Top

ಜೊಕೊವಿಚ್‌ಗೆ ಮತ್ತೆ ಸುಲಭ ಜಯ


Asianet News Wednesday 07 September 2016 09:21 pm IST Other Sports
ಜೊಕೊವಿಚ್‌ಗೆ ಮತ್ತೆ ಸುಲಭ ಜಯ
07 Sep

ನ್ಯೂಯಾರ್ಕ್(ಸೆ.07): ವಿಶ್ವದ ಅಗ್ರ ಕ್ರಮಾಂಕಿತ ಆಟಗಾರ ಹಾಗೂ ಹಾಲಿ ಚಾಂಪಿಯನ್‌ ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಪುರುಷರ ಸಿಂಗಲ್ಸ್‌ನಲ್ಲಿ ಸೆಮಿಫೈನಲ್‌ ತಲುಪಿದ್ದಾರೆ. ವೃತ್ತಿಬದುಕಿನಲ್ಲಿ ಇದೇ ಮೊದಲ ಬಾರಿಗೆ ಅವರು ಹೆಚ್ಚು ಪ್ರಯಾಸವಿಲ್ಲದೆ ಗ್ರಾಂಡ್‌ಸ್ಲಾಮ್‌ ಟೂರ್ನಿಯೊಂದರ ಅಂತಿಮ ನಾಲ್ಕರ ಘಟ್ಟಕ್ಕೆ ಲಗ್ಗೆ ಹಾಕಿರುವುದು ಸ್ವತಃ ಜೊಕೊವಿಚ್‌ಗೂ ಅಚ್ಚರಿ ತರಿಸಿದೆ.

ಮಂಗಳವಾರ ತಡರಾತ್ರಿ ಇಲ್ಲಿನ ಫ್ಲಶಿಂಗ್‌ ಮೆಡೋಸ್‌ನಲ್ಲಿ ನಡೆದ ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ಫೈನಲ್‌ ಕಾದಾಟದಲ್ಲಿ ಫ್ರಾನ್ಸ್‌ನ ಜೋ ವಿಲ್ಫೆ್ರಡ್‌ ತ್ಸೊಂಗಾ ವಿರುದ್ಧ ನೊವಾಕ್‌ 6-3, 6-2ರ ಮುನ್ನಡೆಯಲ್ಲಿದ್ದಾಗ ಮೊಣಕಾಲು ನೋವಿಗೆ ಸಿಲುಕಿದ ತ್ಸೊಂಗಾ ಆಟವಾಡಲು ಸಾಧ್ಯವಾಗದೆ ಹಿಮ್ಮೆಟ್ಟಿದರು. ಮೊದಲ ಸುತ್ತಿನಲ್ಲಿ ಜೆರ್ಜಿ ಜಾನೊವಿಕ್‌ ವಿರುದ್ಧದ ನಾಲ್ಕು ಸೆಟ್‌ಗಳ ಆಟದಲ್ಲಿ ಜಯಿಸಿದ ನಂತರ ಎರಡನೇ ಸುತ್ತಿನಲ್ಲಿ ಜಿರಿ ವೆಸೆಲಿ, ಮೂರನೇ ಸುತ್ತಿನಲ್ಲಿ ಮಿಖಾಯಿಲ್‌ ಯೌಜನಿ ಗಾಯದಿಂದಾಗಿ ಪಂದ್ಯದಿಂದ ಹಿಂದೆ ಸರಿದಿದ್ದರಿಂದ ಜೊಕೊವಿಚ್‌ ಈ ಎರಡೂ ಪಂದ್ಯಗಳಿಂದಲೂ ಸುಲಭ ಗೆಲುವಿನೊಂದಿಗೆ ಮುಂದಿನ ಸುತ್ತಿಗೆ ಧಾವಿಸಿದ್ದರು.

