Top

ವೈದ್ಯರಾಗಿ ಈ ಊರುಗಳಲ್ಲಿ ಕೆಲಸ ಮಾಡುವವರಿಗೆ ಜಿಲ್ಲಾಧಿಕಾರಿಯಿಂದ ಬಂಪರ್ ಆಫರ್


Asianet News Thursday 08 September 2016 04:16 pm IST India
ವೈದ್ಯರಾಗಿ ಈ ಊರುಗಳಲ್ಲಿ ಕೆಲಸ ಮಾಡುವವರಿಗೆ ಜಿಲ್ಲಾಧಿಕಾರಿಯಿಂದ ಬಂಪರ್ ಆಫರ್
08 Sep

ರಾಯ್ಪುರ: ‘‘ದಯವಿಟ್ಟು ನಮ್ಮಲ್ಲಿಗೆ ಬನ್ನಿ. ಇಲ್ಲಿ ವೈದ್ಯರ ಕೊರತೆಯಿದೆ. ನೀವು ಕೆಲಸಕ್ಕೆ ಸೇರಿಕೊಂಡರೆ ಬಂಪರ್ ಆಫರ್‌ಗಳನ್ನು ಕೊಡುತ್ತೇನೆ,’’ ಎಂದು ಸ್ವತಃ ಡಾಕ್ಟರ್ ಆಗಿರುವ ಜಿಲ್ಲಾಧಿಕಾರಿಯೊಬ್ಬರು ವೈದ್ಯರಿಗೆ ಮನವಿ ಮಾಡಿಕೊಂಡ ಅಪರೂಪದ ಘಟನೆ ಛತ್ತೀಸ್‌ಗಡದಲ್ಲಿ ನಡೆದಿದೆ.

ಇಲ್ಲಿನ ನಕ್ಸಲ್‌ಪೀಡಿತ ಪ್ರದೇಶವಾದ ಬಿಜಾಪುರದಲ್ಲಿ ಜಿಲ್ಲಾಸ್ಪತ್ರೆ ತೆರೆದರೂ, ಅಲ್ಲಿ ವೈದ್ಯರೇ ಬರುತ್ತಿಲ್ಲ. ಹೀಗಾಗಿ, ಜಿಲ್ಲಾಧಿಕಾರಿ ಡಾ ಅಯ್ಯಜ್ ಅವರು ಸಾಮಾಜಿಕ ಜಾಲತಾಣದ ಮೊರೆಹೋಗಿದ್ದಾರೆ. ಕೆಲಸ ಮಾಡಲಿಚ್ಛಿಸುವ ವೈದ್ಯರಿಗೆ ₹೩ ಲಕ್ಷದಷ್ಟು ವೇತನ, ವಾಸಿಸಲು ಐಷಾರಾಮಿ ಮನೆ, ವರ್ಗಾವಣೆ ಇಲ್ಲ, ಪತ್ನಿಗೂ ಕೆಲಸದ ಆಫರ್, ಮಕ್ಕಳಿಗೆ ಬೇಕಾದ ಶಾಲೆಯಲ್ಲಿ ಸೀಟು ಸೇರಿದಂತೆ ಭಾರಿ ಆಫರ್‌ಗಳನ್ನೂ ಘೋಷಿಸಿದ್ದಾರೆ.

ಆರೋಗ್ಯ ಕೇಂದ್ರಗಳು ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲೂ ತಜ್ಞ ವೈದ್ಯರ ಕೊರತೆ ಇರುವ ಕಾರಣ, ಸಾಮಾಜಿಕ ಜಾಲತಾಣಗಳಲ್ಲಿ , ಜಾಹೀರಾತುಗಳ ಮೂಲಕ ಖಾಸಗಿ ವೈದ್ಯಕೀಯ ಸಮುದಾಯಕ್ಕೆ ಉತ್ತಮ ವೇತನ ಸಹಿತ ಹಲವು ಸವಲತ್ತುಗಳನ್ನು ನೀಡಲಾಗುವುದೆಂದು ಮನವಿ ಮಾಡಿ ಸಂದೇಶ ಕಳುಹಿಸಿದ್ದಾರೆ.

