೆ. ಅದರ ಸೂತ್ರಧಾರಿ ಕಂ ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಅವರೇ ಕೈಗೆ ಸಿಗುತ್ತಿಲ್ಲ. ಅವರನ್ನು ಬಿಟ್ಟು ಈ ಸಿನಿಮಾ ನನ್ನಿಂದ ಮಾಡಲಾಗದು. ರಾಧಿಕಾ ಮತ್ತೆ ಚಿತ್ರರಂಗಕ್ಕೆ ಬರುತ್ತಾರೋ ಇಲ್ಲವೋ ನನಗೆ ಗೊತ್ತಿಲ್ಲ. ಹೀಗಾಗಿ ನಾನು ಬಂಗಾರದ ವಂಶ ಚಿತ್ರವನ್ನು ನಂಬಿ ಕೂರುವುದಕ್ಕೆ ಆಗುತ್ತಿಲ್ಲ. ಈ ಕಾರಣಕ್ಕೆ ಚಿತ್ರವನ್ನು ಡ್ರಾಪ್ ಮಾಡಿದ್ದೇವೆ. ಸದ್ಯಕ್ಕೆ ಈ ಸಿನಿಮಾ ಸೆಟ್ಟೇರುವುದಿಲ್ಲ’- ಇದು ನಿರ್ದೇಶಕ ಓಂ ಸಾಯಿ ಪ್ರಕಾಶ್ ಕೊಡುವ ವಿವರಣೆ.

ಅಲ್ಲಿಗೆ ರಾಧಿಕಾ ಕುಮಾರಸ್ವಾಮಿ ಮತ್ತೆ ಚಿತ್ರರಂಗಕ್ಕೆ ಬರುವುದಿಲ್ಲ ಎನ್ನುವ ಸಂದೇಶವನ್ನು ಈ ರದ್ದಾದ ಸಿನಿಮಾ ರವಾನಿಸುತ್ತಿದೆಯಾ? ಅಷ್ಟಕ್ಕೂ ರಾಧಿಕಾ ಯಾಕೆ ಚಿತ್ರರಂಗದ ಪರಿಸರದಿಂದ ದೂರ ಉಳಿದಿದ್ದಾರೆ? ಬೇಡಿಕೆ ಇದ್ದರೂ ನಟಿಸಲು ಮುಂದಾಗುತ್ತಿಲ್ಲವೇಕೆ? ಆದರೆ, ‘ಬಂಗಾರದ ವಂಶ’ ಕೈ ಬಿಟ್ಟಿದ್ದರೂ ಶಿವಣ್ಣ ಅವರೊಂದಿಗೆ ಸಾಯಿಪ್ರಕಾಶ್ 100ನೇ ಸಿನಿಮಾ ಮಾಡುವುದು ನಿಶ್ಚಿತವಂತೆ. ಇದಕ್ಕೆ ಶಿವಣ್ಣ ಕೂಡ ಗ್ರೀನ್‌ಸಿಗ್ನಲ್ ಕೊಟ್ಟಿದ್ದಾರೆ. ಸಾಯಿಪ್ರಕಾಶ್ ಹೊಸ ಕತೆ ಮಾಡಿಕೊಳ್ಳುತ್ತಿದ್ದಾರಂತೆ. ರಾಧಿಕಾ ಸಿನಿಮಾ ಡ್ರಾಪ್ ಆದರೂ, ಸೆಂಚುರಿ ಸ್ಟಾರ್ ಜತೆ ನೂರನೇ ಸಿನಿಮಾ ಮಾಡಬೇಕೆಂಬ ಸಾಯಿಪ್ರಕಾಶ್‌ರ ಕನಸು ಮಾತ್ರ ಡ್ರಾಪ್ ಆಗಿಲ್ಲ!