Top

ದೌರ್ಜನ್ಯ ಪ್ರಕರಣ ಖಂಡಿಸದಿದ್ದರೆ ಆತ್ಮಸಾಕ್ಷಿಗೆ ದ್ರೋಹ: ಮಿರ್ಜಿ


Asianet News Tuesday 23 August 2016 09:21 pm IST Karnataka
ದೌರ್ಜನ್ಯ ಪ್ರಕರಣ ಖಂಡಿಸದಿದ್ದರೆ ಆತ್ಮಸಾಕ್ಷಿಗೆ ದ್ರೋಹ: ಮಿರ್ಜಿ
23 Aug

ದಾವಣಗೆರೆ (ಆ.23): ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಗಳ ಖಂಡಿಸುವ ಮನೋಭಾವ ವ್ಯಕ್ತವಾಗದಿದ್ದರೆ ಅದು ಆತ್ಮಸಾಕ್ಷಿಗೆ ದ್ರೋಹವೆಸಗಿದಂತೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಸುವರ್ಣ ಕೆ ಮಿರ್ಜಿ ಅಭಿಪ್ರಾಯಪಟ್ಟರು.

ನಗರದ ಬಾಲಕರ ಬಾಲ ಮಂದಿರದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಸ್ತ್ರೀಶಕ್ತಿ ಸಂಘದ ಮಹಿಳೆಯರಿಗೆ, ಅಂಗನವಾಡಿ ಮೇಲ್ವಿಚಾರಕರಿಗೆ ಮಂಗಳವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಹಿಳೆಯ ರಕ್ಷಣೆ ಹಾಗೂ ಅವರಲ್ಲಿ ಸ್ವಾಭಿಮಾನ ಮೂಡಿಸುವ ನಿಟ್ಟಿನಲ್ಲಿ ಅನೇಕ ಕಾನೂನುಗಳಿದ್ದರೂ ಅತ್ಯಾಚಾರ ಹಾಗೂ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗಿಲ್ಲ. ಮಹಿಳೆಯರನ್ನು ಗೌರವಿಸುವ ನಿಟ್ಟಿನಲ್ಲಿನ ಪ್ರಯತ್ನಗಳು ವ್ಯಾಪಕಗೊಳ್ಳುವ ಅಗತ್ಯವಿದೆ ಎಂದರು.

ಮಹಿಳೆಯರಿಗೆ ಹೆಚ್ಚಾಗಿ ಕಾನೂನು ಅರಿವು ಅವಶ್ಯಕ. ಲೋಕ ಅದಾಲತ್‌ನಲ್ಲಿ ಸಣ್ಣಪುಟ್ಟಪ್ರಕರಣಗಳನ್ನು ರಾಜಿ ಮಾಡಿಕೊಳ್ಳುವುದರಿಂದ ಕಾಲಹರಣ ತಪ್ಪುತ್ತದೆ ಹಾಗೂ ಇಬ್ಬರು ವ್ಯಕ್ತಿಗಳ ಸಂಬಂಧ ಉತ್ತಮವಾಗಿರುತ್ತದೆ. ನ್ಯಾಯಾಲಯದಲ್ಲಿ ಸಣ್ಣ ಪುಟ್ಟಪ್ರಕರಣಗಳು ಬೇಗ ಇತ್ಯರ್ಥವಾಗದೇ ಬಹುದಿನಗಳ ಕಾಲ ನಡೆದರೆ ಇಬ್ಬರ ನಡುವೆ ವೈಮನಸ್ಸು ಉಂಟಾಗುತ್ತದೆ. ಹಾಗಾಗಿ ಲೋಕ ಅದಾಲತ್‌ನಲ್ಲಿ ಸಣ್ಣ ಪುಟ್ಟವಿಚಾರಗಳನ್ನು ಬಗೆಹರಿಸಿಕೊಳ್ಳುವುದು ಸೂಕ್ತವೆಂದು ಸಲಹೆ ಮಾಡಿದರು.

ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಯೋಗೇಶ್‌ ಮಾತನಾಡಿ, ದೇಶದಲ್ಲಿ ಪ್ರತಿ ನಿಮಿಷಕ್ಕೆ ಒಬ್ಬ ಮಹಿಳೆಯ ಸಾವು, ಪ್ರತಿ 26 ನಿಮಿಷಕ್ಕೆ ಮಹಿಳೆಯರ ಮೇಲೆ ಕೃತ್ಯ, ಪ್ರತಿ 50 ನಿಮಿಷಕ್ಕೆ ದೌರ್ಜನ್ಯ, ಪ್ರತಿ ನಿಮಿಷಕ್ಕೆ ಅಪಹರಣವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮಹಿಳೆಯರ ಪರವಾಗಿ ನಿಲ್ಲುವ ಛಾತಿಗಳು ಗೋಚರಿಸಬೇಕು. ಕಾನೂನು ಹೋರಾಟದ ಮೂಲಕ ದೌರ್ಜನ್ಯವೆಸಗುವವರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದರು.

ನ್ಯಾಯಾಧೀಶ ದೊಗ್ಗಳ್ಳಿ ವಿಜಯಪ್ರಕಾಶ್‌ ಮಾತನಾಡಿ, ಮಹಿಳೆಯರ ಮೇಲೆ ಅತ್ಯಾಚಾರ ದೌರ್ಜನ್ಯಗಳು ನಡೆದಾಗ ಬಹುತೇಕರು ಸಮಾಜ ಹಾಗೂ ಮರ್ಯಾದೆಗೆ ಅಂಜಿ ಪ್ರಕರಣಗಳ ಮುಚ್ಚಿ ಹಾಕಲು ಮುಂದಾಗುತ್ತಾರೆ. ಇಂತಹ ನಡವಳಿಕೆಗಳು ಕಿಡಿಗೇಡಿಗಳಿಗೆ ಮತ್ತಷ್ಟುಕುಮ್ಮಕ್ಕು ನೀಡಿದಂತಾಗುತ್ತದೆ ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಹಕ್ಕುಗಳ ನ್ಯಾಯಾಧೀಶ ಮಂಜಪ್ಪ ಕಾಕನೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿಜಯಕುಮಾರ್‌, ನ್ಯಾಯಾಧೀಶರಾದ ಅನಿತ, ಚಂದ್ರಪ್ಪ ಮಹಾಂತೇಶ್‌ ಸ್ವಾಮಿ, ರಾಮಲಿಂಗಪ್ಪ ಉಪಸ್ಥಿತರಿದ್ದರು.

-ಕನ್ನಡ ಪ್ರಭ 

 Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!