ವೈದ್ಯರಾಗಿ ನಂತರ ಐಎಎಸ್ ಅಧಿಕಾರಿಯಾಗಿರುವ ಅಯ್ಯಜ್ ತಂಬೋಳಿ, ಮಂಗಳವಾರ ವ್ಯಾಟ್ಸ್‌ಆ್ಯಪ್ ಹಾಗೂ ಫೇಸ್‌ಬುಕ್ ಮೂಲಕ ಈ ಸಂದೇಶ ರವಾನಿಸಿದ್ದಾರೆ. ‘‘ನಾನು ಡಾ. ಅಯ್ಯಜ್, ಐಎಎಸ್ ಅಧಿಕಾರಿ. ಬಿಜಾಪುರದ ಜಿಲ್ಲಾಧಿಕಾರಿ. ನನ್ನ ಜಿಲ್ಲೆ ಹೆಚ್ಚಾಗಿ ಬುಡಕಟ್ಟು ನಿವಾಸಿಗಳಿರುವ, ದಟ್ಟ ಅರಣ್ಯ ಹಾಗೂ ನಕ್ಸಲ್ ಪೀಡಿತ ಪ್ರದೇಶ. ನಮ್ಮ ಜಿಲ್ಲೆಯ ಆಸ್ಪತ್ರೆಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವ ಉದ್ದೇಶವಿದೆ. ಸ್ನಾತಕೋತ್ತರ ವೈದ್ಯರು ಮತ್ತು ಎಂಬಿಬಿಎಸ್ ವೈದ್ಯರು ಬೇಕಾಗಿದ್ದಾರೆ. ತಜ್ಞ ವೈದ್ಯರಿಗೆ ಮಾಸಿಕ ₹೧.೨೦ರಿಂದ ೩ಲಕ್ಷ ವೇತನ, ಎಂಬಿಬಿಎಸ್ ವೈದ್ಯರಿಗೆ ₹೮೦-೯೦ ಸಾವಿರ ಸಂಬಳ, ಉತ್ತಮ ವಸತಿ, ವರ್ಗಾವಣೆ ಇಲ್ಲ, ಪತ್ನಿಗೆ ಬೇಕಿದ್ದಲ್ಲಿ ಜಿಲ್ಲೆಯ ಉತ್ತಮ ಸಂಸ್ಥೆಯಲ್ಲಿ ಕೆಲಸ, ಮಕ್ಕಳನ್ನು ಶಾಲೆಗೆ ಸೇರಿಸಲು ಸಹಾಯ, ರಾಯ್ಪುರ ಹಾಗೂ ವಿಶಾಖಪಟ್ಟಣಂಗೆ ಉತ್ತಮ ಸಾರಿಗೆ ಸಂಪರ್ಕ ವ್ಯವಸ್ಥೆ ನೀಡಲಾಗುವುದು,’’ ಎಂದು ತಿಳಿಸಿದ್ದಾರೆ.

ನಕ್ಸಲ್ ಸೇರಿದಂತೆ ಸಾಕಷ್ಟು ಸಮಸ್ಯೆಗಳಿರುವ ಕಾರಣ ಹೆಚ್ಚಿನ ವೇತನದ ಕೊಡುಗೆ ನೀಡಲಾಗಿದೆ. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಯೋಜನೆ ಹಾಗೂ ಜಿಲ್ಲಾ ಖನಿಜ ನಿಧಿಯಿಂದ ಹೆಚ್ಚುವರಿ ಆರ್ಥಿಕ ಸಹಕಾರ ಸಿಗಲಿದೆ,’’ ಎಂದೂ ಅವರು ಮಾಹಿಡಿ ನೀಡಿದ್ದಾರೆ.

(ಚಿತ್ರ ಕೇವಲ ಪ್ರಾತಿನಿಧಿಕ ಮಾತ್ರ)

Tags:


Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!