Top

ಚಾಂಪಿಯನ್ಸ್‌ ಟ್ರೋಫಿಗೆ ಬಹಿಷ್ಕಾರ ಹಾಕುವ ಎಚ್ಚರಿಕೆ ನೀಡಿದ ಬಿಸಿಸಿಐ...!


Asianet News Wednesday 07 September 2016 10:22 pm IST Cricket
ಚಾಂಪಿಯನ್ಸ್‌ ಟ್ರೋಫಿಗೆ ಬಹಿಷ್ಕಾರ ಹಾಕುವ ಎಚ್ಚರಿಕೆ ನೀಡಿದ ಬಿಸಿಸಿಐ...!
07 Sep

ನವದೆಹಲಿ(ಸೆ.07): ಪದೇ ಪದೇ ತನ್ನನ್ನು ಉಪೇಕ್ಷೆಯಿಂದ ನೋಡುತ್ತಿರುವ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ತನ್ನ ತಪ್ಪನ್ನು ತಿದ್ದಿಕೊಳ್ಳದೆ ಹೋದರೆ, ಇಂಗ್ಲೆಂಡ್‌ನಲ್ಲಿ ಮುಂದಿನ ವರ್ಷ ನಡೆಯಲಿರುವ ಪ್ರತಿಷ್ಠಿತ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯಿಂದ ಹಿಂದೆ ಸರಿಯಬೇಕಾಗುತ್ತದೆ ಎಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಎಚ್ಚರಿಸಿದೆ.

ಇತ್ತೀಚೆಗಷ್ಟೇ ದುಬೈನಲ್ಲಿ ನಡೆದಿದ್ದ ಐಸಿಸಿ ಹಣಕಾಸು ಸಮಿತಿ ಸಭೆಗೆ ಆಹ್ವಾನಿಸದೆ ತನ್ನನ್ನು ಅಪಮಾನಿಸಲಾಗಿದೆ ಎಂದು ಕ್ರುದ್ಧಗೊಂಡಿರುವ ಬಿಸಿಸಿಐ, ಐಸಿಸಿ ವಿರುದ್ಧ ಸಮರ ಸಾರಿದೆ.

‘‘ಪ್ರಮುಖ ನಿರ್ಣಯಗಳನ್ನು ತಳೆಯುವ ಹಣಕಾಸು, ವಾಣಿಜ್ಯ ಮತ್ತು ಮುಖ್ಯ ಕಾರ‍್ಯನಿರ್ವಾಹಕ ಸಮಿತಿಯಂಥ ಮಹತ್ವದ ಸಭೆಗೇ ನಮ್ಮನ್ನು ಆಹ್ವಾನಿಸದೆ ಬಿಸಿಸಿಐ ಅನ್ನು ಅಪಮಾನಿಸಲಾಗಿದೆ. ಒಂದೊಮ್ಮೆ ಈ ನೀತಿಯನ್ನು ತಿದ್ದಿಕೊಳ್ಳದೆ ಹೋದರೆ, ಜಾಗತಿಕ ನೆಲೆಯಲ್ಲಿ ಭಾರತದ ಕ್ರಿಕೆಟ್‌ ಹಿತಾಸಕ್ತಿಯನ್ನು ಹೇಗೆ ಕಾಯ್ದುಕೊಳ್ಳಬೇಕೆಂದು ನಮಗೆ ಚೆನ್ನಾಗಿ ಗೊತ್ತಿದೆ. ಇದರ ಮೊದಲ ಹೆಜ್ಜೆ ಎಂಬಂತೆ ಚಾಂಪಿಯನ್ಸ್‌ ಟ್ರೋಫಿಯನ್ನು ಬಹಿಷ್ಕರಿಸುವುದೂ ಆಗಿರಬಹುದು. ಇಷ್ಟಕ್ಕೂ ನಾವಿನ್ನೂ ಈ ಹಂತಕ್ಕೆ ಮುಟ್ಟಿಲ್ಲ. ಆದರೆ, ಐಸಿಸಿ ತನ್ನ ನಿಲುವನ್ನು ಸರಿಪಡಿಸಿಕೊಳ್ಳದೆ ಹೋದರೆ, ನಮ್ಮ ಮುಂದೆ ಒಂದಕ್ಕಿಂತ ವಿಪುಲ ಅವಕಾಶಗಳಿವೆ ಎಂಬುದನ್ನು ಅದು ಚೆನ್ನಾಗಿ ತಿಳಿದಿರಲಿ’’ ಎಂದು ಬಿಸಿಸಿಐ ಕಾರ‍್ಯದರ್ಶಿ ಅಜಯ್‌ ಶಿರ್ಕೆ ಕಟು ಮಾತುಗಳಲ್ಲಿ ಐಸಿಸಿಯನ್ನು ಎಚ್ಚರಿಸಿದ್ದಾರೆ ಎಂದು ‘ಇಂಡಿಯನ್‌ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ. ಅಂದಹಾಗೆ 2013ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಅಜೇಯ ತಂಡವಾಗಿ ಧೋನಿ ಪಡೆ ಟ್ರೋಫಿ ಗೆದ್ದು ಚರಿತ್ರೆ ಬರೆದಿತ್ತು.

ಈರ್ವರ ಮಧ್ಯೆ ಶೀತಲ ಸಮರ?

ಬಿಸಿಸಿಐ ಮತ್ತು ಐಸಿಸಿ ಮುಖ್ಯಸ್ಥರುಗಳಾದ ಅನುರಾಗ್‌ ಠಾಕೂರ್‌ ಹಾಗೂ ಶಶಾಂಕ್‌ ಮನೋಹರ್‌ ನಡುವೆ ಶೀತಲ ಸಮರವೇನಾದರೂ ಶುರುವಾಗಿದೆಯೇನೋ ಎಂಬಂತೆ ಇತ್ತೀಚಿನ ದಿನಗಳಲ್ಲಿ ಬಿಸಿಸಿಐ ಹಾಗೂ ಐಸಿಸಿ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದೆ. ಮೊದಲಿಗೆ ಭಾರತ, ಆಸ್ಪ್ರೇಲಿಯಾ ಮತ್ತು ಇಂಗ್ಲೆಂಡ್‌ ಪ್ರಾಬಲ್ಯದ ಬಿಗ್‌ ತ್ರೀಗೆ ತಿಲಾಂಜಲಿ ಇಟ್ಟಶಶಾಂಕ್‌ ಮನೋಹರ್‌ ಸಾರಥ್ಯದ ಐಸಿಸಿ, ಇತ್ತೀಚೆಗಷ್ಟೇ ಚಾಂಪಿಯನ್ಸ್‌ ಟ್ರೋಫಿಗಾಗಿ ವೇಲ್ಸ್‌ ಮತ್ತು ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿಗೆ 135 ಮಿಲಿಯನ್‌ ಡಾಲರ್‌ (ಅಂದಾಜು 89 ಕೋಟಿ) ಹಣ ನೀಡಿದರೆ, ಈ ಋುತುವಿನಾರಂಭದಲ್ಲಿ ವಿಶ್ವ ಟಿ20 ಆತಿಥ್ಯ ಹೊತ್ತಿದ್ದ ಭಾರತಕ್ಕೆ ಕೇವಲ 45 ಮಿಲಿಯನ್‌ ಡಾಲರ್‌ (ಅಂದಾಜು 29 ಕೋಟಿ)ನಷ್ಟೇ ನೀಡಿತ್ತು. ಇದನ್ನು ಬಿಸಿಸಿಐ ಪ್ರಶ್ನಿಸಿತ್ತಲ್ಲದೆ, ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿತ್ತು.

 



Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!