Top

ಇಸ್ರೋ ಮಾಜಿ ಮುಖ್ಯಸ್ಥ ಮಾಧವನ್ ನಾಯರ್ ವಿರುದ್ಧ ಸಿಬಿಐ'ನಿಂದ ಚಾರ್ಜ್'ಶೀಟ್


Asianet News Thursday 11 August 2016 08:20 pm IST India
ಇಸ್ರೋ ಮಾಜಿ ಮುಖ್ಯಸ್ಥ ಮಾಧವನ್ ನಾಯರ್ ವಿರುದ್ಧ ಸಿಬಿಐ'ನಿಂದ ಚಾರ್ಜ್'ಶೀಟ್
11 Aug

ನವದೆಹಲಿ(ಆ.11): ಕೇಂದ್ರೀಯ ತನಿಖಾ ದಳ ಇಸ್ರೋ'ದ ಮಾಜಿ ಮುಖ್ಯಸ್ಥ ಮಾಧವನ್ ನಾಯರ್ ವಿರುದ್ಧ ಬಹು ಕೋಟಿ ರೂ. ಆಂಟ್ರಿಕ್ಸ್- ದೇವಸ್ ಹಗರಣಕ್ಕೆ ಸಂಬಂಧಿಸಿದಂತೆ ಆರೋಪಪಟ್ಟಿ ಸಲ್ಲಿಸಿದೆ.

ಇಸ್ರೋ'ದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ನಂತರ ನಾಯರ್ ಅವರು ಅದರ ಅಂಗಸಂಸ್ಥೆ ಆಂಟ್ರಿಕ್ಸ್'ನ ಕಾರ್ಯಕಾರಿ ಮಂಡಳಿಯ ಅಧ್ಯಕ್ಷರಾಗಿ ಬಹುಕೋಟಿ ವ್ಯಾಪಾರ ಒಪ್ಪಂದವನ್ನು ಲಾಭಕ್ಕೆ ಪಡೆದುಕೊಂಡು ಅಂತಿಮಗೊಳಿಸಿದ್ದರು ಎಂಬ ಆರೋಪ ಎದುರಿಸುತ್ತಿದ್ದಾರೆ.

ಸಿಬಿಐ ಈಗಾಗಲೇ ಇಸ್ರೋದ ವಾಣಿಜ್ಯ ಉಪಕರಣ ಸಂಸ್ಥೆ ಆಂಟ್ರಿಕ್ಸ್'ಗಾಗಿ ಖಾಸಗಿ ಮಲ್ಟಿಮೀಡಿಯಾ ಸಂಸ್ಥೆ ದೇವಸ್'ಗಾಗಿ ಲಾಭ ಮಾಡಿಕೊಡುವ ದೃಷ್ಟಿಯಿಂದ ಅಕ್ರಮವಾಗಿ 578 ಕೋಟಿ ರೂ. ಒಪ್ಪಂದಕ್ಕೆ ಸಹಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ  ನಾಯರ್ ವಿರುದ್ಧ ಪ್ರಕರಣ ದಾಖಲಿಸಿದೆ.

ಆಂಟ್ರಿಕ್ಸ್ ಹಾಗೂ ದೇವಸ್ ಮಲ್ಟಿಮೀಡಿಯಾ ಪ್ರೈವೇಟ್ ಲಿ. ನಡುವೆ 2005 ಜನವರಿ 28 ರಂದು ಮಾದವನ್ ನಾಯರ್ ಅವರು ಅಧಿಕಾರಾವಧಿಯಲ್ಲಿ ಒಪ್ಪಂದ ಏರ್ಪಟ್ಟಿದ್ದು, ಇದಕ್ಕೆ ಸಂಬಂಧಿಸಿದಂತೆ ಸಿಬಿಐ ಮುಖ್ಯ ಕಚೇರಿಯಿಂದ ಸಮನ್ಸ್ ನೀಡಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಕಳೆದ ವರ್ಷ ಬೆಂಗಳೂರಿನ ದೇವಸ್ ಕಚೇರಿಯಲ್ಲಿ ದಾಖಲೆಗಳನ್ನು ಪರಿಶೀಲಿಸಿದ್ದರು. ಸಿಬಿಐ ಈಗಾಗಲೇ ಆಂಟ್ರಿಕ್ಸ್ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ಕೆ.ಆರ್. ಶ್ರೀಧರ್, ದೇವಸ್ ಸಂಸ್ಥೆಯ ಉಪಕರಣಗಳ ಸಲಹೆಗಾರರಾದ ಎಂ.ಜಿ. ಚಂದ್ರಶೇಖರ್, ಆರ್. ವಿಶ್ವನಾಥನ್ ವಿರುದ್ಧ ಎಫ್'ಐಆರ್ ದಾಖಲಿಸಿ ಭಾರತೀಯ ದಂಡ ಸಂಹಿತೆ ಅನ್ವಯ 120-ಬಿ ಅಪರಾಧ ಪಿತೂರಿ, (420) ಮೋಸದ ಪ್ರಕರಣಗಳನ್ನು ದಾಖಲಿಸಿದೆ.

ದೇವಸ್ ಸಂಸ್ಥೆಯು ಎಸ್ ಬ್ಯಾಂಡ್ ಮೂಲಕ ಜಿಸ್ಯಾಟ್-6 ಹಾಗೂ ಜಿಸ್ಯಾಟ್-6ಎ ಉಪಗ್ರಹದ ಹಾಗೂ ಟೆರೆಸ್ಟ್ರಿಯಲ್ ವ್ಯವಸ್ಥೆಯ ಮೂಲಕ  ಮೊಬೈಲ್ ಪೋನ್'ಗಳಿಗೆ ವಿಡಿಯೋಗಳು, ಮಲ್ಟಿಮೀಡಿಯಾ ಹಾಗೂ ಮಾಹಿತಿ ಸೇವೆಗಳನ್ನು ವಿತರಿಸುವ ಸಂಸ್ಥೆಯಾಗಿದೆ. ಆದರೆ ಇಸ್ರೋ ಹಾಗೂ ಆಂಟ್ರಿಕ್ಸ್ ಅಧಿಕಾರಿಗಳನ್ನು ಬಳಸಿಕೊಂಡು ಭ್ರಷ್ಟಾಚಾರವೆಸಗಿರುವ ಆರೋಪ ಸಂಸ್ಥೆಯ ಮೇಲಿದೆ.



Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!