Top

ಪದವಿ ಹೋದ್ರೂ ಪದಕ ಕೊಡ್ತಾ ಇಲ್ಲ!


Asianet News Sunday 04 September 2016 05:17 pm IST Karnataka
ಪದವಿ ಹೋದ್ರೂ ಪದಕ ಕೊಡ್ತಾ ಇಲ್ಲ!
04 Sep

ಅಂಶಿ ಪ್ರಸನ್ನಕುಮಾರ್ ಮೈಸೂರು

ಕರ್ತವ್ಯ ವೇಳೆ ಸಲ್ಲಿಸಿದ ವಿಶಿಷ್ಟ ಸೇವೆಗಾಗಿ ಕೊಡಮಾಡಿದ ಪದಕ ಪಡೆಯೋಕೆ ನಿವೃತ್ತಿಯಾಗಬೇಕಾ? ರಾಷ್ಟ್ರಪತಿಗಳಿಂದ ಶೌರ್ಯ, ವಿಶಿಷ್ಟ ಸೇವಾ ಹಾಗೂ ಶ್ಲಾಘನೀಯ ಸೇವಾ ಪದಕಕ್ಕೆ ಆಯ್ಕೆಯಾದ ಪೊಲೀಸರ ಸ್ಥಿತಿ ನೋಡಿದರೆ ಇಂಥ ಪ್ರಶ್ನೆ ಏಳದೇ ಇರದು.

ಸಾಮಾನ್ಯವಾಗಿ ವರ್ಷಕ್ಕೆರಡು ಬಾರಿ ಅಂದರೆ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಶೌರ್ಯ, ವಿಶಿಷ್ಟ ಸೇವಾ ಹಾಗೂ ಶ್ಲಾಘನೀಯ ಸೇವಾ ಪದಕಗಳನ್ನು ಪೊಲೀಸರಿಗೆ ಘೋಷಿಸಲಾಗುತ್ತದೆ. ನಂತರ ರಾಜಭವನದಲ್ಲಿ ನಡೆಯುವ ಸಮಾರಂಭದಲ್ಲಿ ಇವುಗಳನ್ನು ರಾಜ್ಯಪಾಲರು ಪ್ರದಾನ ಮಾಡುತ್ತಾರೆ. 2012ರ ಗಣರಾಜ್ಯೋತ್ಸವ, 2013ರ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆ, 2014ರ ಗಣರಾಜ್ಯೋತ್ಸವ ಸಂದರ್ಭದಲ್ಲಿ ಪದಕ ಪಡೆದ 67 ಮಂದಿಗೆ ಪದಕ ಪ್ರದಾನ ಮಾಡಲು ಮೂರು ತಿಂಗಳ ಹಿಂದೆ ಅಂದರೆ ಮೇ28ರಂದು ಸಮಾರಂಭ ಏರ್ಪಡಿಸಲಾಗಿತ್ತು. ಆದರೆ ಅದು ಅನಿವಾರ್ಯ ಕಾರಣಗಳಿಂದ ಕೊನೇ ಕ್ಷಣದಲ್ಲಿ ಮುಂದಕ್ಕೆ ಹೋಯಿತು. ಮೂರು ತಿಂಗಳು ಕಳೆದರೂ ಈ ಕಾರ್ಯಕ್ರಮ ನಡೆದಿಲ್ಲ. ಎಷ್ಟೋ ಮಂದಿ ಜೂನ್, ಜುಲೈ ಹಾಗೂ ಆಗಸ್ಟ್‌ನಲ್ಲಿ ಸೇವೆಯಿಂದ ನಿವೃತ್ತರಾಗಿದ್ದಾರೆ. ಇದರಿಂದಾಗಿ ಸೇವೆಯಲ್ಲಿರುವಾಗಲೇ ಪದಕ ಪಡೆಯಬೇಕೆಂಬ ಅವರ ಆಸೆ ಕಮರಿ ಹೋಗಿದೆ. ಇನ್ನೂ ಕೆಲವರು ಈ ಮಾಸಾಂತ್ಯದಲ್ಲಿ (ಸೆಪ್ಟಂಬರ್‌ನಲ್ಲಿ) ನಿವೃತ್ತರಾಗಲಿದ್ದಾರೆ.