ಇನ್ನು ಪುರುಷರ ಸಿಂಗಲ್ಸ್‌ ವಿಭಾಗದ ಮತ್ತೊಂದು ಕ್ವಾರ್ಟರ್‌ಫೈನಲ್‌ ಹಣಾಹಣಿಯಲ್ಲಿ ಫ್ರಾನ್ಸ್‌ ಆಟಗಾರ ಗೇಲ್‌ ಮೊಂಫಿಲ್ಸ್‌ ತಮ್ಮ ದೇಶದವರೇ ಆದ ಲೂಕಾಸ್‌ ಪೌಲಿಯನ್ನು 6-4, 6-3, 6-3 ನೇರ ಸೆಟ್‌ಗಳಿಂದ ಮಣಿಸಿ ಅಂತಿಮ ನಾಲ್ಕರ ಘಟ್ಟಕ್ಕೆ ಕಾಲಿಟ್ಟರು. ಇದೀಗ ಅವರು ಸೆಮಿಫೈನಲ್‌ನಲ್ಲಿ ಜೊಕೊವಿಚ್‌ ವಿರುದ್ಧ ಕಾದಾಡಲಿದ್ದಾರೆ.

ವೋಜ್ನಿಯಾಕಿ ಜಯದ ಓಟ

ಇನ್ನು ಮಹಿಳೆಯರ ವಿಭಾಗದಲ್ಲಿ ಡೆನ್ಮಾರ್ಕ್ ಆಟಗಾರ್ತಿ ಕೆರೋಲಿನ್‌ ವೋಜ್ನಿಯಾಕಿ ಸೆಮಿಫೈನಲ್‌ಗೆ ಧಾವಿಸಿದರು. ಕ್ವಾರ್ಟರ್‌ಫೈನಲ್‌ನಲ್ಲಿ ಲ್ಯಾಟ್ವಿಯಾದ ಅನಸ್ಟಾಸಿಯಾ ಸೆವಾಸ್ಟೋವಾ ವಿರುದ್ಧ 6-0, 6-2 ಸೆಟ್‌ಗಳಲ್ಲಿ ಗೆಲುವು ಪಡೆದ ವೋಜ್ನಿಯಾಕಿ ನಾಲ್ಕರ ಘಟ್ಟಕ್ಕೆ ಧಾವಿಸಿದರು. ಆರಂಭದಿಂದಲೇ ಪ್ರಭಾವಿ ಆಟವಾಡಿದ ವೋಜ್ನಿಯಾಕಿ, ಲ್ಯಾಟ್ವಿಯಾ ಆಟಗಾರ್ತಿಯ ಮೇಲೆ ಒತ್ತಡ ಹೇರಿದರು. ವೋಜ್ನಿಯಾಕಿಯ ಬಿರುಸಿನ ಆಟಕ್ಕೆ ಬಸವಳಿದ ಸೆವಾಸ್ಟೋವಾ ಮೊದಲ ಸೆಟ್‌ನಲ್ಲಂತೂ ಕೇವಲ ಒಂದೇ ಒಂದು ಗೇಮ್‌ ಅನ್ನೂ ಗೆಲ್ಲಲು ಸಾಧ್ಯವಾಗದೆ ಸುಲಭವಾಗಿ ಮಣಿದರು. ಇತ್ತ ಎರಡನೇ ಸೆಟ್‌ನಲ್ಲಿ ತುಸು ಪ್ರತಿರೋಧ ತೋರಿದರಾದರೂ, ಪ್ರಚಂಡ ಫಾಮ್‌ರ್‍ನಲ್ಲಿದ್ದ ವೋಜ್ನಿಯಾಕಿ ಅಂತಿಮವಾಗಿ ಡೆನ್ಮಾರ್ಕ್ ಆಟಗಾರ್ತಿ ಎದುರು ನಿಲ್ಲಲಾಗದೆ ಸೋಲಪ್ಪಿದರು. ಈ ಗೆಲುವಿನೊಂದಿಗೆ ವಿಶ್ವದ ಮಾಜಿ ನಂ.1 ಆಟಗಾರ್ತಿ ವೋಜ್ನಿಯಾಕಿ 2014ರ ಬಳಿಕ ಗ್ರಾಂಡ್‌ಸ್ಲಾಮ್‌ ಟೂರ್ನಿಯೊಂದರ ಸೆಮಿಫೈನಲ್‌ನಲ್ಲಿ ಆಡುತ್ತಿದ್ದಾರೆ. ಶುಕ್ರವಾರ ನಡೆಯಲಿರುವ ಅಂತಿಮ ನಾಲ್ಕರ ಘಟ್ಟದ ಪಂದ್ಯದಲ್ಲಿ ಆಕೆ ಜರ್ಮನಿಯ ಆ್ಯಂಜಲಿಕ್‌ ಕೆರ್ಬರ್‌ ವಿರುದ್ಧ ಸೆಣಸಲಿದ್ದಾರೆ. ಕೆರ್ಬರ್‌ ಇಟಲಿ ಆಟಗಾರ್ತಿ ರಾಬೆರ್ಟಾ ವಿನ್ಸಿ ವಿರುದ್ಧ 7-5, 6-0 ಸೆಟ್‌ಗಳ ಗೆಲುವು ಸಾಧಿಸಿದರು.

