img

Navigation

Sports

ಪಾಕ್‌ ಗೆಲ್ಲಿಸಿದ ಶಾರ್ಜೀಲ್‌, ಖಲೀದ್‌

Suvarnanews: 1 year ago
ಪಾಕ್‌ ಗೆಲ್ಲಿಸಿದ ಶಾರ್ಜೀಲ್‌, ಖಲೀದ್‌

ಮ್ಯಾಂಚೆಸ್ಟರ್‌(ಸೆ.08): ಇತ್ತೀಚೆಗಷ್ಟೇ ಮುಕ್ತಾಯ ಕಂಡ 5 ಏಕದಿನ ಪಂದ್ಯ ಸರಣಿಯನ್ನು 1-4ರಿಂದ ಸೋತು ನಿರಾಸೆ ಅನುಭವಿಸಿದ್ದ ಪ್ರವಾಸಿ ಪಾಕಿಸ್ತಾನ ತಂಡ ಕಡೆಗೂ ಆತಿಥೇಯ ಇಂಗ್ಲೆಂಡ್‌ ವಿರುದ್ಧ ಗೆಲುವಿನ ನಗೆಬೀರಿದೆ. ಬುಧವಾರ ತಡರಾತ್ರಿ ಇಲ್ಲಿನ ಓಲ್ಡ್‌ ಟ್ರಾಫರ್ಡ್‌ ಮೈದಾನದಲ್ಲಿ ನಡೆದ ಏಕೈಕ ಚುಟುಕು ಪಂದ್ಯದಲ್ಲಿ ಪಾಕಿಸ್ತಾನ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ ಆ ಮೂಲಕ ಸರಣಿ ಕೈವಶಮಾಡಿಕೊಂಡಿತು.

ಗೆಲ್ಲಲು 136 ರನ್‌ ಗುರಿ ಪಡೆದಿದ್ದ ಪಾಕಿಸ್ತಾನ 14.5 ಓವರ್‌ಗಳಲ್ಲಿ ಅಂದರೆ ಇನ್ನೂ 31 ಎಸೆತಗಳು ಬಾಕಿ ಇರುವಂತೆಯೇ ಕೇವಲ 1 ವಿಕೆಟ್‌ ಕಳೆದುಕೊಂಡು 139 ರನ್‌ ಮಾಡಿ ಜಯಭೇರಿ ಬಾರಿಸಿತು. ಆರಂಭಿಕರಾದ ಶಾರ್ಜೀಲ್‌ ಖಾನ್‌ (59: 36 ಎಸೆತ, 7 ಬೌಂಡರಿ, 3 ಸಿಕ್ಸರ್‌) ಅರ್ಧಶತಕದ ನಂತರ ಔಟಾದರೆ, ಆ ನಂತರ ಖಾಲಿದ್‌ ಲತೀಫ್‌ (59: 42 ಎಸೆತ, 8 ಬೌಂಡರಿ, 2 ಸಿಕ್ಸರ್‌) ಮತ್ತು ಬಾಬರ್‌ ಅಜಾಮ್‌ 15 ರನ್‌ ಮಾಡಿ ಔಟಾಗದೆ ಉಳಿದರು.

ಬ್ಯಾಟಿಂಗ್‌ ವೈಫಲ್ಯ

ಇದಕ್ಕೂ ಮುನ್ನ ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡ್‌ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 135 ರನ್‌ ಗಳಿಸಿತು. ಪಾಕಿಸ್ತಾನ ಬೌಲರ್‌ಗಳ ಪ್ರಭಾವಿ ಪ್ರದರ್ಶನದ ಎದುರು ಇಂಗ್ಲೆಂಡ್‌ ಅಲ್ಪ ಮೊತ್ತಕ್ಕೆ ಕುಸಿಯಿತು. ವಹಾಬ್‌ ರಿಯಾಜ್‌ (18ಕ್ಕೆ 3) ಹಾಗೂ ಇಮಾದ್‌ ವಾಸಿಮ್‌ ಮತ್ತು ಹಸನ್‌ ಅಲಿ ತಲಾ 2 ವಿಕೆಟ್‌ ಪಡೆದು ಇಂಗ್ಲೆಂಡ್‌ ಅನ್ನು ನಿಯಂತ್ರಿಸಿದರು. ಆರಂಭಿಕ ಜಾಸನ್‌ ರಾಯ್‌ (21) ಮತ್ತು ಅಲೆಕ್ಸ್‌ ಹೇಲ್ಸ್‌ 37 ರನ್‌ ಗಳಿಸಿದರೆ ಮಿಕ್ಕವರು ವಿಫಲವಾದರು. ಅದರಲ್ಲೂ ಮಧ್ಯಮ ಕ್ರಮಾಂಕದಲ್ಲಿ ಜೋಸ್‌ ಬಟ್ಲರ್‌ (16) ಹಾಗೂ ನಾಯಕ ಇಯಾನ್‌ ಮಾರ್ಗನ್‌ 14 ರನ್‌ಗಳಿಗೆ ನಿರುತ್ತರರಾದರು. ಪರಿಣಾಮಕಾರಿ ಬೌಲಿಂಗ್‌ ಪ್ರದರ್ಶನ ನೀಡಿದ ಪಾಕಿಸ್ತಾನದ ವಹಾಬ್‌ ರಿಯಾಜ್‌ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಸಂಕ್ಷಿಪ್ತ ಸ್ಕೋರ್‌

ಇಂಗ್ಲೆಂಡ್‌: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 135

(ಜಾಸನ್‌ ರಾಯ್‌ 21, ಅಲೆಕ್ಸ್‌ ಹೇಲ್ಸ್‌ 37; ವಹಾಬ್‌ ರಿಯಾಜ್‌ 18ಕ್ಕೆ 3)

ಪಾಕಿಸ್ತಾನ: 14.5 ಓವರ್‌ಗಳಲ್ಲಿ 1 ವಿಕೆಟ್‌ಗೆ 139

(ಶಾರ್ಜೀಲ್‌ ಖಾನ್‌ 59, ಖಾಲೀದ್‌ ಲತೀಫ್‌ ಅಜೇಯ 59; ಅದಿಲ್‌ ರಶೀದ್‌ 29ಕ್ಕೆ 1)

ಫಲಿತಾಂಶ: ಪಾಕಿಸ್ತಾನಕ್ಕೆ 9 ವಿಕೆಟ್‌ ಗೆಲುವು

ಪಂದ್ಯಶ್ರೇಷ್ಠ: ವಹಾಬ್‌ ರಿಯಾಜ್‌