ಪದಕ ಪಡೆದ ಅಧಿಕಾರಿಗಳು, ಸಿಬ್ಬಂದಿ ತಮ್ಮ ಸೇವಾವಧಿಯಲ್ಲಾದರೆ ಕುಟುಂಬ ಸಮೇತರಾಗಿ ಪದಕ ಪ್ರದಾನ ಸಮಾರಂಭದಲ್ಲಿ ಭಾಗಿಯಾಗುತ್ತಾರೆ. ಸೇವೆ ಇರುವಾಗಲೇ ಪದಕ ನೀಡಿದರೆ ವಿವಿಧ ಕಾರ್ಯಕ್ರಮಗಳಲ್ಲಿ ಅದನ್ನು ಧರಿಸಿ ಸಮಾರಂಭಗಳಿಗೆ ಹಾಜರಾಗಬಹುದು. ನಿವೃತ್ತಿಯಾದ ನಂತರ ಕೊಟ್ಟರೆ ಏನು ಬಂತು ಎನ್ನುವ ಭಾವನೆ ಅವರಲ್ಲಿ ಮೂಡುತ್ತಿದೆ.

ಕಾರ್ಕಳದಲ್ಲಿ ನಕ್ಸಲ್ ನಿಗ್ರಹಪಡೆಯ ಉಪ ಕಮಾಂಡೆಂಟ್ ಆಗಿದ್ದ ಎ.ಎಚ್.ಶಂಕರ್ (ಈಗ ನಿವೃತ್ತರು), ಕಾನ್‌ಸ್ಟೇಬಲ್‌ಗಳಾದ ನವೀನ್ ಜಿ. ನಾಯಕ್, ಬಿ.ಡಿ.ಪ್ರದೀಪ್ ಅವರಿಗೆ ಶೌರ್ಯ ಪದಕವನ್ನು ೨೦೧೩ರ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲೇ ಘೋಷಿಸಲಾಗಿತ್ತು. 2012ರ ಗಣರಾಜ್ಯೋತ್ಸವ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆ ಚಿಕ್ಕೋಡಿ ಉಪ ವಿಭಾಗದ ಡಿವೈಎಸ್ಪಿ ಬಿ.ಎಸ್. ಅಂಗಡಿ ಅವರಿಗೆ ಶ್ಲಾಘನೀಯ ಸೇವೆಗಾಗಿ ರಾಷ್ಟ್ರಪತಿಗಳ ಪದಕ ಘೋಷಿಸಲಾಗಿತ್ತು. ಉಳಿದ 63 ಮಂದಿ ಪೈಕಿ 2013ರ ಗಣರಾಜ್ಯೋತ್ಸವ ಸಂದರ್ಭದಲ್ಲಿ ಪದಕ ಘೋಷಣೆಯಾಗಿರುವ 24 ಮಂದಿ ಹಾಗೂ 2013ರ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಪದಕ ಘೋಷಣೆಯಾಗಿರುವ 18, 2014ರ ಗಣರಾಜ್ಯೋತ್ಸವ ಸಂದರ್ಭದಲ್ಲಿ ಪದಕ ಘೋಷಣೆಯಾಗಿರುವ 21 ಮಂದಿ ಸೇರಿದ್ದಾರೆ.

ಈ ಪೈಕಿ 20ಕ್ಕೂ ಹೆಚ್ಚು ಮಂದಿ ಈಗಾಗಲೇ ನಿವೃತ್ತರಾಗಿದ್ದಾರೆ. ಈ ಪಟ್ಟಿಯಲ್ಲಿ ಹಿರಿಯ ಐಪಿಎಸ್ ಅಧಿಕಾರಿಗಳಾದ ಅಮರ್‌ಕುಮಾರ್ ಪಾಂಡೆ, ಟಿ. ಸುನಿಲ್‌ಕುಮಾರ್, ಬಿ.ಶಿವಕುಮಾರ್, ಎಚ್.ಎಸ್. ರೇವಣ್ಣ, ಪಿ. ಹರಿಶೇಖರನ್, ಎಸ್. ಮುರುಗನ್, ಕೆ.ವಿ. ಶರತ್ಚಂದ್ರ, ಡಾ.ಪಿ. ರವೀಂದ್ರನಾಥ್, ಸೀಮಂತ್‌ಕುಮಾರ್ ಸಿಂಗ್, ಸೌಮೇಂದು ಮುಖರ್ಜಿ ಕೂಡ ಸೇರಿದ್ದಾರೆ. ಇವರ‌್ಯಾರಿಗೂ ಪದಕ ಪ್ರದಾನ ಆಗಿಲ್ಲ.



Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!