ಸಾನಿಯಾ ಸೋಲು

ಮಹಿಳೆಯರ ಡಬಲ್ಸ್‌ ವಿಭಾಗದಲ್ಲಿ ಕ್ವಾರ್ಟರ್‌ಫೈನಲ್‌ ತಲುಪಿದ್ದ ಭಾರತದ ಸ್ಟಾರ್‌ ಆಟಗಾರ್ತಿ ಸಾನಿಯಾ ಮಿರ್ಜಾ ಹೋರಾಟಕ್ಕೆ ತೆರೆಬಿದ್ದಿದೆ. ಮಂಗಳವಾರ ತಡರಾತ್ರಿ ನಡೆದ ಅಂತಿಮ ಎಂಟರ ಘಟ್ಟದ ಪಂದ್ಯದಲ್ಲಿ ಸಾನಿಯಾ ಹಾಗೂ ಅವರ ಜತೆಯಾಟಗಾರ್ತಿ ಬಾರ್ಬೊರಾ ಸ್ಟ್ರಿಕೊವಾ ಫ್ರಾನ್ಸ್‌ ಜೋಡಿ ಕೆರೋಲಿನಾ ಗಾರ್ಸಿಯಾ ಮತ್ತು ಕ್ರಿಸ್ಟಿನಾ ಮ್ಲೆಡೆನೋವಿಕ್‌ ವಿರುದ್ಧ 6-7 (3/7) ಮತ್ತು 1-6 ಸೆಟ್‌ಗಳಿಂದ ಸೋಲನುಭವಿಸುವುದರೊಂದಿಗೆ ಯುಎಸ್‌ ಓಪನ್‌ನಲ್ಲಿ ಭಾರತದ ಸವಾಲೂ ಅಂತ್ಯಕಂಡಿತು.

ಮೊದಲ ಸೆಟ್‌ನಲ್ಲಿ ತೀವ್ರತರ ಪೈಪೋಟಿ ಕಂಡುಬಂದು ಸೆಟ್‌ ಟೈಬ್ರೇಕರ್‌ಗೆ ಜಾರಿತಾದರೂ, ಫ್ರಾನ್ಸ್‌ ಜೋಡಿ ಎಚ್ಚರಿಕೆಯಿಂದ ಸೆಣಸಿ ಸೆಟ್‌ ವಶಕ್ಕೆ ಪಡೆದರೆ, ಇತ್ತ ಎರಡನೇ ಸೆಟ್‌ನಲ್ಲಂತೂ ಸಾನಿಯಾ ಜೋಡಿ ನೀರಸ ಆಟವಾಡಿ ಫ್ರಾನ್ಸ್‌ ಆಟಗಾರ್ತಿಯರಿಗೆ ಮಂಡಿಯೂರಿತು.Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!