Top

ಬೆಳ್ಳಿ ಗೆಲ್ಲಿಸಿದವ ಬೆಳ್ಳಿ ತೆರೆ ಮೇಲೆ!


Asianet News Saturday 27 August 2016 05:17 pm IST Specials
ಬೆಳ್ಳಿ ಗೆಲ್ಲಿಸಿದವ ಬೆಳ್ಳಿ ತೆರೆ ಮೇಲೆ!
27 Aug

ಬೆಂಗಳೂರು(ಆ.27): ರಿಯೋ ಒಲಿಂಪಿಕ್‌ನಲ್ಲಿ ಬೆಳ್ಳಿ ಗೆದ್ದ ಭಾರತದ ಬಂಗಾರ ಪಿವಿ ಸಿಂಧು ಇನ್ನೂ ಕುತೂಹಲದ ಬಿಂದು. ಸಿಂಧುವಿನ ಕಾರಣಕ್ಕಾಗಿ ಈಗೊಂದು ಸಿನಿಮಾಕ್ಕೆ ಮರುಜೀವ ಸಿಕ್ಕಿದೆ. ಸಿಂಧುವನ್ನು ಬೆಳ್ಳಿ ತೀರಕೆ ಕೊಂಡೊಯ್ದ ಗುರು ಪುಲ್ಲೇಲ ಗೋಪಿಚಂದ್ ಮೇಲೆ ಬಯೋಪಿಕ್ ಮೂಡಿಬರುತ್ತಿದೆ. ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಬ್ಯಾಡ್ಮಿಂಟನ್ ಗುರುವಿನ ಬದುಕಿನ ಹಾದಿ ಚಿತ್ರಣಗೊಳ್ಳಲಿದೆ. ಈ ಚಿತ್ರದ ನಿರ್ದೇಶಕರು ಪ್ರವೀಣ್ ಸತ್ತಾರು.

18 ತಿಂಗಳ ಹಿಂದೆಯೇ ಪ್ರವೀಣ್ ಸ್ಕ್ರಿಪ್ಟ್ ತಯಾರಿಗೆ ಕೈಹಾಕಿದ್ದಾರೆ. ಗೋಪಿಚಂದ್ ಮಾತ್ರ ಸಿನಿಮಾ ಬಗ್ಗೆ ಆಸಕ್ತಿ ತೋರಿರಲಿಲ್ಲ. ‘ಕತೆ ಹೇಳುತ್ತೇನೆ, ಇಷ್ಟು ಬೇಗ ಸಿನಿಮಾ ಬೇಡ’ ಎನ್ನುತ್ತಾ ಕಾಲ ದೂಡುತ್ತಲೇ ಇದ್ದರು. ರಿಯೋ ಯಶಸ್ಸಿನ ಹಿನ್ನೆಲೆಯಲ್ಲಿ ಕುಟುಂಬದವರ, ಗೆಳೆಯರ, ಅಭಿಮಾನಿಗಳ ಒತ್ತಡಕ್ಕೆ ಮಣಿದು ಗೋಪಿಚಂದ್ ಇದೀಗ ಸಿನಿಮಾಕ್ಕೆ ಒಪ್ಪಿಗೆ ನೀಡಿದ್ದಾರಂತೆ.

ಸಿನಿಮಾದಲ್ಲಿ ಏನಿರುತ್ತೆ?

ಈ ಚಿತ್ರದ ಶೂಟಿಂಗ್ ಬೆಂಗಳೂರು, ಬರ್ಮಿಂಗ್‌ಹ್ಯಾಮ್, ಕೌಲಾಲಂಪುರ, ಹೈದರಾಬಾದ್‌ನಲ್ಲಿ ನಡೆಯಲಿದೆ. ಆರಂಭದ ದಿನಗಳಲ್ಲಿ ಕೋಚ್ ಎಸ್‌ಎಂ ಆರೀಫ್ ಮಾರ್ಗದರ್ಶನದಲ್ಲಿ ಬೆಳೆದ ಗೋಪಿಚಂದ್, ನಂತರ ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಗಂಗೂಲಿ ಪ್ರಸಾದ್ ಗರಡಿಯಲ್ಲೂ ಪಳಗುತ್ತಾರೆ. ನಂತರ ಗೋಪಿಚಂದ್ ಎಂಬ ವ್ಯಕ್ತಿತ್ವಕ್ಕೆ ಹೊಳಪು ತುಂಬಿದ್ದು ಪ್ರಕಾಶ್ ಪಡುಕೋಣೆ. ಬರ್ಮಿಂಗ್ ಹ್ಯಾಮ್‌ನಲ್ಲಿ ನಡೆಯುವ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ, ಕೌಲಾಲಂಪುರದಲ್ಲಿನ ಕಾಮನ್‌ವೆಲ್ತ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಕಂಚು ಗೆಲ್ಲುವ ಗೋಪಿಚಂದ್ ಒಳ್ಳೆಯ ಫಾರ್ಮ್‌ನಲ್ಲಿರುವಾಗಲೇ ಗಾಯಗೊಂಡು ಪ್ರೀತಿಯ ಆಟಕ್ಕೆ ಗುಡ್‌ಬೈ ಹೇಳುವ ಪರಿಸ್ಥಿತಿ ಬರುತ್ತೆ. ಅದಕ್ಕೂ ಮಿಗಿಲಾಗಿ ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಗೋಪಿಚಂದ್ ಆಡುವಾಗ ಯಾವ ಕೋಚ್ ಕೂಡ ಇದ್ದಿರಲಿಲ್ಲ. ತನ್ನ ಸ್ಥಿತಿ ಬೇರಾರಿಗೂ ಬರುವುದು ಬೇಡವೆಂದು ಬ್ಯಾಡ್ಮಿಂಟನ್ ಅಕಾಡೆಮಿ ಸ್ಥಾಪನೆಗೆ ಅವರು ಹೋರಾಡಿ ಯಶಸ್ವಿಯಾಗುತ್ತಾರೆ. ಅಲ್ಲಿ ಶಿಷ್ಯರನ್ನು ಪಳಗಿಸಿ, ಒಲಿಂಪಿಕ್ಸ್‌ನತ್ತ ಕಳುಹಿಸುವ ಸಾಹಸಗಳೆಲ್ಲ ಈ ಚಿತ್ರದಲ್ಲಿರುತ್ತವೆ.

