img

Navigation

Sports

ವಿಶ್ವ ಶ್ರೇಯಾಂಕದಲ್ಲಿ ಇತಿಹಾಸ ನಿರ್ಮಿಸಿದ ಭಾರತದ ಅಥ್ಲೀಟ್‌ಗಳು

Suvarnanews: 1 year ago
 ವಿಶ್ವ ಶ್ರೇಯಾಂಕದಲ್ಲಿ ಇತಿಹಾಸ ನಿರ್ಮಿಸಿದ ಭಾರತದ ಅಥ್ಲೀಟ್‌ಗಳು

ರಿಯೊ ಡಿ ಜನೈರೋ(ಸೆ.07): ರಿಯೊ ನಗರಿಯಲ್ಲಿ ವಿಶ್ವ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟ ಶುರುವಾಗಿರುವ ಬೆನ್ನಲ್ಲೇ ವಿಶ್ವ ಪ್ಯಾರಾ ಹೈಜಂಪ್‌ ಶ್ರೇಯಾಂಕದಲ್ಲಿ ಭಾರತದ ಮೂವರು ಸ್ಪರ್ಧಿಗಳು ಕ್ರಮವಾಗಿ 1, 2 ಮತ್ತು 3ನೇ ಸ್ಥಾನ ಪಡೆಯುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

ಟಿ 42ರ ವಿಭಾಗದಲ್ಲಿ ಎತ್ತರ ಜಿಗಿತದಲ್ಲಿ ತಮಿಳುನಾಡಿನ ಮರಿಯಪ್ಪನ್‌ ತಂಗವೇಲು, ಉತ್ತರ ಪ್ರದೇಶದ ವರುಣ್‌ ಬಾಟಿ ಮತ್ತು ಬಿಹಾರದ ಶರದ್‌ ಕುಮಾರ್‌, ಕ್ರಮವಾಗಿ ಮೊದಲ 3 ಸ್ಥಾನ ಪಡೆದಿರುವುದು ವಿಶ್ವ ಪ್ಯಾರಾಥ್ಲೀಟ್‌ ಶ್ರೇಯಾಂಕದಲ್ಲಿನ ಅಪರೂಪದ ವಿದ್ಯಮಾನವಾಗಿದೆ. ಇನ್ನುಳಿದಂತೆ ಪುರುಷರ ಜಾವಲಿನ್‌ ಥ್ರೋ ಸ್ಪರ್ಧೆಯಲ್ಲಿ ಭಾರತದ ಅಮಿತ್‌ ಸರೋಹ ವಿಶ್ವ ಶ್ರೇಯಾಂಕದಲ್ಲಿ 2ನೇ ಶ್ರೇಯಾಂಕ ಪಡೆದಿದ್ದಾರೆ. ಸುಂದರ್‌ ಸಿಂಗ್‌ ಗುರ್ಜಾರ್‌ ಮತ್ತು 2004ರ ಅಥೆನ್ಸ್‌ ಒಲಿಂಪಿಕ್ಸ್‌ ಕೂಟದಲ್ಲಿ ಚಿನ್ನದ ಪದಕ ವಿಜೇತ ದೇವೇಂದ್ರ ಜಜಾರಿಯಾ ನಂತರದ ಸ್ಥಾನದಲ್ಲಿದ್ದಾರೆ. ಇನ್ನು ಪುರುಷರ ಪವರ್‌ ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ಕರ್ನಾಟಕದ ಫರ್ಮಾನ್‌ ಬಾಷಾ ವಿಶ್ವದ 6ನೇ ಶ್ರೇಯಾಂಕಿತ ಅಥ್ಲೀಟ್‌ ಎನಿಸಿದ್ದಾರೆ.

ಅಂದಹಾಗೆ ಸೆ.8ರಿಂದ ಆರಂಭವಾಗುವ ಸ್ಪರ್ಧೆಗಳಲ್ಲಿ ದಿಟ್ಟಪ್ರದರ್ಶನ ನೀಡುವುದರೊಂದಿಗೆ ಭಾರತದ ಅಥ್ಲೀಟ್‌ಗಳು ಪದಕ ಗೆಲ್ಲುವ ಉತ್ಸಾಹದಲ್ಲಿದ್ದಾರೆ. ಇದೇ ಮೊದಲ ಬಾರಿಗೆ ರಿಯೊ ಕೂಟದಲ್ಲಿ 19 ಮಂದಿ ಪ್ಯಾರಾ ಅಥ್ಲೀಟ್‌ಗಳು ಭಾಗವಹಿಸುತ್ತಿದ್ದು, ಪ್ಯಾರಾಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಭಾರತದ ಬಹುದೊಡ್ಡ ಕ್ರೀಡಾ ಪಡೆ ಎನಿಸಿದೆ. ಇನ್ನು ಮಹಿಳಾ ವಿಭಾಗದಲ್ಲಿನ ಶಾಟ್‌ಪುಟ್‌ ಸ್ಪರ್ಧಿ ದೀಪಾ ಮಲಿಕ್‌ ವಿಶ್ವದ 7ನೇ ಶ್ರೇಯಾಂಕಿತೆ ಎನಿಸಿದ್ದಾರೆ.