Top

ಬೇಲೆಕೇರಿ ಅದಿರಿಗೆ ಸಿಗಲಿದೆ ಮುಕ್ತಿ..! ₹೮೧೦ ಕೋಟಿ ಮೌಲ್ಯದ ಕಬ್ಬಿಣದ ಅದಿರು ಹರಾಜು ಹಾಕಲು ಸಿಬಿಐ ವಿಶೇಷ ಕೋರ್ಟ್ ಆದೇಶ


Asianet News Thursday 25 August 2016 01:13 pm IST Karnataka
ಬೇಲೆಕೇರಿ ಅದಿರಿಗೆ ಸಿಗಲಿದೆ ಮುಕ್ತಿ..! ₹೮೧೦ ಕೋಟಿ ಮೌಲ್ಯದ ಕಬ್ಬಿಣದ ಅದಿರು ಹರಾಜು ಹಾಕಲು ಸಿಬಿಐ ವಿಶೇಷ ಕೋರ್ಟ್ ಆದೇಶ
25 Aug

ಕಾರವಾರ(ಆ.25): ಅಕ್ರಮ ಅದಿರು ಸಾಗಾಟ, ಅದಿರು ಕಳ್ಳತನ, ಪರಿಸರ ಮಾಲಿನ್ಯದಿಂದ ಕೋಲಾಹಲಕ್ಕೆ ಕಾರಣವಾಗಿದ್ದ ಬೇಲೆಕೇರಿ ಬಂದರಿನಲ್ಲಿ ರಾಶಿ ರಾಶಿಯಾಗಿರುವ ಸುಮಾರು ₹೮೧೦ ಕೋಟಿ ಮೌಲ್ಯದ ಕಬ್ಬಿಣದ ಅದಿರನ್ನು ಹರಾಜು ಹಾಕಲು ಸಿಬಿಐ ವಿಶೇಷ ನ್ಯಾಯಾಲಯ ಆದೇಶಿಸಿದೆ. ಇದರಿಂದ ಬೇಲೆಕೇರಿ ಬಂದರು ಅಭಿವೃದ್ಧಿಗೂ ಇದ್ದ ತೊಡಕು ನಿವಾರಣೆಯಾದಂತಾಗಿದೆ.

ಬೇಲೆಕೇರಿ ಬಂದರಿನಲ್ಲಿರುವ ಜಪ್ತಿ ಮಾಡಲಾಗಿದ್ದ ಅದಿರು (₹೨೫೦ ಕೋಟಿ ಮೌಲ್ಯದ ಅದಿರು ನಾಪತ್ತೆಯಾದ ಮೇಲೆ ಉಳಿದ ಅದಿರು) ಹಾಗೂ ಸಾಗಣೆ ಮಾಡಲಾಗದೆ ಬಂದರಿನಲ್ಲಿ ರಾಶಿಯಾಗಿ ಬಿದ್ದಿರುವ ವಿವಿಧ ಕಂಪನಿಗಳ ಅದಿರು ವಿಲೇವಾರಿ ಮಾಡಲು ಅಡ್ಡಿಯಿಲ್ಲ.

ಈಗ ಬೇಲೆಕೇರಿ ಬಂದರಿನಲ್ಲಿ ಒಟ್ಟು ೫೬ ರಾಶಿಗಳಷ್ಟು ಅದಿರಿನಲ್ಲಿ, ಅರಣ್ಯ ಇಲಾಖೆ ಅದಿರು ನಾಪತ್ತೆ ಪ್ರಕರಣದ ೧೧ ಅದಿರು ರಾಶಿ (೨.೭೨ ಲಕ್ಷ ಮೆಟ್ರಿಕ್ ಟನ್) ಗಳನ್ನು ತನ್ನ ವಶದಲ್ಲಿ ಇಟ್ಟುಕೊಂಡಿದೆ. ಇನ್ನುಳಿದ ೪೫ ಅದಿರು ರಾಶಿಗಳು ವಿವಿಧ ಕಂಪನಿ ಅಡಿಯಲ್ಲಿದ್ದರೂ ಬಂದರಿನಲ್ಲಿ ಯಾವುದೇ ವಹಿವಾಟಿಗೆ ಅವಕಾಶ ಇರದೇ, ಬಂದರಿನಲ್ಲೆ ಕೊಳೆಯುತ್ತಿತ್ತಲ್ಲದೆ ಪರಿಸರ ಮಾಲಿನ್ಯಕ್ಕೂ ಕಾರಣವಾಗಿತ್ತು.