ಪಿವಿ ಸಿಂಧು ಇರ್ತಾಳೆ!

ಪಿವಿ ಸಿಂಧು ಜೊತೆಗೆ ಸೈನಾ ನೆಹ್ವಾಲ್‌ಗೂ ಸಾಧನೆಯ ಶಿಖರ ತೋರಿಸಿದವರು ಗೋಪಿಚಂದ್. ಆದರೆ, ಈ ಚಿತ್ರದಲ್ಲಿ ಸೈನಾ ನಟಿಸುವುದಿಲ್ಲ ಎನ್ನಲಾಗ್ತಿದೆ. ಪಿವಿ ಸಿಂಧು ಒಂದು ಪಾತ್ರದಲ್ಲಿ ಬಂದುಹೋಗಲು ಒಪ್ಪಿಕೊಂಡಿದ್ದಾರೆಂಬ ಮಾಹಿತಿಯಿದೆ. ಪಿ ಕಶ್ಯಪ್, ಜ್ವಾಲಾಗುಟ್ಟಾ ಅವರ ಪಾತ್ರವನ್ನು ಇಲ್ಲಿ ಸೃಷ್ಟಿಸಲಾಗಿದೆ.

ಒಂದೇ ಒಂದು ಕಂಡೀಶನ್

‘ಸಿನಿಮಾ ಮಾಡುವುದೇ ಆದರೆ, ನನ್ನ ಪಾತ್ರವನ್ನು ಸುಧೀರ್ ಬಾಬು ನಿರ್ವಹಿಸಬೇಕು. ಬೇರೆ ಯಾರೇ ಹೀರೋ ಆದರೂ ನಾನು ಒಪ್ಪುವುದಿಲ್ಲ’- ಇದು ನಿರ್ದೇಶಕರಿಗೆ ಗೋಪಿಚಂದ್ ಹಾಕಿರುವ ಖಡಕ್ ಕಂಡೀಶನ್. ಯಾರೀ ಸುಧೀರ್ ಬಾಬು? ‘ಪ್ರಿನ್ಸ್’ ಮಹೇಶ್ ಬಾಬು ಅವರ ಸೋದರ ಸಂಬಂಧಿ. ಇತ್ತೀಚೆಗೆ ತೆರೆಕಂಡ ‘ಬಾಘಿ’ಯಲ್ಲಿ ವಿಲನ್ ಆಗಿ ನಟಿಸಿರುವ ಸುಧೀರ್, ಆರೇಳು ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ.

ಯಾಕೆ ಸುಧೀರೇ ಆಗಬೇಕು?

ತೆಲುಗು ಸಿನಿಮಾ ಲೋಕಕ್ಕೆ ಕಾಲಿಡುವ ಮುನ್ನ ಸುಧೀರ್ ಬ್ಯಾಡ್ಮಿಂಟನ್ ಆಟಗಾರ ಆಗಿದ್ದರು. ಪುಲ್ಲೇಲ ಗೋಪಿಚಂದ್ ಜೊತೆಗೆ ಹಲವು ಡಬಲ್ಸ್ ಪಂದ್ಯಗಳಲ್ಲಿ ಸುಧೀರ್ ಒಳ್ಳೆಯ ಪ್ರದರ್ಶನ ಕೊಟ್ಟಿದ್ದರು. ಬ್ಯಾಡ್ಮಿಂಟನ್ ಗ್ರ್ಯಾಮರ್ ಗೊತ್ತಿರುವ ಕಾರಣಕ್ಕೆ ತನ್ನ ಪಾತ್ರಕ್ಕೆ ಸುಧೀರ್ ಸೂಕ್ತ ಎಂಬ ಆಕಾಂಕ್ಷೆ ಗೋಪಿಚಂದ್‌ರದ್ದು. ಈ ಚಿತ್ರದಲ್ಲಿ ಗೋಪಿಚಂದ್ ಅವರ ಪ್ರೇಮಕತೆಯನ್ನೂ ಹೇಳಲಾಗುತ್ತದೆ. ಅಂದುಕೊಂಡಂತೆ ಆದರೆ ಈ ವರ್ಷದ ಅಂತ್ಯ ಅಥವಾ 2017ರ ಆರಂಭದಲ್ಲಿ ಗೋಪಿಚಂದ್ ಬಯೋಪಿಕ್ ಟಾಕೀಸಿಗೆ ಬರಲಿದೆ.Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!