ನ್ಯಾಯಾಲಯದಲ್ಲಿ ಠೇವಣಿ:

ಬೇಲೆಕೇರಿ ಬಂದರಿನಲ್ಲಿರುವ ಅದಿರು ರಾಶಿಯನ್ನು ಹರಾಜು ಹಾಕಿ ಬಂದ ಹಣವನ್ನು ಸಿಬಿಐ ನ್ಯಾಯಾಲಯದಲ್ಲಿ ಠೇವಣಿ ಇಡಬೇಕು. ಅದಿರು ನಾಪತ್ತೆ ಹಾಗೂ ಅಕ್ರಮ ಅದಿರು ಸಾಗಾಟ ಪ್ರಕರಣ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಒಂದು ವೇಳೆ ಆದೇಶ ಕಂಪನಿಯ ಪರವಾಗಿ ಬಂದರೆ ಹಣವನ್ನು ವಹಿವಾಟು ಕಂಪನಿಗೆ ನೀಡಬೇಕು. ಆರೋಪ ಸಾಬೀತಾದಲ್ಲಿ ಹಣ ಸರ್ಕಾರದ ಬೊಕ್ಕಸಕ್ಕೆ ಸೇರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಬೇಲೆಕೇರಿ ಬಂದರಿನಲ್ಲಿ ಅದಾನಿ ಗ್ರೂಪ್‌ಗೆ ಸೇರಿದ ₹೪೧೮ ಕೋಟಿ ಮೌಲ್ಯದ ಕಬ್ಬಿಣ ಅದಿರು ರಾಶಿ ಬಿದ್ದಿದೆ. ಉಳಿದ ಕೆಲ ಕಂಪನಿಗಳ ಅದಿರು ಸಹ ಇಲ್ಲಿ ಕೊಳೆಯುತ್ತಿವೆ. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ಅದಿರಿನ ಗುಣಮಟ್ಟ ಹಾಗೂ ಇತರ ವಿವರಗಳನ್ನು ಪರೀಕ್ಷಿಸಿದೆ.

ಬೇಲೆಕೇರಿ ಕಬ್ಬಿಣದ ಅದಿರು ನಾಪತ್ತೆ ಹಾಗೂ ಅಕ್ರಮ ಅದಿರು ರಫ್ತಿಗೆ ಸಂಬಂಧಿಸಿ ಸಿಬಿಐ ಡಾ. ಸುಬ್ರಮಣ್ಯೇಶ್ವರ ರಾವ್ ನೇತೃತ್ವದ ತಂಡ ಸಲ್ಲಿಸಿದ ದೋಷಾರೋಪಣ ಪಟ್ಟಿಯ ಆಧಾರದ ಮೇಲೆ ಪ್ರಕರಣ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಈ ಪ್ರಕರಣದಲ್ಲಿ ಭಾಗಿಯಾದ ಆರೋಪದನ್ವಯ ಶಾಸಕ ಸತೀಶ ಸೈಲ್, ಸಚಿವ ಸಂತೋಷ ಲಾಡ್, ಅನಿಲ ಲಾಡ್ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ.

ಕೇಂದ್ರ ಸರ್ಕಾರ ₹೫ ಸಾವಿರ ಕೋಟಿ ವೆಚ್ಚದಲ್ಲಿ ಬೇಲೆಕೇರಿ ಬಂದರು ಅಭಿವೃದ್ಧಿಗೆ ಮುಂದಾಗಿತ್ತು. ಆದರೆ, ಬಂದರಿನಲ್ಲಿನ ಅದಿರಿನ ರಾಶಿ ಇದಕ್ಕೆ ತೊಡಕಾಗಿತ್ತು. ಈಗ ಅಭಿವೃದ್ಧಿಗೂ ಹಸಿರು ನಿಶಾನೆ ದೊರಕಿದೆ. ದೇಶದಲ್ಲಿಯೆ ೩ನೇ ಅತಿದೊಡ್ಡ ಅಂತಾರಾಷ್ಟ್ರೀಯ ಬಂದರಾಗಿ ಬೇಲೆಕೇರಿ ಬಂದರು ತಲೆಎತ್ತುವ ಸಾಧ್ಯತೆ ಇದೆ.

- ವಸಂತಕುಮಾರ್ ಕತಗಾಲ ಕಾರವಾರ

 



Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!